ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರಿದ್ರೆ ಕ್ರಮ: ಸಂಸದ ಜಗದೀಶ್ ಶೆಟ್ಟರ್

Published : Oct 11, 2025, 11:59 PM IST
Jagadish Shettar

ಸಾರಾಂಶ

ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳು ಜಿಲ್ಲಾಮಟ್ಟದಲ್ಲಿ ಸಮಪರ್ಕವಾಗಿ ಅನುಷ್ಠಾನವಾಗಬೇಕಿದೆ. ಅಧಿಕಾರಿಗಳು ಯೋಜನೆಗಳ ಅನುಷ್ಠಾನಕ್ಕೆ ವಿಶೇಷ ಕಾಳಜಿ ವಹಿಸಬೇಕು ಎಂದು ಬೆಳಗಾವಿ ಲೋಕಸಭಾ ಸಂಸದ ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದರು.

ಬೆಳಗಾವಿ (ಅ.11): ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳು ಜಿಲ್ಲಾಮಟ್ಟದಲ್ಲಿ ಸಮಪರ್ಕವಾಗಿ ಅನುಷ್ಠಾನವಾಗಬೇಕಿದೆ. ಅಧಿಕಾರಿಗಳು ಯೋಜನೆಗಳ ಅನುಷ್ಠಾನಕ್ಕೆ ವಿಶೇಷ ಕಾಳಜಿ ವಹಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ತೋರಿದರೆ ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಬೆಳಗಾವಿ ಲೋಕಸಭಾ ಸಂಸದ ಜಗದೀಶ್ ಶೆಟ್ಟರ್ ಎಚ್ಚರಿಕೆ ನೀಡಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ 2025-26ನೇ ಸಾಲಿನ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಜಿಲ್ಲಾ ಮಟ್ಟದಲ್ಲಿ ಇನ್ನೂ ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು. ನಗರದಲ್ಲಿ ಕೆರೆ ಮತ್ತು ಉದ್ಯಾನವನಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಅನುದಾನ ಕಾಲಕಾಲಕ್ಕೆ ಬಿಡುಗಡೆಯಾದರೂ ಸಹ ಪಾಲಿಕೆಯಿಂದ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ದೂರಿದರು. ಕಾಲಮಿತಿಯೊಳಗೆ ಕಾಮಗಾರಿಗಳು ಪೂರ್ಣಗೊಳಿಸದೆ ಅಭಿವೃದ್ಧಿ ಕುಂಠಿತವಾಗುತ್ತಿವೆ. ನಗರ ಅಭಿವೃದ್ಧಿಗೆ ಪಾಲಿಕೆ ಮೇಲೆ ಜವಾಬ್ದಾರಿ ಹೆಚ್ಚಿರುವುದರಿಂದ ಪಾಲಿಕೆ ಅಧಿಕಾರಿಗಳು ನಿರಂತರ ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕು. ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ಹಿಂದೆ ಉಳಿದಿವೆ. ಕಾಮಗಾರಿಗಳನ್ನು ಕಾಲಾವಧಿಯೊಳಗೆ ಪೂರ್ಣಗೊಳಿಸದೆ ಅಧಿಕಾರಿಗಳು ವಿನಾಕಾರಣ ನೆಪವೊಡ್ಡಬಾರದು ಎಂದು ಎಚ್ಚರಿಕೆ ನೀಡಿದರು.

ನಗರದಲ್ಲಿರುವ ಕರೆ ಮತ್ತು ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಲು ಕ್ರಿಯಾ ಯೋಜನೆ ರೂಪಿಸಿ ಆದಷ್ಟು ತ್ವರಿತವಾಗಿ ಟೆಂಡರ್ ಕರೆದು ಕೂಡಲೇ ಪ್ರಕ್ರಿಯೆ ಪೂರ್ಣಗೊಳಿಸಬೇಕು. ನಗರದಲ್ಲಿ ಎಷ್ಟೋ ಜನರಿಗೆ ನಿವೇಶನ ಮತ್ತು ಮನೆಗಳಿಲ್ಲ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ ಸಲ್ಲಿಸಬೇಕು. ಸ್ವಚ್ಛ ಭಾರತ ಯೋಜನೆಯಡಿ ನಗರದ ಸ್ವಚ್ಛತೆಗೆ ಆದ್ಯತೆ ಕೊಟ್ಟು ರಸ್ತೆಗಳ ಸ್ವಚ್ಚತೆ ಕೈಗೊಂಡು ಅಗತ್ಯ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.

