Pancharatna Rathayatra: ಸ್ವಂತ ಬಲದ ಸರ್ಕಾರಕ್ಕೆ ಆಶೀರ್ವದಿಸಿ: ಎಚ್‌.ಡಿ.ಕುಮಾರಸ್ವಾಮಿ

By Govindaraj S  |  First Published Nov 30, 2022, 10:29 AM IST

ಕಾಂಗ್ರೆಸ್‌, ಬಿಜೆಪಿ ಮನೆಗೆ ಹೋಗಿ ಸರ್ಕಾರ ರಚನೆ ಮಾಡುವುದು ದೊಡ್ಡ ವಿಷಯವಲ್ಲ. ಈ ಬಾರಿ ಸ್ವಂತ ಬಲದಿಂದ ಅಧಿಕಾರಕ್ಕೇರುವ ಅವಕಾಶ ನೀಡಿ. ಸಾಮಾನ್ಯ ಜನರ ಸರ್ಕಾರ ತರಲು ಆಶೀರ್ವಾದ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದರು. 


ದೊಡ್ಡಬಳ್ಳಾಪುರ (ನ.30): ಕಾಂಗ್ರೆಸ್‌, ಬಿಜೆಪಿ ಮನೆಗೆ ಹೋಗಿ ಸರ್ಕಾರ ರಚನೆ ಮಾಡುವುದು ದೊಡ್ಡ ವಿಷಯವಲ್ಲ. ಈ ಬಾರಿ ಸ್ವಂತ ಬಲದಿಂದ ಅಧಿಕಾರಕ್ಕೇರುವ ಅವಕಾಶ ನೀಡಿ. ಸಾಮಾನ್ಯ ಜನರ ಸರ್ಕಾರ ತರಲು ಆಶೀರ್ವಾದ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದರು. ದೊಡ್ಡಬಳ್ಳಾಪುರ ತಾಲೂಕಿನ ಮೆಳೇಕೋಟೆ ಗ್ರಾಮದಲ್ಲಿ ಮಂಗಳವಾರ ನಡೆದ ಪಂಚರತ್ನ ರಥಯಾತ್ರೆ ವೇಳೆ ಜನತೆಯನ್ನುದ್ದೇಶಿಸಿ ಅವರು ಮಾತನಾಡಿದರು. ಜೆಡಿಎಸ್‌ ನಿಶ್ಚಿತವಾಗಿ ಮುಂದೆ ಸರ್ಕಾರ ರಚಿಸುತ್ತದೆ. ಆದರೆ ಸ್ವತಂತ್ರ ಸರ್ಕಾರ ರಚಿಸಬೇಕು ಅನ್ನೋದು ನಮ್ಮ ಗುರಿ. 

ಈ ಬಾರಿ ಯಾವುದೇ ಆಮಿಷಗಳಿಗೆ ಬಲಿಯಾಗದೆ ಜೆಡಿಎಸ್‌ ಪಕ್ಷಕ್ಕೆ ಮತ ನೀಡಿ ಬೆಂಬಲಿಸಿ ಎಂದು ಅವರು ಹೇಳಿದರು. ದೊಡ್ಡಬಳ್ಳಾಪುರ ಭಾಗದಲ್ಲಿ ನಮಗೆ ಸಂಪೂರ್ಣ ಜನ ಬೆಂಬಲ ಇದ್ದರೂ, ಒಂದಲ್ಲಾ ಒಂದು ರೀತಿ ಪೆಟ್ಟು ಬೀಳುತ್ತಿದೆ. ತಾವೇ ಮಾಡಿಕೊಳ್ಳುತ್ತಿರುವ ತಪ್ಪಿನಿಂದ ಸಮಸ್ಯೆಯಾಗಿದೆ ಎಂಬುದು ನನ್ನ ಅಭಿಪ್ರಾಯ. ದೊಡ್ಡಬಳ್ಳಾಪುರ ಜನತೆ ಪಂಚರತ್ನ ಯೋಜನೆ ಅನುಷ್ಠಾನಕ್ಕೆ ತರಲು ಜೆಡಿಎಸ್‌ ಪಕ್ಷವನ್ನು ಬೆಂಬಲಿಸಬೇಕು. ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು. ಅದಕ್ಕಾಗಿ 2023ಕ್ಕೆ ದೊಡ್ಡಬಳ್ಳಾಪುರ ಹಾಗೂ ಜಿಲ್ಲಾದ್ಯಂತ ಪಕ್ಷ ಗೆಲ್ಲಬೇಕು ಎಂದರು.

