ಬಿಜೆಪಿಯಿಂದ ಬ್ರಾಹ್ಮಣರಿಗೆ ಮೋಸ: ಶಾಸಕ ರವೀಂದ್ರ ಶ್ರೀಕಂಠಯ್ಯ

By Kannadaprabha NewsFirst Published Feb 9, 2023, 12:30 AM IST
Highlights

ಬ್ರಾಹ್ಮಣ ಸಮುದಾಯಕ್ಕೆ ಮೋಸ ನಡೆಯುತ್ತಿರುವುದು ಬಿಜೆಪಿಯಿಂದಲೇ ಹೊರತು ಕುಮಾರಸ್ವಾಮಿಯಿಂದ ಅಲ್ಲ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪಿಸಿದರು. 

ಮಂಡ್ಯ (ಫೆ.09): ಬ್ರಾಹ್ಮಣ ಸಮುದಾಯಕ್ಕೆ ಮೋಸ ನಡೆಯುತ್ತಿರುವುದು ಬಿಜೆಪಿಯಿಂದಲೇ ಹೊರತು ಕುಮಾರಸ್ವಾಮಿಯಿಂದ ಅಲ್ಲ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪಿಸಿದರು. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಸಿದ್ದಯ್ಯನ ಕೊಪ್ಪಲು ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಬ್ರಾಹ್ಮಣ ಸಮುದಾಯವನ್ನು ಬಿಜೆಪಿಯವರು ನಿರಂತರ ತುಳಿಯುತ್ತಾ, ನಾಟಕ ಆಡಿಕೊಂಡೇ ಬಂದಿದ್ದಾರೆ. ಕೇಂದ್ರ ಸಚಿವರಾಗಿದ್ದ ಅನಂತಕುಮಾರ್‌ ಸಾವಿಗೀಡಾದ ನಂತರ ಅವರ ಪತ್ನಿ ಚುನಾವಣೆಗೆ ಸ್ಪರ್ಧಿಸಬೇಕಿತ್ತು. 

ಜನಾಭಿಪ್ರಾಯವೂ ಅದೇ ಆಗಿತ್ತು. ಅವರನ್ನು ದೂರ ಇಟ್ಟರು. ಇತ್ತೀಚೆಗೆ ಸುರೇಶ್‌ ಅಂಗಡಿ ಪತ್ನಿಗೆ ಟಿಕೆಟ್‌ ಕೊಟ್ಟರು. ಇಡೀ ಸರ್ಕಾರ ಅಲ್ಲಿಗೆ ಹೋಗಿ ಎಲೆಕ್ಷನ್‌ ಮಾಡಿತು. ಹೀಗೆ ಬ್ರಾಹ್ಮಣರಲ್ಲಿ ತಾರತಮ್ಯ ಮಾಡುತ್ತಿರೋದು, ಮೋಸ ಮಾಡುತ್ತಿರುವವರು ಬಿಜೆಪಿಯವರು ಎಂದು ಟೀಕಿಸಿದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ರಚಿಸಿ 20-25 ಕೋಟಿ ರು. ನೀಡಿದರು. ಬೆಂಗಳೂರಿನ ಪದ್ಮನಾಭ ನಗರದಲ್ಲಿ ಬ್ರಾಹ್ಮಣ ಮಹಿಳಾ ವಿದ್ಯಾರ್ಥಿನಿಲಯ ಸ್ಥಾಪನೆಗೆ ಅರ್ಧ ಎಕರೆ ಜಮೀನು ಮಂಜೂರು ಮಾಡಿದರು. ಹೀಗೆ ಎಲ್ಲವೂ ಮಾಡಿರುವುದು ಕುಮಾರಸ್ವಾಮಿ. ಬ್ರಾಹ್ಮಣ ಸಮುದಾಯಕ್ಕೆ ಬಿಜೆಪಿಯವರ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಉಕ್ಕು ಕಾರ್ಖಾನೆ ಉಳಿಸಲು ಎಲ್ಲ ಪ್ರಯತ್ನ: ಸಿಎಂ ಬೊಮ್ಮಾಯಿ ಭರವಸೆ

