
ಬೆಂಗಳೂರು (ನ. 20): ಮುಖ್ಯಮಂತ್ರಿ ಯಡಿಯೂರಪ್ಪ ಎರಡು ತಿಂಗಳಲ್ಲಿ ಮೂರು ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಬಂದರೂ ದಿಲ್ಲಿ ನಾಯಕರು ಸಂಪುಟ ಸರ್ಜರಿಗೆ ಮಾತ್ರ ಇನ್ನೂ ಮನಸ್ಸು ಮಾಡುತ್ತಿಲ್ಲ.
ಮೊನ್ನೆ ಯಡಿಯೂರಪ್ಪನವರು ನಡ್ಡಾರನ್ನು ಕೂಡಲೇ ಸಂಪುಟ ವಿಸ್ತರಣೆ ಪಟ್ಟಿಯನ್ನು ಓಕೆ ಮಾಡಿ ಎಂದು ಕೇಳಿಕೊಂಡರೂ ಹ್ಞೂಂ ಎನ್ನದ ರಾಷ್ಟ್ರೀಯ ಅಧ್ಯಕ್ಷರು, ಮೋದಿ ಸಂಪುಟದ ವಿಸ್ತರಣೆ ಆಗಲಿ, ಮುಂದೆ ನೋಡೋಣ ಎಂದು ಹೇಳಿದ್ದಾರೆ. ಅಂದರೆ ಬಹುತೇಕ ಸಂಕ್ರಾಂತಿ ಕಳೆದ ನಂತರವೇ ವಿಸ್ತರಣೆ ಸಾಧ್ಯತೆ ಜಾಸ್ತಿಯಿದೆ. ಆಗಲೂ ಬಿಬಿಎಂಪಿ ಚುನಾವಣೆ, ಗ್ರಾಮ ಪಂಚಾಯತಿ ಚುನಾವಣೆಗಳು ಬಂದರೆ ಮತ್ತೆ ಬ್ರೇಕ್. ಹೈಕಮಾಂಡ್ ಮನಸ್ಸಲ್ಲಿ ಏನೈತೋ ಏನೋ?
ವಿಸ್ತರಣೆಯಲ್ಲ, ಪುನಾರಚನೆಯೇ?
ಸಂಪುಟ ವಿಸ್ತರಣೆ ಮಾಡುವುದಿದ್ದರೆ ಹೈಕಮಾಂಡ್‌ಗೆ ಹತ್ತು ನಿಮಿಷದ ಕಸರತ್ತು. ಹೇಗೂ ಮಾತು ಕೊಟ್ಟಂತೆ ಮುನಿರತ್ನ, ಎಂಟಿಬಿ ನಾಗರಾಜ್, ಆರ್.ಶಂಕರರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು. ಉಮೇಶ್ ಕತ್ತಿ ಅಥವಾ ಮಗದೊಬ್ಬ ಲಿಂಗಾಯತರಿಗೆ ಅವಕಾಶ ಕೊಡಬೇಕು. ಆದರೆ ಹೈಕಮಾಂಡ್ ತಡ ಮಾಡುತ್ತಿರುವುದು ನೋಡಿದರೆ ಪುನಾರಚನೆಯ ಮನಸ್ಸಿದೆ. ಆದರೆ ಯಾರನ್ನು ತೆಗೆಯಬೇಕು ಎಂಬ ಬಗ್ಗೆ ಯಾವ ಹಂತದಲ್ಲೂ ಚರ್ಚೆ ನಡೆದಿಲ್ಲ.
ಬಿಹಾರದಂತಹ ಕ್ಲಿಷ್ಟ ರಾಜ್ಯದಲ್ಲಿ ಆಡಳಿತ ವಿರೋಧಿ ಅಲ್ಲೆಯಲ್ಲೂ ಮೋದಿ ಮಾಡಿದ ಮ್ಯಾಜಿಕ್ ಏನು?
