
ಬೆಂಗಳೂರು (ಅ.12): ‘ದಿವಂಗತ ಅನಂತಕುಮಾರ್ ಅವರ ಕಿವಿಯಲ್ಲಿ ಮುಖ್ಯಮಂತ್ರಿ ಆಗಬೇಕಾದರೆ ಕಪ್ಪ ಕೊಡಬೇಕಾಗುತ್ತದೆ. ಸುಮ್ಮನೆ ಆಗಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದರು. ಅದರ ವಿಡಿಯೋ ಸಾಕ್ಷ್ಯ ಕೂಡ ಇದೆ. ಬಿಜೆಪಿಯವರು ಮೊದಲು ಅದರ ಬಗ್ಗೆ ಉತ್ತರ ಕೊಡಲಿ’ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ವೀರೇಂದ್ರ ಪಪ್ಪಿ ಅವರು ಸಚಿವ ಸ್ಥಾನ ಪಡೆಯಲು ಅಕ್ರಮ ಹಣ ಗಳಿಕೆ ಮಾಡಿದ್ದರು ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ‘ಬಿ.ವೈ.ವಿಜಯೇಂದ್ರ ಅವರು ಅಮಿತ್ ಶಾ ಅವರಿಗೆ ಬಿಟ್ ಕಾಯಿನ್ ನೀಡಿದ್ದಾರೆ. ಹೀಗಾಗಿಯೇ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರೆದಿದ್ದಾರೆ. ಆರ್.ಅಶೋಕ್ ಅವರು ಪ್ರತಿಪಕ್ಷ ನಾಯಕರಾಗಿ ಮುಂದುವರೆಯಲು ನೂರು ಕೋಟಿ ನೀಡಿದ್ದಾರೆ ಎಂದು ನಾನು ಹೇಳುತ್ತೇನೆ. ಬಿಜೆಪಿಯವರು ಗಾಳಿಯಲ್ಲಿ ಗುಂಡು ಹೊಡೆಯುವುದು ಬಿಟ್ಟು ಪುರಾವೆ ನೀಡಲಿ’ ಎಂದು ಆಗ್ರಹಿಸಿದರು.
ವಿಜಯೇಂದ್ರ ಅವರು ದುಬೈಗೆ ಹೋಗಿ ಬರುತ್ತಿದ್ದ ಬಗ್ಗೆ ಯತ್ನಾಳ್ ಅವರು ಹೇಳಿದ್ದರು. ನಾವು ಹೇಳಿಲ್ಲ. ವೀರೇಂದ್ರ ಪಪ್ಪಿ ಅವರು ಜಾರಿ ನಿರ್ದೇಶನಾಲಯದ ವಶದಲ್ಲಿಯೇ ಇದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ದಾಖಲೆ ತರಿಸಿ ಆರೋಪ ಸಾಬೀತುಪಡಿಸಿ’ ಎಂದು ಸವಾಲು ಹಾಕಿದರು.
ಬಿಜೆಪಿಯವರಿಗೆ ಸಾಮಾನ್ಯ ಜ್ಞಾನವಿಲ್ಲ: ಸಂಚಾರ ದಟ್ಟಣೆ ಸಮಸ್ಯೆ ಕುರಿತ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಉದ್ಯೋಗ ಹುಡುಕಿಕೊಂಡು ದೇಶಾದ್ಯಂತ ಲಕ್ಷಾಂತರ ಜನ ಬರುತ್ತಿದ್ದಾರೆ. ಇದರಿಂದಾಗಿ ನಗರದ ಸಾರಿಗೆ, ಟ್ರಾಫಿಕ್ ಜಾಮ್ ಮತ್ತು ಜನದಟ್ಟಣೆ ಸಮಸ್ಯೆಗಳು ಹೆಚ್ಚಾಗುತ್ತಿವೆ. ಬಿಜೆಪಿಯವರಿಗೆ ಕಾಮನ್ ಸೆನ್ಸ್ ಇದ್ದರೆ, ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಕೊಡಬೇಕು. ಆದರೆ, ಅವರಿಗೆ ಸಾಮಾನ್ಯ ಪ್ರಜ್ಞೆ ಇಲ್ಲದಿದ್ದರೆ ನಾನೇನು ಮಾಡಲಿ? ಎಂದು ಪ್ರಶ್ನಿಸಿದರು.
ಸಿಎಂ ಡಿನ್ನರ್‌ಗೆ ಹೋಗಿ ನಾಟಿ ಕೋಳಿ ತಿಂದು ಬರುತ್ತೇನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೋಜನಕೂಟಕ್ಕೆ ಕರೆದಿದ್ದಾರೆ. ಒಳ್ಳೆಯ ನಾಟಿ ಕೋಳಿ ಊಟ ಮಾಡಿಸುತ್ತಾರೆ. ಸೋಮವಾರ ಆದರೂ ಪರವಾಗಿಲ್ಲ, ನಾಟಿ ಕೋಳಿ ಮಾಡಿಸಿದ್ದರೆ ಊಟ ಮಾಡುತ್ತೇನೆ. ಇಲ್ಲದಿದ್ದರೆ ಸೊಪ್ಪು ಸಾರು ಊಟವಾದರೂ ಸರಿ. ನಮ್ಮ ಮುಖ್ಯಮಂತ್ರಿ ಊಟಕ್ಕೂ ಕರೆಯಬಾರದು ಎಂದರೆ ಹೇಗೆ? ಇದರಲ್ಲಿ ವಿಶೇಷವೇನೂ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಹಾದಿ ಬೀದಿಯಲ್ಲಿ ಅಧಿಕಾರ ಹಂಚಿಕೆ, ಸಂಪುಟ ಪುನಾರಚನೆ ಬಗ್ಗೆ ಮಾತಾಡಿದರೆ ಮಾನ್ಯತೆ ಇಲ್ಲ. ಬಹಿರಂಗವಾಗಿ ಮಾತನಾಡುವವರಿಗೆ ಈಗಾಗಲೇ ನೋಟೀಸ್ ಕೊಟ್ಟಿದೆ. ಇನ್ನೂ ಕೊಡುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.