ಇಂದಿಗೂ ಜೆಡಿಎಸ್‌ನ ಯಾವುದೇ ಕಾರ್ಯಕ್ರಮ ಆರಂಭಿಸಬೇಕಾದರೂ ಶೃಂಗೇರಿ ಮಠದಿಂದಲೇ ಆರಂಭವಾಗೋದು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ವೈಯಕ್ತಿಕ ವಿಚಾರಗಳನ್ನು ಕುಮಾರಸ್ವಾಮಿ ಪ್ರಸ್ತಾಪಿಸಿದ್ದಾರೆಯೇ ವಿನಃ ಬ್ರಾಹ್ಮಣ ಸಮುದಾಯ ನಿಂದಿಸಿಲ್ಲ ಎಂದು ಎಚ್‌ಡಿಕೆ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಕುಮಾರಸ್ವಾಮಿ ಹೇಳಿಕೆಯಲ್ಲಿ ಯಾವುದೇ ವಿವಾದವಿಲ್ಲ. ಪ್ರಹ್ಲಾದ ಜೋಶಿ ಅವರನ್ನು ಸಿಎಂ ಮಾಡಬೇಕೆಂಬ ಬಿಜೆಪಿಯವರ ಪ್ಲಾನ್‌ಅನ್ನು ಬಹಿರಂಗಪಡಿಸಿದ್ದಾರಷ್ಟೇ. ಕೇಂದ್ರದಲ್ಲಿ ಸಚಿವರಾಗಿರುವ ಪ್ರಹ್ಲಾದ ಜೋಶಿ ಅವರನ್ನು ರಾಜ್ಯರಾಜಕಾರಣಕ್ಕೆ ಕರೆತರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಅಷ್ಟೇ. ಇದರಲ್ಲಿ ವಿವಾದದ ಮಾತೇ ಇಲ್ಲ ಎಂದರು.

ಚಲುವರಾಯಸ್ವಾಮಿ ವಾಗ್ದಾಳಿ: ಬಿಜೆಪಿ ಜೊತೆ ಸೇರಿ ಜಿಲ್ಲೆಯ ಅಭಿವೃದ್ಧಿ ತಡೆದಿದ್ದೆ ಚಲುವರಾಯಸ್ವಾಮಿ ಮತ್ತವರ ಕಂಪನಿ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದರು. ಎಚ್‌.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯ ಅಭಿವೃದ್ಧಿಗೆ ಸಾವಿರಾರು ಕೋಟಿ ರು. ಹಣ ಬಿಡುಗಡೆ ಮಾಡಿದ್ದರು. ಆದರೆ, ಚೆಲುವರಾಯಸ್ವಾಮಿ ಮತ್ತವರ ಟೀಮ್‌ ಬಿಜೆಪಿ ಜೊತೆ ಸೇರಿ ಅಭಿವೃದ್ಧಿ ಆಗದಂತೆ ತಡೆದರು. ಚಲುವರಾಯಸ್ವಾಮಿ ಮತ್ತವರ ಕಂಪನಿ ಪ್ಲಾನ್‌ ಮಾಡಿ ಡಿ.ಕೆ.ಶಿವಕುಮಾರ್‌ ಅವರು ಹೇಳಿದರೂ ಕೇಳದೆ ನಿಖಿಲ್‌ ಕುಮಾರಸ್ವಾಮಿಯನ್ನು ಸೋಲಿಸಿ ಸುಮಲತಾ ಅವರನ್ನು ಗೆಲ್ಲಿಸಿದರು. ಅವರಿಂದಲೇ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಮಲತಾ ಅಂಬರೀಶ್‌ ಅವರನ್ನು ಗೆಲ್ಲಿಸಲು ಹಗಲು ರಾತ್ರಿ ಕೆಲಸ ಮಾಡಿದ ಕಾಂಗ್ರೆಸ್‌ ಪಕ್ಷದ ಸದಸ್ಯರಿಗೆ ಈಗ ಗೊತ್ತಾಗಿದೆ, ನಾವೆಲ್ಲ ತಪ್ಪು ಮಾಡಿದ್ದೇವೆ ಎಂದು. ಆಶ್ಚರ್ಯಕರ ಸಂಗತಿ ಎಂದರೆ, ಸುಮಲತಾ ಪರ ಕೆಲಸ ಮಾಡಿದ ಕಾಂಗ್ರೆಸ್‌ ಸದಸ್ಯರನ್ನೇ ಅವರ ಜೊತೆ ಕಾಣಿಸಿಕೊಂಡರೆ ಸಸ್ಪೆಂಡ್‌ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ನಿಖಿಲ್‌ ಕುಮಾರಸ್ವಾಮಿ ಅವರು ಗೆದ್ದಿದ್ದರೆ ಜಿಲ್ಲೆಯ ಅಭಿವೃದ್ಧಿ ಆಗುತ್ತಿತ್ತು. ಆದರೆ ಅವರನ್ನು ಸೋಲಿಸಿ ಜಿಲ್ಲೆಯ ಅಭಿವೃದ್ಧಿ ಆಗದಂತೆ ತಡೆದಿರುವುದೇ ಚಲುವರಾಯಸ್ವಾಮಿ ಎಂದು ಜಿಲ್ಲೆಯ ಜನರಿಗೆ ಗೊತ್ತಿದೆ ಎಂದರು.

