ಯಡಿಯೂರಪ್ಪ ಕರ್ನಾಟಕದ ಅತ್ಯುನ್ನತ ನಾಯಕ: ಅರುಣ್‌ ಸಿಂಗ್‌

By Girish Goudar  |  First Published Apr 23, 2022, 8:35 AM IST

*  ದೇಶದೆಲ್ಲೆಡೆ ಬಿಜೆಪಿ ಸರ್ಕಾರ ತನ್ನ ಸಾಧನೆಗಳ ಮೂಲಕ ಪಂಚರಾಜ್ಯ ಚುನಾವಣೆಗಳಲ್ಲಿ 4 ರಾಜ್ಯಗಳನ್ನು ಗೆದ್ದಿದೆ
*  ಮುಂದಿನ ವರ್ಷ ಕರ್ನಾಟಕ ಹಾಗೂ ಗುಜರಾತ್‌ ರಾಜ್ಯಗಳನ್ನು ಗೆಲ್ಲಲಿದೆ
*  ಕಲ್ಲು ತೂರಾಟ ಮಾಡಿದರೆ ಬುಲ್ಡೋಜರ್‌ ಬರುತ್ತೆ 


ಬೆಂಗಳೂರು(ಏ.23):  ಬಿಜೆಪಿ ಸರ್ಕಾರ(BJP Government) ಅಧಿಕಾರಕ್ಕೆ ಬಂದ ನಂತರ ದೇಶದೆಲ್ಲೆಡೆ ಆಹಾರ ಭದ್ರತೆಯೊಂದಿಗೆ ಆರೋಗ್ಯ ಭದ್ರತೆ ನೀಡಿದ ಬಿಜೆಪಿ ಸರ್ಕಾರ ನೂರು ಕೋಟಿಗೂ ಹೆಚ್ಚು ಮಂದಿಗೆ ಉಚಿತ ವ್ಯಾಕ್ಸಿನೇಷನ್‌ ವಿತರಿಸಿ, ಕೊರೋನಾ ನಿರ್ಮೂಲನೆಯೆಡೆಗೆ ಹೆಜ್ಜೆ ಹಾಕಿತು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ(BS Yediyurappa) ತಿಳಿಸಿದರು. ಅವರು ಶುಕ್ರವಾರ ಇಲ್ಲಿನ ಬಸವೇಶ್ವರ ನಗರದ ಬಸವೇಶ್ವರ ಪ್ಯಾಲೆಸ್‌ ಸಮುದಾಯ ಭವನದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಬೃಹತ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ಕಾಂಗ್ರೆಸ್‌(Congress) ಪಕ್ಷವು ಮುಳುಗುತ್ತಿರುವ ಹಡಗಾಗಿದ್ದು, ದೇಶದೆಲ್ಲೆಡೆ ನಿರ್ನಾಮವಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಅಲ್ಪಸ್ವಲ್ಪ ಉಸಿರಾಡಿಕೊಂಡಿದೆ. ಕಾಂಗ್ರೆಸ್‌ ಮುಕ್ತ ಕರ್ನಾಟಕ ಮಾಡಲು ನಾವು ಸಿದ್ಧ ಅದಕ್ಕೆ ನೀವು ಸಿದ್ಧರಿದ್ದೀರಾ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದರು. ರೈತರಿಗೆ ಕೇಂದ್ರ ಸರ್ಕಾರ 6 ಸಾವಿರ ನೀಡಿದರೆ ರಾಜ್ಯ ಸರ್ಕಾರ 4 ಸಾವಿರ ನೀಡುತ್ತಿದ್ದೇವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ(Karnataka Assembly Election) 150ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದರು.