ಹೈಕಮಾಂಡ್‌ಗೆ ಆಪ್ತರಿರುವ ನಾಯಕರ ಪ್ರಕಾರ, ಸದ್ಯದ ಸ್ಥಿತಿಯಲ್ಲಿ ಅಮಿತ್ ಶಾ ಮತ್ತು ನಡ್ಡಾ ಕರ್ನಾಟಕದ ಬಗ್ಗೆ ಯಾವುದೇ ನಿರ್ಣಯ ತೆಗೆದುಕೊಳ್ಳೋದಿದ್ದರೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಮಾತಿಗೆ ಪ್ರಾಧಾನ್ಯತೆ ಕೊಡುವುದು ಜಾಸ್ತಿ. ಅಮಿತ್ ಶಾ, ನಡ್ಡಾ, ಸಂತೋಷ್ ಮತ್ತು ಯಡಿಯೂರಪ್ಪ ಒಟ್ಟಿಗೆ ಕುಳಿತುಕೊಂಡ ನಂತರವೇ ಸಂಪುಟ ಕಸರತ್ತಿಗೆ ಮೋಕ್ಷ ಸಿಗಬಹುದು.
ಅದೆಲ್ಲಿದ್ದರೋ ನಾರಾಯಣ!
ಯಡಿಯೂರಪ್ಪನವರ ಜೊತೆಗೆ ಒಂದು ಕಾಲಕ್ಕೆ ಸಂಘ ಕುಸ್ತಿಗೆ ಬಿದ್ದು ಮುಖ್ಯಮಂತ್ರಿ ಬದಲಾವಣೆಯಿಂದ ಹಿಡಿದು ಕೆಜೆಪಿ ಸ್ಥಾಪನೆವರೆಗೆ ಏನೇನೋ ನಡೆದುಹೋಯಿತು. ಆದರೆ ಈಗ ಸಂಘ ನಿಷ್ಠರು ಕರ್ನಾಟಕದಲ್ಲಿ ಕುಸ್ತಿಗೆ ಬೀಳುವುದನ್ನು ನಿಲ್ಲಿಸಿದ್ದಾರೆ. ಯಡಿಯೂರಪ್ಪ ಯಾವುದೇ ಪ್ರಸ್ತಾವನೆ ಕಳುಹಿಸಲಿ ಅದಕ್ಕೆ ಹೈಕಮಾಂಡ್ ಕಡೆಯಿಂದ ವಿಟೋ ಮಾಡಿಸಿ ಅಚ್ಚರಿಗೊಳಿಸುತ್ತಿದ್ದಾರೆ.
ಯಡಿಯೂರಪ್ಪ ಸಂಘದ ಹಿನ್ನೆಲೆಯ ಹಿಂದುಳಿದ ಸಮುದಾಯದ ಶಂಕರಪ್ಪ ಅವರ ಹೆಸರನ್ನು ರಾಜ್ಯಸಭೆ ಹುದ್ದೆಗೆ ಕಳುಹಿಸಿದರೂ ಒಪ್ಪದ ಹೈಕಮಾಂಡ್ ಬೇರೆ 3 ಹೆಸರನ್ನು ತರಿಸಿಕೊಂಡಿದೆ. ಖಾಟಿಕ್ ಸಮುದಾಯದ ಆರ್.ಕೆ ಸಿದ್ರಾಮಣ್ಣ, ಕೋಲಾರದ ಲಕ್ಷ್ಮಯ್ಯ ಮತ್ತು ಡಾ. ನಾರಾಯಣ ಅವರ ಹೆಸರು ತರಿಸಿಕೊಂಡು ಕೊನೆಗೆ ಒಪ್ಪಿಕೊಂಡಿದ್ದು ದೇವಾಂಗ ಸಮುದಾಯದ ನಾರಾಯಣ ಹೆಸರನ್ನು. ಬಿಜೆಪಿ ನಾಯಕರು ಹಾಗೂ ಪತ್ರಕರ್ತರಿಗೆ ಬಿಡಿ, ಸಂಘದ ಪದಾಧಿಕಾರಿಗಳಿಗೂ ಈ ಹೆಸರು ಕೇಳಿ ಅಚ್ಚರಿಯೋ ಅಚ್ಚರಿ. ಇದೊಂದು ರೀತಿಯಲ್ಲಿ ಅಮಿತಾಭ್ ಬಚ್ಚನ್ ಜೊತೆಗಿನ ಆಟದಲ್ಲಿ ಕೋಟಿ ಗೆದ್ದಂತೆ.
- ಪ್ರಶಾಂತ್ ನಾತು, ಸುವರ್ಣ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.