ಜೆಡಿಎಸ್‌ ನಿಷ್ಠರಾಗಿರಲಿಲ್ಲ: ಚಲುವರಾಯಸ್ವಾಮಿ ಅವರಿಗೆ ರಾಜಕೀಯ ಅಧಿಕಾರ ಕೊಟ್ಟು ಸಾರಿಗೆ ಮಂತ್ರಿ ಮಾಡಿ ಪ್ರಭಾವಿ ರಾಜಕಾರಣಿಯಾಗಿ ರೂಪಿಸಿದ್ದ ಜೆಡಿಎಸ್‌ ಪಕ್ಷಕ್ಕೆ ಅವರು ನಿಷ್ಠೆಯಿಂದ ಇರಬೇಕಿತ್ತು. ಆದರೆ, ಹಣಕ್ಕಾಗಿ ಚಲುವರಾಯಸ್ವಾಮಿ ಮತ್ತು ರಮೇಶ್‌ ಬಂಡಿಸಿದ್ದೇಗೌಡ ಪಕ್ಷಕ್ಕೆ ಮೋಸ ಮಾಡಿ ಕಾಂಗ್ರೆಸ್‌ ಸೇರಿದರು. ಅವರು ಅಧಿಕಾರ ನೀಡಿದ ಜೆಡಿಎಸ್‌ ಪಕ್ಷಕ್ಕೆ ನಿಷ್ಠರಾಗಲಿಲ್ಲ. ಹೋಗಲಿ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಬೆಂಬಲಿಸಿ ಎಂದ ಕಾಂಗ್ರೆಸ್‌ ಪಕ್ಷಕ್ಕೂ ನಿಷ್ಠರಾಗಲಿಲ್ಲ ಎಂದು ಹರಿಹಾಯ್ದರು.