ಜಿಲ್ಲೆಯ ಹಿಂದುಳಿದ ತಾಲೂಕುಗಳಲ್ಲಿ ಬಯಲು ಶೌಚಾಲಯ ಈವರೆಗೂ ಇದೆ. ಅಧಿಕಾರಿಗಳು ಅಂತಹ ಗ್ರಾಮಗಳನ್ನು ಗುರುತಿಸಿ ಜನ ಜಾಗೃತಿ ಮೂಡಿಸಿ, ಶೌಚಾಲಯಗಳ ನಿರ್ಮಾಣಕ್ಕೆ ಮುಂದಾಗಬೇಕು. ಕಲಿಕಾ ಮಟ್ಟ ಹಿಂದುಳಿಯದಂತೆ ಎಚ್ಚರ ವಹಿಸಬೇಕು. ಬೆಳಗಾವಿ ಜಿಲ್ಲೆ ಶೈಕ್ಷಣಿಕ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು. ಈಗಾಗಲೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳುತ್ತಿರುವ ಕಾರಣ ರಜೆ ದಿನಗಳನ್ನು ಹೆಚ್ಚಿಸಲಾಗಿದೆ. ಶಿಕ್ಷಕರು ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಬರುವ ದಿನಗಳಲ್ಲಿ ಕಲಿಕಾ ಅವಧಿಗೆ ಹಿಂದೆ ಉಳಿದಂತೆ ನೋಡಿಕೊಳ್ಳಬೇಕು ಎಂದರು. ಇತ್ತೀಚಿಗೆ ಭಾರೀ ಮಳೆಯಿಂದ ಹಾನಿಯಾಗಿರುವ ಗ್ರಾಮೀಣ ಭಾಗದ ತೋಟ, ಜಮೀನುಗಳ ರಸ್ತೆ ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಕ್ರಿಯಾ ಯೋಜನೆ ರೂಪಿಸಿ ರಸ್ತೆಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಶೆಟ್ಟರ್ ಹೇಳಿದರು.

ಅನೀಮಿಯಾ ಪ್ರಮಾಣ ತಗ್ಗಿಸಲು ಕ್ರಮ

ಚಿಕ್ಕೋಡಿ ಸಂಸದೆ ಪ್ರಿಯಾಂಕ ಜಾರಕಿಹೊಳಿ ಮಾತನಾಡಿ, ಮಹಿಳೆಯರಲ್ಲಿ ಅನೀಮಿಯಾ ಸಮಸ್ಯೆ ಶೇ.7.4ರಷ್ಟು ಹೆಚ್ಚಾಗಿದೆ. ಅದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಗತ್ಯ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಕ್ಯಾಂಪ್ ಹಮ್ಮಿಕೊಂಡು ಕಾರ್ಯ ನಿರ್ವಹಿಸಿ ಮುಂದಿನ ಸಭೆಯೊಳಗೆ ಅನೀಮಿಯಾ ಪ್ರಮಾಣ ಕಡಿಮೆ ತಗ್ಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಭಿವೃದ್ಧಿ ಕೆಲಸಗಳ ಕುರಿತು ನಿರ್ಲಕ್ಷ್ಯ ತೋರಬಾರದು. ಅಧಿಕಾರಿಗಳು ಸಿದ್ಧಪಡಿಸಿದ ಕ್ರಿಯಾ ಯೋಜನೆಯಂತೆ ಕಾಲಾವಧಿಯೊಳಗೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ ತಿಳಿಸಿದರು.