Latest Videos

undefined

ಯಾರೊಂದಿಗೂ ಚುನಾವಣಾ ಪೂರ್ವ ಮೈತ್ರಿ ಇಲ್ಲ: ಎಚ್‌.ಡಿ.ಕುಮಾರಸ್ವಾಮಿ

ಜೈಕಾರ ಬೇಡ, ಮತ ನೀಡಿ: ನಮಗೀಗ ಜೈಕಾರಗಳು ಬೇಡ. ರಾಜ್ಯವನ್ನು ಪ್ರಗತಿ ಪಥದಲ್ಲಿ ಮುನ್ನಡೆಸಲು ಮತದ ಆಶೀರ್ವಾದ ಬೇಕು ಎಂದ ಅವರು, 1994ರಲ್ಲಿ ದೇವೇಗೌಡರು ಮುಖ್ಯಮಂತ್ರಿ ಆದ ವೇಳೆ ಮೈಸೂರಿನಿಂದ ಹರಹರದವರೆಗೂ 74 ಸ್ಥಾನಗಳನ್ನು ಜನತಾದಳ ಗೆದ್ದಿತ್ತು. ಇಲ್ಲದಿದ್ದರೆ ದೇವೇಗೌಡರು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಈಗ ತಾವು ಸಿಎಂ ಆಗುವದು ಮುಖ್ಯ ಅಲ್ಲ. ಆದರೆ ಜನರ ಆಶೋತ್ತರಗಳ ಈಡೇರಿಕೆಗೆ ಇದು ಅನಿವಾರ‍್ಯ ಎಂದರು.

ರೈತರ ಮಕ್ಕಳಿಗೆ ಹೆಣ್ಣು ಕೊಡಲ್ಲ: ರೈತರ ಕುಟುಂಬಗಳು ಸಮಸ್ಯೆಗೆ ಸಿಲುಕಿವೆ. ರೈತರ ಮಕ್ಕಳಿಗೆ ಹೆಣ್ಣು ಕೊಡ್ತಿಲ್ಲ. ಈ ರೀತಿ ಪರಿಸ್ಥಿತಿ ಎದುರಾಗಿದ್ದು, ರೈತರು ಆರ್ಥಿಕವಾಗಿ ಸಬಲರಾಗಬೇಕು. ರೈತರು ಪ್ರಬಲ ಆಗಬೇಕಾದ್ರೆ ಜೆಡಿಎಸ್‌ಗೆ ಮತ ನೀಡಿ. ಇದರಲ್ಲಿ ಯಾವುದೇ ರೀತಿಯ ಸ್ವಾರ್ಥ ಇಲ್ಲ. ನಮ್ಮ ಮನೆಗೆ ಸೂಟು ಬೂಟು ಹಾಕಿರೋರು ಇಲ್ಲಿಗೆ ಬರಲ್ಲ. ಹರಕಲು ಬಟ್ಟೆಹಾಕಿರೋರೇ ಬರೋದು ಎಂದರು.

ಹಣ ಜೀವನ ರೂಪಿಸಲ್ಲ: ರಾಜ್ಯದ ಮುಖ್ಯಮಂತ್ರಿಯಾಗಿ ನಾನು ರಾಜ್ಯವನ್ನು ಲೂಟಿ ಮಾಡಲಿಲ್ಲ ಎಂದ ಕುಮಾರಸ್ವಾಮಿ, ಕಳೆದ 11 ದಿನಗಳಿಂದಲೂ ಹಗಲೂರಾತ್ರಿ ನಿಮ್ಮ ಆಶೀರ್ವಾದ ಬೇಡಿ ಬರುತ್ತಿದ್ದೇನೆ. ಮಾಚ್‌ರ್‍ವರೆಗೆ ನಾಡಿನಾದ್ಯಂತ ಸಂಚರಿಸುತ್ತೇನೆ. ನಾನು ಎಷ್ಟೇ ಬಾರಿ ಸಿಎಂ ಆದ್ರೂ ಅಂತಿಮವಾಗಿ ಮಾಜಿ ಸಿಎಂ ಆಗಿರುತ್ತೇನೆ. ಹಾಗಾಗಿ ನಾಡನ್ನ ಲೂಟಿ ಮಾಡಲು ಅಲ್ಲ ಇರೋದು. ತಾಯಂದಿರಿಗೆ, ಯುವಕರಿಗೆ ಮನವಿ ಮಾಡುತ್ತೇನೆ, ಚುನಾವಣೆ ಸಂದರ್ಭದಲ್ಲಿ ಕೊಡುವ ಹಣ ನಿಮ್ಮ ಜೀವನ ರೂಪಿಸಲ್ಲ ಎಂದರು.