ಈಗ ರಮೇಶ್‌ ಬಂಡಿಸಿದ್ದೇಗೌಡ ಅವರೇ ಕಾಂಗ್ರೆಸ್‌ ಸೇರಿ ನಾನು ತಪ್ಪು ಮಾಡಿದೆ. ಅದೊಂದು ದರಿದ್ರ ಪಕ್ಷ, ದಯಮಾಡಿ ಕ್ಷಮಿಸಿ ಎಂದು ಹೋದ ಕಡೆಯಲೆಲ್ಲ ಜೆಡಿಎಸ್‌ ಮುಖಂಡರ ಬಳಿ ಹೇಳುತ್ತಿದ್ದಾರೆ. ನಿಮಗೆ ಕಾಂಗ್ರೆಸ್‌ ಪಕ್ಷದ ಮೇಲು ಗೌರವ ಇಲ್ಲ ಎಂಬುದನ್ನು ಜನ ಗಮನಿಸುತ್ತಿದ್ದಾರೆ ಎಂದರು. ಸುಮಲತಾ ಬಿಜೆಪಿ ಸೇರ್ಪಡೆಯಾದರೂ ಯಾವುದೇ ಸಮಸ್ಯೆ ಇಲ್ಲ. ಏಕೆಂದರೆ, ಅವರು ಸಂಸದೆಯಾಗಿ ಯಾವುದೇ ಕೊಡುಗೆ ನೀಡಿಲ್ಲ ಎಂದು ವ್ಯಂಗ್ಯವಾಡಿದರು. ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ಸುಮಲತಾ ಅವರನ್ನು ಸಚ್ಚಿದಾನಂದ ಆಹ್ವಾನಿಸುತ್ತಿರುವ ಬಗ್ಗೆ ಕೇಳಿದಾಗ, ಅಭ್ಯರ್ಥಿಯಾಗಿ ಬಂದರೆ ಬರಲಿ. ಸುಮಲತಾ ನಂಬಿ ರಾಜಕಾರಣ ಮಾಡಿದವರು ಯಾರೂ ಉಳಿದಿಲ್ಲ. 

ಕಟೀಲ್ ಅನ್ನುವ ಹೆಸರು ಬದಲು ಪಿಟೀಲು ಅಂತಾ ಇಟ್ಟುಕೊಳ್ಳಲಿ: ಎಚ್.ಡಿ.‌ಕುಮಾರಸ್ವಾಮಿ

ಇಂಡುವಾಳು ಸಚ್ಚಿದಾನಂದನಿಗೂ ಗ್ರಹಚಾರ ವಕ್ಕರಿಸಿದೆ ಎಂದು ಕುಹಕವಾಡಿದರು. ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ಸುಮಲತಾ ಅಂಬರೀಶ್‌ ಅಭ್ಯರ್ಥಿಯಾದರೆ ನನಗೂ ಸಂತೋಷ. ಅಂಬರೀಶ್‌ ಅವರಿಗೆ ಕ್ಷೇತ್ರದ ಜನರು ಯಾವ ರೀತಿ ಪ್ರೀತಿ ತೋರಿಸಿದ್ದಾರೆ ಎಂಬುದು ಗೊತ್ತಿದೆ. ಶ್ರೀರಂಗಪಟ್ಟಣಕ್ಕೆ ಸುಮಲತಾ ಅವರೂ ಬರಲಿ ಒಳ್ಳೆಯದು ಎಂದರು. ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕಾಳೇಗೌಡ, ಇಂಡವಾಳು ಗ್ರಾ.ಪಂ. ಅಧ್ಯಕ್ಷ ಮುನಿಸ್ವಾಮಿ, ಸದಸ್ಯ ರಮೇಶ್‌ ರಾಜು, ಮುಖಂಡರಾದ ಎಸ್‌.ಟಿ.ಸಿದ್ದೇಗೌಡ, ಹನುಮಂತು, ತಿಮ್ಮೇಗೌಡ, ಎಸ್‌.ಎನ್‌.ಯೋಗೇಶ್‌, ಎಸ್‌.ಎಲ್‌.ಶಿವಣ್ಣ, ಕರೀಗೌಡ, ಗುತ್ತಿಗೆದಾರರಾದ ರವಿಕುಮಾರ್‌, ಯತಿರಾಜು, ನವೀನ್‌ಕುಮಾರ್‌, ರೈತ ಮುಖಂಡರಾದ ಸಿದ್ದೇಗೌಡ ಇಂಡುವಾಳು ಚಂದ್ರಶೇಖರ್‌, ಸಿಮೆಂಟ್‌ ಸಿದ್ದೇಗೌಡ ಇದ್ದರು.

click me!