ಶೌಚಾಲಯಗಳು ನಿರ್ಮಾಣಕ್ಕೆ ಸ್ಥಳ ಇಲ್ಲದ ಮನೆಗಳಿಗೆ ಅನುಕೂಲಕ್ಕಾಗಿ ಸಮುದಾಯ ಶೌಚಾಲಯಗಳನ್ನು ಈಗಾಗಲೇ ನಿರ್ಮಾಣ ಮಾಡಲಾಗಿದೆ. ಸಮುದಾಯ ಶೌಚಾಲಯಗಳ ನಿರ್ವಹಣೆಗೆ ತೊಂದರೆಯಾಗುತ್ತಿರುವ ಕಾರಣ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿ ಕೊಡುವಂತೆ ನಿರ್ದೇಶನವಿದೆ. ಬಹಳಷ್ಟು ಗ್ರಾಮೀಣ ಭಾಗದಲ್ಲಿ ಗ್ರೇ ವಾಟರ್ ಮ್ಯಾನೇಜಮ್ಮೆಂಟ್ ಮೂಲಕ ಹಳ್ಳ, ನದಿಗಳಿಗೆ ಚರಂಡಿ ನೀರು ಬಿಡುವ ವ್ಯವಸ್ಥೆ ಕಲ್ಪಿಸಲಾಗಿದೆ ಆದರೆ ಕೆಲವು ಗ್ರಾಮಗಳಲ್ಲಿ ಚರಂಡಿಗಳ ವ್ಯವಸ್ಥೆ ಇಲ್ಲದ ಕಾರಣ ಅಂತಹ ಗ್ರಾಮಗಳನ್ನು ನರೇಗಾ ಯೋಜನೆಡಿ ಗುರುತಿಸಿ ಚರಂಡಿ ನಿರ್ಮಾಣಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಚಿಕ್ಕೋಡಿ ಭಾಗದಲ್ಲಿ ಬಹು ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಯೋಜನೆಗೆ ಚಾಲನೆ ನೀಡಲಾಗಿದೆ ಬರುವ ದಿನಗಳಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಜಿ.ಪಂ ಸಿಇಓ ರಾಹುಲ್ ಶಿಂಧೆ ಹೇಳಿದರು.

ಮಳೆ ಹಾನಿಯಿಂದ 5 ಜೀವ ಹಾನಿಗಳಾಗಿವೆ ಅಂತವರ ಕುಟುಂಬದ ಅವಲಂಬಿತರಿಗೆ ₹5 ಲಕ್ಷ ಪರಿಹಾರ ನೀಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ತಿಳಿಸಿದರು. ಸ್ಮಾರ್ಟ್ ಸಿಟಿಯಲ್ಲಿ 108 ಕಾಮಗಾರಿಗಳು ನಡೆದಿವೆ, ಅದರಲ್ಲಿ ಈಗಾಗಲೇ ಬಹುತೇಕ ಯೋಜನೆಗಳು ಪೂರ್ಣಗೊಂಡಿದ್ದು, ಇನ್ನೂ 5 ಯೋಜನೆಗಳು ಪ್ರಗತಿ ಹಂತದಲ್ಲಿವೆ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ವಿವರಿಸಿದರು. ಹಿಂಗಾರು ಬೀಜ ವಿತರಣೆ ಈಗಾಗಲೇ ಎಲ್ಲ ಕಡೆಗೆ ವಿತರಣೆ ಮಾಡಲಾಗಿದೆ, ಅದೇ ರೀತಿಯಲ್ಲಿ ರಸ ಗೊಬ್ಬರಗಳ ಕೊರತೆ ಸಹ ಇರುವುದಿಲ್ಲ. ತೋಟಗಾರಿಕೆ ಬೆಳೆ ಹಾನಿ 3320 ಹೆಕ್ಟೇರ್ ಬೆಳೆ ಹಾಳಾಗಿವೆ. ಈ ಕುರಿತು ಸರ್ಕಾರದ ಪೋರ್ಟಲ್‌ನಲ್ಲಿ ನಮೂದಿಸಲಾಗಿದೆ ಬೆಳೆ ಪರಿಹಾರ ಒದಗಿಸಲು ಮಾಹಿತಿ ಸಲ್ಲಿಸಲಾಗಿದೆ ಎಂದು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ವಿವರಿಸಿದರು.

ಮಹಾನಗರ ಪಾಲಿಕೆ ಆಯುಕ್ತೆ ಶುಭ.ಬಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಗಡಾದಿ, ಜಿಪಂ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಜಿಪಂ ಮುಖ್ಯ ಯೋಜನಾ ನಿರ್ದೇಶಕ ಗಂಗಾಧರ ದಿವಟರ್, ಆಹಾರ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ನಾಯಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಚೇತನಕುಮಾರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳ ಸೇರಿ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದ್ವೇಷ ಭಾಷಣ ಮಾಡಲೆಂದೇ ವಿರೋಧ ಪಕ್ಷದವರು ಮಸೂದೆಗೆ ವಿರೋಧ?: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಪ್ರಶ್ನೆ
ನರೇಗಾ ಸಮರ: ಹೆಚ್‌ಡಿಕೆ ಸವಾಲು ಸ್ವೀಕರಿಸಿದ ಡಿಕೆಶಿ; 'ಇಂದೇ ಡಿಬೇಟ್‌ಗೆ ಬರ್ತೀನಿ' ಎಂದು ಪಂಥಾಹ್ವಾನ!