ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ: ಎಚ್‌.ಡಿ.ಕುಮಾರಸ್ವಾಮಿ

By Govindaraj S  |  First Published Feb 26, 2023, 12:30 PM IST

ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ, ಅದ್ದರಿಂದ ಆ ಪಕ್ಷದವರು ಬಿಎಸ್‌ವೈ ಜಪ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಹೇಳಿದರು.


ಶೃಂಗೇರಿ (ಫೆ.26): ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ, ಅದ್ದರಿಂದ ಆ ಪಕ್ಷದವರು ಬಿಎಸ್‌ವೈ ಜಪ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಹೇಳಿದರು. ಇಲ್ಲಿನ ವೈಕುಂಠಪುರದಲ್ಲಿ ಶನಿವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ನವರು ಕೆಜೆಪಿ ಕಟ್ಟಿದಾಗ ನಾನು ಜೀವ ಇರೋವರೆಗೆ ಬಿಜೆಪಿಗೆ ಹೋಗೊಲ್ಲ ಎಂದಿದ್ದರು. ನಿನ್ನೆ ಜೀವ ಇರೋವರೆಗೂ ಬಿಜೆಪಿ ಬಿಡೊಲ್ಲ ಎಂದಿದ್ದಾರೆ ಎಂದು ಹೇಳಿದರು. ಅಂತಿಮ ಅಧಿವೇಶನದಲ್ಲಿ ವಿದಾಯ ಸಮಯದಲ್ಲಿ ಬಿಎಸ್‌ವೈ ಮನಸ್ಸು ಬಿಚ್ಚಿ ಮಾತನಾಡಿದರೆ ಚೆನ್ನಾಗಿರುತ್ತಿತ್ತು.

 ಮನಸ್ಸಿನ ಪರಾಮರ್ಶೆ ಮಾಡಿಕೊಂಡ ಮೊದಲ ಅಧಿವೇಶನ ನನ್ನ ರಾಜಕೀಯ ಜೀವನದಲ್ಲಿ ನೋಡಿದ್ದು ಎಂದರು. ಯಡಿಯೂರಪ್ಪರವರ ಧ್ಯಾನ ಮಾಡುತ್ತಿರುವ ಬಿಜೆಪಿ ಇದೀಗ ಪರಿವರ್ತನೆ ಆಗಿದೆ. ಅಧಿಕಾರ ಇದ್ದಾಗ ಯೋಜನೆ ಜಾರಿಗೆ ತರಲಿಲ್ಲ ಬಜೆಟ್‌ನಲ್ಲಿ ಘೋಷಣೆ ಮಾಡಿದರೆ ಏನು ಪ್ರಯೋಜನ? ಕಾಂಗ್ರೆಸ್‌ನವರು ಹಲವು ಘೋಷಣೆ ಮಾಡಿದ್ದಾರೆ, ಅದಕ್ಕೆಲ್ಲಾ ಹೇಗೆ ಹಣ ಹೊಂದಿಸುತ್ತಾರೆ ಹೇಳಲಿ ಎಂದರು. ಲೂಟಿ ರವಿ ಅಂತಾರಲ್ಲಾ, ನಾನು ಹೇಳಿದ್ದಲ್ಲಾ ಬೇರೆಯವರು ಹೇಳಿದ್ದು, ಖಾಲಿ ಡಬ್ಬ ಸೌಂಡ್‌ ಬರುತ್ತೇ ಅಂತಾರೆ ಹಾಗೆ ರವಿ ಸದಾ ಖಾಲಿ ಸೌಂಡ್‌ ಮಾಡುತ್ತಿರುತ್ತಾರೆ, ಇಂಥವರೆಲ್ಲ ದೇಶಕ್ಕೆ ಬುದ್ದಿ ಹೇಳುತ್ತಾರೆಂದು ಪರ್ಯಾಯವಾಗಿ ಹೇಳುವ ಮೂಲಕ ಸಿ.ಟಿ. ರವಿಗೆ ಟಾಂಗ್‌ ಕೊಟ್ಟರು.

