ಕಾಂಗ್ರೆಸ್ ಮಾಡಿದ ಒಂದು ಟ್ವೀಟ್‌ನಿಂದ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಬದಲಾವಣೆ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಇದಕ್ಕೆ ಬಿಎಸ್ ಯಡಿಯೂಪ್ಪ ಖಡಕ್ ಅಗಿ ಒಂದು ಮಾತನ್ನ ಹೇಳಿದ್ದಾರೆ.
ಬೆಂಗಳೂರು, (ಆಗಸ್ಟ್.10): ಕರ್ನಾಟಕದಲ್ಲಿ ಸಿಎಂ ಬದಲಾವಣೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಆರೋಪ-ಪ್ರತ್ಯಾರೋಪ ಜೋರಾಗಿದೆ.
ಸಿಎಂ ಬದಲಾವಣೆಗೆ ಕಾಂಗ್ರೆಸ್ ನಾಯಕರಿಗೆ ಬಿಜೆಪಿಗರು, ಶಾಸಕರು, ಸಚಿವರುಗಳು ಕೌಂಟರ್ ಅಟ್ಯಾಕ್ ಮಾಡುತ್ತಿದ್ದಾರೆ. ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಖಡಕ್ ಆಗಿ ಹೇಳಿದ್ದಾರೆ. ಅಲ್ಲದೇ ಸಚಿವ ಸಂಪುಟದ ಬಗ್ಗೆಯೂ ಮಹತ್ವದ ಹೇಳಿಕೆ ನೀಡಿದ್ದಾರೆ.
ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ ನಾಯಕರು ಶೂರರು; CM ಬದಲಾವಣೆಗೆ ಶ್ರೀರಾಮುಲು ಪ್ರತಿಕ್ರಿಯೆ
ಇಂದು(ಬುಧವಾರ) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ವೈ, ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಯಾರೂ ಚರ್ಚೆ ಮಾಡಬಾರದು. ಇದನ್ನು ಇಲ್ಲಿಗೇ ನಿಲ್ಲಿಸಿ ಎಂದು ಖಡಕ್ ಆಗಿ ಹೇಳಿದರು.
ಸಿಎಂ ಬದಲಾವಣೆ ವಿಚಾರದಲ್ಲಿ ಸತ್ಯಾಂಶ ಇಲ್ಲ. ಬೊಮ್ಮಾಯಿ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ. ಯಾರೊಬ್ಬರ ಅದರ ಬಗ್ಗೆ ಚರ್ಚೆ ಮಾಡಬಾರದು, ಇದನ್ನು ಇಲ್ಲಿಗೆ ನಿಲ್ಲಿಸಬೇಕು ಎಂದು ಮನವಿ ಮಾಡಿಕೊಂಡಿದ್ದು, ಅಮಿತ್ ಷಾ ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ ಮಾಡಿದ್ರು ಅಷ್ಟೇ. ಆದರೆ ನಾಯಕತ್ವದ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಿರ್ಧಾರ ಆಗುತ್ತದೆ. ಇದಕ್ಕೆ ಹೈಕಮಾಂಡ್ ನಾಯಕರು ಕೂಡ ಸಹಕಾರ ಕೊಡ್ತಾರೆ. ಶಿಕಾರಿಪುರದಲ್ಲಿ ವಿಜಯೇಂದ್ರ ಸ್ಪರ್ಧೆ ಬಗ್ಗೆ ಹೇಳಿದ್ದೇನೆ. ಅಂತಿಮವಾಗಿ ಅವರ ಸ್ಪರ್ಧೆ ಬಗ್ಗೆ ತೀರ್ಮಾನ ಮಾಡೋದು ಹೈಕಮಾಂಡ್. ಆದರೆ ಶಿಕಾರಿಪುರ ಸ್ಪರ್ಧೆ ಬಗ್ಗೆ ಅಮಿತ್ ಶಾ ಜೊತೆ ನಾನು ಏನು ಚರ್ಚೆ ಮಾಡಿಲ್ಲ ಎಂದು ಹೇಳಿದರು.
ಯಾರು ಸಿಎಂ ಕನಸು ಕಾಣ್ತಿದ್ದಾರೋ ಅವರ ಭ್ರಮೆ ಅಷ್ಟೇ. ಯಾವುದೇ ಕಾರಣಕ್ಕೂ ಅವರ ಆಸೆ ಈಡೇರುವುದಿಲ್ಲ. ನೂರಕ್ಕೂ ನೂರರಷ್ಟು ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿಎಂ ಬದಲಾವಣೆ ಚರ್ಚೆ ಇಲ್ಲಿಗೆ ನಿಲ್ಲಿಸಿ ಎಂದು ಹೇಳಿರುವ ಯಡಿಯೂರಪ್ಪ ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ ಎನ್ನುವ ಸುಳಿವು ಕೊಟ್ಟಿರುವುದು ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.