ರಾಜ್ಯದಲ್ಲಿ ಸಚಿವರಾಗಿ ನೂತನ 10 ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದು ಇವರಿಗೆಲ್ಲಾ ಖಾತೆ ಹಂಚಿಕೆ ಆಗಲಿದೆ. ಆದರೆ ಖಾತೆ ಹಂಚಿಕೆಯಲ್ಲಿಯೂ ಕೆಲ ಕಗ್ಗಂಟುಗಳಾಗಿವೆ.
ಬೆಂಗಳೂರು [ಫೆ.08]: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಘೋಷಿಸಿದ್ದಂತೆ ಶನಿವಾರ ಸಂಜೆಯೊಳಗಾಗಿ ನೂತನ ಸಚಿವ ರಿಗೆ ಖಾತೆಗಳ ಹಂಚಿಕೆಯಾಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.
ಶನಿವಾರ ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದ್ದು, ಭಾನುವಾರದಿಂದ ಬಿಜೆಪಿ ರಾಷ್ಟ್ರೀಯ ನಾಯಕರು ತುಸು ನಿರಾಳರಾಗಬಹುದು. ವರಿಷ್ಠರ ಜೊತೆ ಚರ್ಚಿಸಿಯೇ ಖಾತೆಗಳನ್ನು ಹಂಚಿಕೆ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧರಿಸಿದಲ್ಲಿ ದೆಹಲಿಗೆ ಸೋಮವಾರದ ನಂತರ ತೆರಳುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
undefined
ಮುಖ್ಯಮಂತ್ರಿಗಳ ಆಪ್ತರ ಪ್ರಕಾರ, ಯಡಿಯೂರಪ್ಪ ಅವರು ದೆಹಲಿಗೆ ಹೋಗಬೇಕಾದ ಅಗತ್ಯವೂ ಇಲ್ಲ. ದೂರವಾಣಿ ಮೂಲಕವೇ ವರಿಷ್ಠರ ಜೊತೆ ಮಾತನಾಡಿ ಖಾತೆಗಳ ಹಂಚಿಕೆ ಸಂಬಂಧ ಸಲಹೆ- ಸೂಚನೆಗಳನ್ನು ಪಡೆಯಬಹುದು ಎನ್ನಲಾಗಿದೆ. ಈ ನಡುವೆ, ಯಡಿಯೂರಪ್ಪ ಅವರಿಗೆ ಶನಿವಾರ ಮತ್ತು ಭಾನುವಾರ ವಿವಿಧ ಜಿಲ್ಲೆಗಳ ಪ್ರವಾಸ ಕಾರ್ಯಕ್ರಮ ನಿಗದಿಯಾಗಿದೆ. ಭಾನುವಾರ ತಡರಾತ್ರಿ ಬೆಂಗಳೂರಿಗೆ ವಾಪಸಾಗಲಿದ್ದಾರೆ. ಒಂದು ವೇಳೆ ದೆಹಲಿಗೆ ಹೋಗುವುದು ಅನಿವಾರ್ಯವಾದಲ್ಲಿ ಸೋಮವಾರದ ನಂತರ ಹೋಗಬಹುದು ಎಂದು ಮೂಲಗಳು ತಿಳಿಸಿವೆ.
ಮುಂದಿನ ಸಾರಿಯೂ ಅಧಿಕಾರಕ್ಕೇರಲು ಬಿಎಸ್‌ವೈಗೆ ಹಿರಿಯ ಶಾಸಕ ಕೊಟ್ಟ ಮಾಸ್ಟರ್ ಪ್ಲಾನ್!..
ಇದೇ ವೇಳೆ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ಗುರುವಾರ ಸಂಪುಟ ವಿಸ್ತರಣೆ ಬೆನ್ನಲ್ಲೇ ದೆಹಲಿಗೆ ತೆರಳಿ ಶುಕ್ರವಾರ ಮಧ್ಯಾಹ್ನ ವಾಪಸಾಗಿದ್ದರು. ಖಾತೆಗಳ ಹಂಚಿಕೆ ಸಂಬಂಧ ಪಕ್ಷದ ವರಿಷ್ಠರ ಜೊತೆ ಮಾತುಕತೆ ನಡೆಸಲು ತಂದೆಯ ಪರವಾಗಿ ಹೋಗಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಇದನ್ನು ವಿಜಯೇಂದ್ರ ಅವರ ಆಪ್ತರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಪೂರ್ವನಿಗದಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರು ದೆಹಲಿಗೆ ತೆರಳಿದ್ದರು. ಖಾತೆಗಳ ಹಂಚಿಕೆಗೂ ಮತ್ತು ದೆಹಲಿ ಭೇಟಿಗೂ ಯಾವುದೇ ಸಂಬಂಧವಿಲ್ಲ ಎಂದು ಅವರ ಆಪ್ತರು ಸ್ಪಷ್ಟಪಡಿಸಿದರು. ಕೆಲವು ಪ್ರಮುಖ ಖಾತೆಗಳನ್ನು ಹೊರತುಪಡಿಸಿದರೆ ಇನ್ನುಳಿದ ಹೆಚ್ಚುವರಿ ಖಾತೆಗಳನ್ನು ನೂತನ ಸಚಿವರಿಗೆ ಹಂಚಿಕೆ ಮಾಡಲು ಯಾವುದೇ ಸಮಸ್ಯೆಯಿಲ್ಲ. ಈ ಬಗ್ಗೆ ಯಡಿಯೂರಪ್ಪ ಅವರು ಶನಿವಾರ ಬೆಳಗ್ಗೆ ತಮ್ಮ ಆಪ್ತರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಇತ್ಯರ್ಥವಾದಲ್ಲಿ ಸಂಜೆ ವೇಳೆಗೆ ಖಾತೆಗಳನ್ನು ಹಂಚಿಕೆ ಮಾಡುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