Tap to resize

Latest Videos

Karnataka Cabinet Expansion: ಏ. 29ರಂದು ಸಿಎಂ ದಿಲ್ಲಿ ಭೇಟಿ: ಸಂಪುಟ ಬಗ್ಗೆ ಚರ್ಚೆ ಸಾಧ್ಯತೆ

ಯಡಿಯೂರಪ್ಪನವರ ಭಾಷಣದ ಆರಂಭದಿಂದ ಅಂತ್ಯದವರೆಗೆ ಕೇಂದ್ರ ಸರ್ಕಾರದ ಸಾಧನೆಗಳನ್ನು ಹೇಳುತ್ತಾ ಸಾಗಿದರು. ರಾಮ ಮಂದಿರಕ್ಕೆ ಭೂಮಿ ಪೂಜೆ, ಕೋವಿಡ್‌ ಸಮಯದಲ್ಲಿ ಜನರಿಗೆ ಸಹಾಯ, ಕಪ್ಪು ಹಣದ ವಿರುದ್ಧ ಸಮರ, ಜಿಎಸ್‌ಟಿ, ಸರ್ಧಾರ್‌ ವಲ್ಲಭಾಯಿ ಪಟೇಲ್‌ ಪ್ರತಿಮೆ, ಮನೆ-ಮನೆಗೆ ಶೌಚಾಲಯ, ಕೃಷಿಕರ ಆದಾಯ ದುಪ್ಪಟ್ಟು ಮಾಡುವ ನಿಟ್ಟಿನಲ್ಲಿ ಕಾರ್ಯ, ಜನ್‌ಧನ್‌ ಯೋಜನೆ, ಬುಲೆಟ್‌ ರೈಲು, ಬಡವರಿಗೆ ಕಡಿಮೆ ದರದಲ್ಲಿ ವಿಮಾನ ಯಾನ, ಆಯುಷ್ಮಾನ್‌ ಭಾರತ್‌, ಗಂಗಾ ಶುದ್ಧೀಕರಣ ಯೋಜನೆಗಳನ್ನು ಉಲ್ಲೇಖಿಸಿದ ಬಿಎಸ್‌ವೈ, ವಿದೇಶಗಳಲ್ಲಿ ಮೋದಿಗೆ ಅಪಾರ ಗೌರವವಿದೆಯೆಂದು ಹೇಳಿದರು.

ಯಡಿಯೂರಪ್ಪ ನಂಬರ್‌ 1 ನಾಯಕ:

ಭಾಷಣದ ಸಮಯದಲ್ಲಿ ಯಡಿಯೂರಪ್ಪ ಅವರನ್ನುದ್ದೇಶಿಸಿ, ಯಡಿಯೂರಪ್ಪ ಕರ್ನಾಟಕದ(Karnataka) ನಂಬರ್‌ ಒನ್‌ ನಾಯಕ ಎಂದು ಅರುಣ್‌ ಸಿಂಗ್‌(Arun Singh) ತಿಳಿಸಿದರು. ದೇಶದೆಲ್ಲೆಡೆ ಬಿಜೆಪಿ ಸರ್ಕಾರವು ತನ್ನ ಸಾಧನೆಗಳ ಮೂಲಕ ಪಂಚರಾಜ್ಯ ಚುನಾವಣೆಗಳಲ್ಲಿ 4 ರಾಜ್ಯಗಳನ್ನು ಗೆದ್ದಿದ್ದು, ಮುಂದಿನ ವರ್ಷ ಕರ್ನಾಟಕ ಹಾಗೂ ಗುಜರಾತ್‌ ರಾಜ್ಯಗಳನ್ನು ಗೆಲ್ಲಲಿದೆ ಎಂದು ತಿಳಿಸಿದರು. ವಸತಿ ಸಚಿವ ಎಂಟಿಬಿ ನಾಗರಾಜ್‌ ಅವರು ಮಾತನಾಡಿ, ಕೊರೋನಾದಂತಹ ಭೀಕರ ಸಂಕಷ್ಟದ ಸಮಯದಲ್ಲಿಯೂ ರಾಷ್ಟ್ರದ ಎಂಬತ್ತು ಕೋಟಿಗೂ ಅಧಿಕ ಜನರಿಗೆ ಮೋದಿರವರ ಸರ್ಕಾರ ಉಚಿತ ಆಹಾರ ಪೂರೈಸಿದೆ ಎಂಬುದನ್ನು ಜನತೆ ಮರೆಯಬಾರದು ಎಂದರು.