Tap to resize

Latest Videos

ಹಾಸನ ಟಿಕೆಟ್‌ ವಿಚಾರದಲ್ಲಿ ನನ್ನ ನಿರ್ಧಾರವೇ ಅಂತಿಮ: ಎಚ್‌.ಡಿ.ಕುಮಾರಸ್ವಾಮಿ

ಎಚ್‌ಡಿಕೆ ಟೆಂಪಲ್‌ ರನ್‌: ಜಿಲ್ಲೆಯ ಮಲೆನಾಡಿನಲ್ಲಿ ಶನಿವಾರದಿಂದ ಪಂಚ ರತ್ನ ರಥಯಾತ್ರೆ ಕೈಗೊಂಡಿರುವ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಮೊದಲ ದಿನ ಟೆಂಪಲ್‌ ರನ್‌ ನಡೆಸಿದರು. ಇಲ್ಲಿನ ವೈಕುಂಠಪುರದಲ್ಲಿ ಶುಕ್ರವಾರ ತಂಗಿದ್ದ ಕುಮಾರಸ್ವಾಮಿ ಅವರು ಶನಿವಾರ ಬೆಳಿಗ್ಗೆ ಶೃಂಗೇರಿಯಿಂದ ರಥಯಾತ್ರೆ ಹೊರಡುವ ಮುನ್ನ ಶೃಂಗೇರಿ ಮಠಕ್ಕೆ ಭೇಟಿ ನೀಡಿದ್ದರು. ಶಾರದಾಂಬೆ ದೇವಾಲಯಕ್ಕೆ ತೆರಳಿ ಶ್ರೀ ಶಾರದಾಂಬೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಶ್ರೀ ವಿದ್ಯಾಶಂಕರ, ಶ್ರೀ ಶಂಕರಾಚಾರ್ಯ, ಶ್ರೀ ತೋರಣ ಗಣಪತಿ ದೇವಾಲಯಗಳಿಗೆ ತೆರಳಿ ದರ್ಶನ ಪಡೆದು, ಶ್ರೀ ತೋರಣ ಗಣಪತಿ ದೇವಾಲಯದ ಎದುರು ಈಡುಗಾಯಿ ಒಡೆದರು.

ರಾಜಕೀಯ ಪಕ್ಷಗಳಿಗೆ ದೇಶದ ನಿಜವಾದ ಬಡತನದ ಬಗ್ಗೆ ಅರಿವಿಲ್ಲ: ಎಚ್.ಡಿ.ಕುಮಾರಸ್ವಾಮಿ

ಬಳಿಕ ಶ್ರೀಮಠದ ನರಸಿಂಹವನದಲ್ಲಿರುವ ಶ್ರೀ ಗುರುಭವನಕ್ಕೆ ತೆರಳಿ ಶ್ರೀ ಭಾರತೀ ತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ನಂತರ ಪಂಚರತ್ನ ಯಾತ್ರೆಯ ಮೂಲಕ ಮಳೆಯ ದೇವರು ಋುಷ್ಯಶೃಂಗ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ರಥಯಾತ್ರೆ ನೆಮ್ಮಾರು, ಅಗಳಗಂಡಿ, ಜಯಪುರ, ನಾರ್ವೆ ಮೂಲಕ ಹರಿಹರಪುರ ಮಠಕ್ಕೆ ತೆರಳಿದ್ದು ಈ ಸಂದರ್ಭದಲ್ಲಿ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹಾಗೂ ಶಕಟಪುರ ಮಠದಲ್ಲಿ ಶ್ರೀ ಕೃಷ್ಣಾನಂದ ತೀರ್ಥ ಮಹಾಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಭಾನುವಾರ ಎನ್‌.ಆರ್‌. ಪುರ ತಾಲೂಕಿನಲ್ಲಿ ರಥಯಾತ್ರೆ ಮುಂದುವರೆಯಲಿದೆ.

click me!