ಭಿನ್ನಮತ ಬಿಡಿ; ಹೈದಯದಿಂದ ಕೆಲಸ ಮಾಡಿ: ಸ್ಥಳೀಯವಾಗಿ ಪಕ್ಷದಲ್ಲಿ ಭಿನ್ನಾಭಿಪ್ರಾಯ ಇದೆ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ಎಲ್ಲ ನಾಯಕರೂ ಒಟ್ಟುಗೂಡಿ ಕೆಲಸ ಮಾಡಿ. ಕಾಟಾಚಾರಕ್ಕೆ ಕೆಲಸ ಮಾಡದೆ ಹೃದಯದಿಂದ ಮಾಡಿ. ಒಂದು ತಾಯಿ ತನ್ನ ಮಕ್ಕಳ ಭವಿಷ್ಯ ನಿರ್ಮಾಣ ಮಾಡಲು ತನ್ನ ಬದುಕನ್ನೇ ಮುಡಿಪಿಡುವ ಹಾಗೆ ರಾಜ್ಯದ ಸಮಗ್ರ ಅಭಿವೃದ್ಧಿಯ ಹಿತಾಸಕ್ತಿಗೆ ಜೆಡಿಎಸ್‌ ಸಂಕಲ್ಪ ಮಾಡಿದೆ. ದೊಡ್ಡಬಳ್ಳಾಪುರ ಗೆಲ್ಲಲೇಬೇಕು ಎಂದು ಬಂದಿದ್ದೇನೆ. ಈ ನಿರೀಕ್ಷೆ ಹುಸಿ ಮಾಡಬೇಡಿ ಎಂದು ನಾಯಕರುಗಳಿಗೆ ಚಾಟಿ ಬೀಸಿದರು.

ಜೆಡಿಎಸ್‌ ಸರ್ಕಾರ ರಚನೆಗೆ ಒಂದು ಬಾರಿ ಬಹುಮತ ಕೊಡಿ: ಎಚ್‌.ಡಿ.ಕುಮಾರಸ್ವಾಮಿ

ಹಲವು ಗ್ರಾಮಗಳಿಗೆ ಯಾತ್ರೆ ಸಂಚಾರ: ತಾಲೂಕಿನ ಹಾಡೋನಹಳ್ಳಿ, ಆಚಾರ್ಲಹಳ್ಳಿ, ಕಂಟನಕುಂಟೆ, ಘಾಟಿ ಸುಬ್ರಹ್ಮಣ್ಯ, ಗುಂಡಂಗೆರೆ ಹೊಸಹಳ್ಳಿ, ಆರೂಢಿ, ಸಾಸಲು, ಸಕ್ಕರೆಗೊಲ್ಲಹಳ್ಳಿ, ಚಿಕ್ಕಬೆಳವಂಗಲ, ದೊಡ್ಡಬೆಳವಂಗಲ, ಕೆಸ್ತೂರು, ಹಣಬೆ-ತಿಪ್ಪೂರು, ಮರಳೇನಹಳ್ಳಿ-ನೇರಳಘಟ್ಟ, ಕೊಡಿಗೇಹಳ್ಳಿ, ದೊಡ್ಡಬಳ್ಳಾಪುರ ನಗರ, ಬಾಶೆಟ್ಟಿಹಳ್ಳಿ ಭಾಗಗಳಲ್ಲಿ ಪಂಚರತ್ನ ಯಾತ್ರೆ ಸಂಚರಿಸಿತು. ಈ ವೇಳೆ ಪಕ್ಷದ ಯುವ ಮುಖಂಡ ನಿಖಿಲ್‌ ಕುಮಾರಸ್ವಾಮಿ, ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ್‌, ಸಾ.ರಾ.ಮಹೇಶ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ರಮೇಶ್‌ಗೌಡ, ಶಾಸಕ ನಿಸರ್ಗ ನಾರಾಯಣಸ್ವಾಮಿ, ಬಮೂಲ್‌ ಮಾಜಿ ನಿರ್ದೇಶಕ ಎಚ್‌.ಅಪ್ಪಯ್ಯಣ್ಣ, ಜೆಡಿಎಸ್‌ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ರಾಜ್ಯ ಪ್ರಧಾನ ಕಾರ‍್ಯದರ್ಶಿ ಹರೀಶ್‌ಗೌಡ, ಜಿಪಂ ಮಾಜಿ ಸದಸ್ಯ ಎ.ನರಸಿಂಹಯ್ಯ, ಆನಂದ್‌, ಲಕ್ಷ್ಮೇಪತಯ್ಯ, ವಿವಿಧ ಘಟಕಗಳ ಮುಖಂಡರು, ಸಹಸ್ರಾರು ಕಾರ‍್ಯಕರ್ತರು ಭಾಗಿಯಾದರು.

click me!