ಕಾಂಗ್ರೆಸ್‌ 60 ಸೀಟು:

ಜಿಲ್ಲಾ ಉಸ್ತುವಾರಿ ಸಚಿವ ಕೆ. ಸುಧಾಕರ್‌ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳು ಬಿಜೆಪಿ ಪಕ್ಷವನ್ನು ಗೆಲ್ಲಿಸುವ ಮೂಲಕ ಸಾಧನೆ ತೋರಿಸಬೇಕಾಗಿದೆ. ಕಾಂಗ್ರೆಸ್‌ ಪಕ್ಷ 60 ಸ್ಥಾನಗಳನ್ನು ಜೆಡಿಎಸ್‌ 30 ಸ್ಥಾನಗಳನ್ನು ದಾಟಲಾರದು ಎಂದು ತಿಳಿಸಿದರು.

15 ದಿನಗಳಲ್ಲಿ ಮಾಸಾಶನ:

ಕಂದಾಯ ಸಚಿವ ಆರ್‌ ಅಶೋಕ್‌ ಮಾತನಾಡಿ ಕಾಂಗ್ರೆಸ್‌ ಪಕ್ಷ ಎಪ್ಪತ್ತು ವರ್ಷಗಳ ಕಾಲ ಆಳಿದ್ದು ಇದುವರೆವಿಗೂ ಸಾರ್ವಜನಿಕರು ಖಾತೆ ಪಹಣಿ ಪೋಡಿ ಸರ್ವೆ ಮುಂತಾಗಿ ಹತ್ತು ಹಲವಾರು ಸಮಸ್ಯೆಗಳಿಗೆ ಪ್ರತಿದಿನ ತಾಲೂಕು ಕಚೇರಿ ಅಲೆಯುತ್ತಿದ್ದರೆಂದು, ಇದೀಗ ಬಿಜೆಪಿ ಸರ್ಕಾರದಿಂದ ಎಲ್ಲರಿಗೂ ಮನೆ ಬಾಗಿಲಿಗೆ ಕಂದಾಯದ ಎಲ್ಲಾ ಸೇವೆಗಳನ್ನು ನೀಡಲಾಗುತ್ತಿದೆ. ಕಂದಾಯ ಇಲಾಖೆಗೆ ದೂರವಾಣಿ ಕರೆ ಮಾಡಿ ಹಲೋ ಎಂದು ತಿಳಿಸಿದರೆ ಸಾಕು ಅವರಿಗೆ ಹದಿನೈದು ದಿನಗಳಲ್ಲಿ ಮಾಸಾಶನ(ಸಂಧ್ಯಾ ಸುರಕ್ಷ) ಪೆನ್ಷನ್‌ ದೊರೆಯುವಂತೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

Karnataka Politics: ಕಾಂಗ್ರೆಸ್‌ ಭ್ರಷ್ಟಾಚಾರದ ಗಂಗೋತ್ರಿ: ಸಿಎಂ ಬೊಮ್ಮಾಯಿ

ಕಲ್ಲು ತೂರಾಟ ಮಾಡಿದರೆ ಬುಲ್ಡೋಜರ್‌ ಬರುತ್ತೆ:

