
ಬೆಂಗಳೂರು (ಜು.02): ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಪಕ್ಷ ಸಂಘಟನೆ ವಿಚಾರವಾಗಿ ಶಾಸಕರೊಂದಿಗೆ ನಡೆಸುತ್ತಿದ್ದಾರೆಯೇ ಹೊರತು, ಮುಖ್ಯಮಂತ್ರಿ ಬದಲಾವಣೆ ಅಥವಾ ಸಚಿವ ಸಂಪುಟ ವಿಸ್ತರಣೆ ಕುರಿತು ಅಲ್ಲ. ನಾಯಕತ್ವ ಬದಲಾವಣೆ ಕುರಿತು ಯಾರೂ ಬಹಿರಂಗವಾಗಿ ಮಾತನಾಡುವಂತಿಲ್ಲ. ನಾವೆಲ್ಲರೂ ಸಿದ್ದರಾಮಯ್ಯ ಕೈ ಬಲಪಡಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.ಅದರ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ಬಹಿರಂಗ ಹೇಳಿಕೆ ನೀಡಿದ ರಾಮನಗರ ಶಾಸಕ ಇಕ್ಬಾಲ್ ಹುಸೇನ್‌ಗೆ ಕೆಪಿಸಿಸಿ ಕಾರಣ ಕೇಳಿ ನೋಟಿಸ್ ನೀಡಿದೆ. ನೋಟಿಸ್‌ಗೆ ಒಂದು ವಾರದಲ್ಲಿ ಉತ್ತರಿಸಲು ಸೂಚಿಸಲಾಗಿದೆ.
ಹೇಳಿಕೆಗೆ ಬ್ರೇಕ್: ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಬದಲಾವಣೆ ಅಥವಾ ಸಚಿವ ಸಂಪುಟ ವಿಸ್ತರಣೆ ಸೇರಿ ಬೇರೆ ಯಾವುದೇ ವಿಷಯಗಳೂ ಸುರ್ಜೇವಾಲಾ ಸಭೆ ವೇಳೆ ಚರ್ಚೆಯಾಗಿಲ್ಲ. ಶಾಸಕರ ಅಭಿಪ್ರಾಯ ಸಂಗ್ರಹಿಸಲು ಮಾತ್ರ ಸುರ್ಜೇವಾಲಾ ಸಭೆ ಸೀಮಿತವಾಗಿದೆ. ಅದರ ಜೊತೆಗೆ ಪಕ್ಷ ಸಂಘಟನೆಗಾಗಿ ಜಿಲ್ಲೆ ಮತ್ತು ಬ್ಲಾಕ್ ಕಾಂಗ್ರೆಸ್ ಸೇರಿ ಇನ್ನಿತರ ವಿಭಾಗಗಳ ಕಾರ್ಯವೈಖರಿ ಕುರಿತು ಶಾಸಕರೊಂದಿಗೆ ಚರ್ಚೆ ಮಾಡುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ವರ್ಷವನ್ನು ಸಂಘಟನಾ ವರ್ಷವೆಂದು ಘೋಷಿಸಿದ್ದಾರೆ. ಅದರಂತೆ ಈ ಎಲ್ಲ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ನನ್ನ ಪರ ಬ್ಯಾಟಿಂಗ್ ಬೇಡ: ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಯಾರೂ ಹೇಳುವ ಅಗತ್ಯವಿಲ್ಲ. ಆ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡುವಂತಿಲ್ಲ. ಇಕ್ಬಾಲ್ ಹುಸೇನ್, ಬಿ.ಆರ್.ಪಾಟೀಲ್ ಅಥವಾ ಬಾಲಕೃಷ್ಣ ಯಾರೇ ಆಗಲಿ, ಈ ವಿಚಾರವಾಗಿ ಮಾಧ್ಯಮಗಳ ಮುಂದೆ ಮಾತನಾಡಬಾರದು. ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರಿದ್ದು, ನಾವೆಲ್ಲರೂ ಅವರ ಕೈ ಬಲಪಡಿಸಬೇಕು. ನಾವು ಯಾರೂ ನಾಯಕತ್ವ ಬದಲಾವಣೆಯಲ್ಲಿ ಆತುರವಾಗಿಲ್ಲ. ನಮಗೆ 2028 ಬಹಳ ಮುಖ್ಯ. ಅದರ ಮೇಲೆ ನಮ್ಮ ಗಮನ ಕೇಂದ್ರೀಕೃತವಾಗಿದೆ ಎಂದು ಸ್ಪಷ್ಟಪಡಿಸಿದರು.
ಬಿಆರ್‌ಪಿಗೆ ತಿರುಗೇಟು: ಅನುದಾನ ವಿಚಾರವಾಗಿ ಬಿ.ಆರ್.ಪಾಟೀಲ್ ಅಸಮಧಾನ ವ್ಯಕ್ತಪಡಿಸಿರುವ ಕುರಿತು ಮಾತನಾಡಿ, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳು, ರೈತರಿಗೆ ಉಚಿತ ವಿದ್ಯುತ್ ನೀಡುವುದು ಸೇರಿ ಕಲ್ಯಾಣ ಕಾರ್ಯಕ್ರಮ, ಅಭಿವೃದ್ಧಿ ಕೆಲಸಗಳಿಗಾಗಿಯೇ 1 ಲಕ್ಷ ಕೋಟಿ ರು. ವ್ಯಯಿಸುತ್ತಿದೆ. ಸಾಮಾಜಿಕ ಕಲ್ಯಾಣ ಯೋಜನೆಗಳು ಸೇರಿ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ಇದು ಜನರು ಮತ್ತು ಕ್ಷೇತ್ರದ ಅಭಿವೃದ್ಧಿ ಕೆಲಸಗಳಲ್ಲವೇ? ನಮ್ಮ ರಾಜ್ಯದಲ್ಲಾಗುತ್ತಿರುವ ಕಲ್ಯಾಣ ಯೋಜನೆಗಳು ಬೇರೆಲ್ಲೂ ಅನುಷ್ಠಾನಗೊಳ್ಳುತ್ತಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.