
ಬೆಂಗಳೂರು (ಅ.17): ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಜನಗಣತಿಗೆ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ಉದ್ಯಮಿ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿಗಳು ತಾವು ಮೇಲ್ಜಾತಿಯವರು ಎಂದು ಮಾಹಿತಿ ಕೊಡಲು ನಿರಾಕರಿಸಿದ್ದಾರೆ. ಜಾತಿ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎನ್ನುವವರು ಸಂವಿಧಾನ ವಿರೋಧಿಗಳು ಮತ್ತು ದೇಶದ್ರೋಹಿಗಳು ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಟೀಕೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಮೇಲ್ಜಾತಿಯವರಿಗೆ ಹಿಂದುಳಿದ ಸಮೀಕ್ಷೆ (ಜಾತಿ ಗಣತಿ) ಬೇಕಾಗಿಲ್ಲ. ಸಿಎಂ ಸಿದ್ದರಾಮಯ್ಯನವರು ಬಹಳ ಧೈರ್ಯ ಮಾಡಿ ಈ ಸಮೀಕ್ಷೆಯನ್ನು ಮಾಡುತ್ತಿದ್ದಾರೆ. ಆದರೆ, ಸಮೀಕ್ಷೆಯಲ್ಲಿ ಭಾಗಿಯಾಗಲ್ಲ ಎಂದರೆ ಅವರು ಸಂವಿಧಾನ ವಿರೋಧಿಗಳು, ದೇಶದ್ರೋಹಿಗಳು ಅಂತಾನೆ ಹೇಳಬೇಕಾಗುತ್ತೆ ಎಂದು ಹೇಳಿದರು.
ಸುಧಾಮೂರ್ತಿ ದಂಪತಿ ಸಮೀಕ್ಷೆಗೆ ಮಾಹಿತಿ ನೀಡದ ಬಗ್ಗೆ ಮಾತನಾಡಿ, 'ಅವರೆಲ್ಲಾ ತಂತ್ರಜ್ಞಾನ ದಿಗ್ಗಜರು ಅನಿಸಿಕೊಂಡವರು. ಸರ್ಕಾರದಿಂದ 1 ರೂಪಾಯಿಗೆ ಭೂಮಿ ಪಡೆದುಕೊಂಡಿರುತ್ತಾರೆ. ಸುಮಾರು 35 ಸಾವಿರ ಕೋಟಿ (ಪರೋಕ್ಷವಾಗಿ) ತೆರಿಗೆ ಕಟ್ಟೋರು ಇದ್ದಾರೆ. ಆದರೆ, ನಿಜವಾಗಿಯೂ ತೆರಿಗೆ ಕಟ್ಟೋದರಿಂದ ತಪ್ಪಿಸಿಕೊಳ್ಳಲು ಸಮೀಕ್ಷೆಯಲ್ಲಿ ಭಾಗಿಯಾಗುತ್ತಿಲ್ಲ' ಎಂದು ನೇರ ಆರೋಪ ಮಾಡಿದರು. ಇದರ ಮೂಲಕ, ಈ ಸಮೀಕ್ಷೆ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ ಕುರಿತ ದತ್ತಾಂಶವು ತಮ್ಮ ತೆರಿಗೆ ಮತ್ತು ಆಸ್ತಿಯ ವಿಷಯಗಳನ್ನು ಬಹಿರಂಗಪಡಿಸುತ್ತದೆ ಎಂಬ ಭಯ ಅವರಲ್ಲಿದೆ ಎಂದು ಪರೋಕ್ಷವಾಗಿ ಟೀಕಿಸಿದರು.
ಈ ವೇಳೆ, ಸರ್ಕಾರಿ ಸ್ಥಳಗಳಲ್ಲಿ ಆರ್.ಎಸ್.ಎಸ್. ಚಟುವಟಿಕೆಗಳಿಗೆ ನಿಷೇಧ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಗಳನ್ನು ಹರಿಪ್ರಸಾದ್ ಸಂಪೂರ್ಣವಾಗಿ ಬೆಂಬಲಿಸಿದರು. 'ಪ್ರಿಯಾಂಕ್ ಖರ್ಗೆಯವರು ಹೇಳಿರುವುದು ಸರಿಯಾಗಿದೆ. ಆರ್‌ಎಸ್‌ಎಸ್ ರಿಜಿಸ್ಟರ್ (ನೋಂದಾಯಿತ) ಸಂಸ್ಥೆಯೇ ಅಲ್ಲ. ಅದರ ಚಟುವಟಿಕೆಗಳಲ್ಲಿ ಭಾಗಿಯಾಗುವ ಅಧಿಕಾರಿಗಳ ವಿರುದ್ದವೂ ಕ್ರಮ ಜರುಗಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು. ಆರ್‌ಎಸ್‌ಎಸ್ ಇದ್ದಿಲು ಇದ್ದಹಾಗೆ, ಆದರೆ ಅದು ಅಶೋಕ್, ಅಶ್ವತ್ಥನಾರಾಯಣ ಕಣ್ಣಿಗೆ ವಜ್ರದಂತೆ ಕಾಣಿಸುತ್ತದೆ ಎಂದು ವ್ಯಂಗ್ಯವಾಡಿದರು.
ಸಚಿವ ಖರ್ಗೆಗೆ ಬೆದರಿಕೆ ಕರೆಗಳ ಕುರಿತು ಪ್ರತಿಕ್ರಿಯಿಸಿದ ಹರಿಪ್ರಸಾದ್, 'ಫೋನ್ ಮಾಡಿ ಬೆದರಿಕೆ ಹಾಕೋರು ರಣಹೇಡಿಗಳು. ಕಲಬುರಗಿಯಲ್ಲಿ ಆರ್.ಎಸ್.ಎಸ್. ಪಥಸಂಚಲನಕ್ಕೆ ಅನುಮತಿ ನೀಡಬಾರದು ಎಂದ ಅವರು, 'ದೊಣ್ಣೆ ಹಿಡಿದುಕೊಂಡು ಹೋಗುವವರು ಭಯೋತ್ಪಾದಕರು. ಬೇಕಾದರೆ ದೊಣ್ಣೆ ಹಿಡಿದುಕೊಂಡು ದನ ಕಾಯೋಕೆ ಹೋಗಲಿ. ಆರ್.ಎಸ್.ಎಸ್. ಚಟುವಟಿಕೆಗಳಿಗೆ ಅವರು ಗಣವೇಷ (ಸಮವಸ್ತ್ರ) ಅಲ್ಲ, ಯಾವ ವೇಷವಾದರೂ ಹಾಕಿಕೊಳ್ಳಲಿ, ಆದರೆ ಕಾನೂನು ಪಾಲಿಸಬೇಕು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.