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ(CT Ravi) ಮಾತನಾಡಿ, ತಮ್ಮ ಪಕ್ಷದ ಶಾಸಕರ ಮನೆಗೆ ಬೆಂಕಿ ಹಾಕಿಸಿದ ಪಕ್ಷ ಕಾಂಗ್ರೆಸ್‌ ಹೊರತುಪಡಿಸಿ ಬೇರೆ ಇನ್ಯಾವುದೂ ಇಲ್ಲವೆಂದು ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣಗಳ ಬಗ್ಗೆ ಮಾತನಾಡಿದರು. ಕುಂಕುಮ ಇಟ್ಟವರು ಬಾಂಬ್‌ ಹಾಕಿಲ್ಲ ಎಂದ ಸಿ.ಟಿ.ರವಿ, ಇನ್ನು ಮುಂದೆ ಯಾರಾದರೂ ಕಲ್ಲು ತೂರಾಟ ಮಾಡಿದರೆ ಬುಲ್ಡೋಜರ್‌, ಜೆಸಿಬಿಗಳು ಬುದ್ಧಿಕಲಿಸಲು ಹೋಗುತ್ತವೆ. ಅದಕ್ಕೆ ಬಿಜೆಪಿ ಶಾಸಕರನ್ನು ಆಯ್ಕೆ ಮಾಡಿ, ಅಬ್ದುಲ್‌ ಕಲಾಂ ಅಂತಾ ಅವರನ್ನು ಬಿಜೆಪಿ ಕೊಡುತ್ತೆ, ದಾವೂದ್‌ ಇಬ್ರಾಹಿಂ ಅಂತವರನ್ನು ಕಾಂಗ್ರೆಸ್‌ ಕೊಡುತ್ತೆ, ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದರು.

ಕೋಲಾರ ಉಸ್ತುವಾರಿ ಸಚಿವರಾದ ಮುನಿರತ್ನ, ಸಂಸದ ಮುನಿಸ್ವಾಮಿ, ಎಂ.ಎಲ್‌.ಸಿ.ವೈ.ಎ.ನಾರಾಯಣಸ್ವಾಮಿ, ಎಂ.ಬಿ.ನಂದೀಶ್‌, ಎಂ.ಶಂಕರಪ್ಪ, ರಾಜ್ಯ ಕಾರ್ಯದರ್ಶಿ ಕೆ.ಎನ್‌.ನವೀನ್‌, ಕೇಶವ ಪ್ರಸಾದ್‌ರವರು, ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ, ಮಾಜಿ ಶಾಸಕ ಪಿಳ್ಳಮುನಿಶ್ಯಾಮಪ್ಪ, ಮಾಜಿ ಶಾಸಕ ಜಿ.ಚಂದ್ರಣ್ಣ, ಮುಖಂಡರಾದ, ತಾಲೂಕು ಬಿಜೆಪಿ ಅಧ್ಯಕ್ಷ ಸುಂದರೇಶ್‌, ಕಾರ್ಯದರ್ಶಿ ರವಿಕುಮಾರ್‌, ರಾಜ್ಯ ಎಸ್‌.ಸಿ.ಘಟಕದ ಖಜಾಂಚಿ ಎ.ಕೆ.ಪಿ.ನಾಗೇಶ್‌, ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾದಿಕಾರದ ಮಾಜಿ ಅಧ್ಯಕ್ಷ ಎಸ್‌.ಎಲ್‌.ಎನ್‌. ಅಶ್ವತ್ಥ ನಾರಾಯಣ್‌, ಬೆಂ.ಗ್ರಾ.ಜಿಲ್ಲಾ ಮಾಧ್ಯಮ ವಕ್ತಾರರಾದ ಪುಷ್ಪ ಶಿವಶಂಕರ್‌, ಟೌನ್‌ ಘಟಕದ ಅಧ್ಯಕ್ಷ ಆರ್‌.ಸಿ.ಮಂಜುನಾಥ್‌, ಜಿಲ್ಲಾ ಕಾರ್ಯದರ್ಶಿ ಕನಕರಾಜು, ತಾಲೂಕು ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ, ಸುರೇಶಾಚಾರ್‌ ನಾಲ್ಕು ತಾಲೂಕುಗಳ ಜಿಲ್ಲೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

click me!