
ಮೈಸೂರು (ಅ.17): ನಿರ್ಬಂಧ ವಿಧಿಸಲು ಆರ್‌ಎಸ್‌ಎಸ್‌ನಿಂದ ರಾಜ್ಯದಲ್ಲಿ ಯಾವ ಅನಾಹುತವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಪ್ರಶ್ನಿಸಿದರು. ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ಆರ್‌ಎಸ್‌ಎಸ್‌ನಿಂದ ರಾಜ್ಯದಲ್ಲಿ ಯಾವ ಅನಾಹುತ ಆಗಿದೆ?. ಹಾಗಾದರೆ ಯೂತ್ ಕಾಂಗ್ರೆಸ್ ಏನು? ಅಲ್ಲಿ ಏನೇನು ನಡೆಯುತ್ತಿದೆ? ಕೆಲಸಕ್ಕೆ ಬಾರದ ವಿಚಾರ ಮಾತನಾಡಿಕೊಂಡು ರಾಷ್ಟ್ರೀಯ ನಾಯಕ ಎಂದು ಬಿಂಬಿಸಲು ಹೊರಟಿದ್ದೀರಾ?
ಇಷ್ಟಕ್ಕೂ ಪ್ರಿಯಾಂಕ ಖರ್ಗೆಗೆ ಬೆದರಿಕೆ ಕರೆ ಬಂದಿದೆ ಎಂಬುದು ಶುದ್ದ ಸುಳ್ಳು ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷ ಕಟ್ಟದಿದ್ದರೂ ಬೇರೆಯವರನ್ನು ಮೂಲೆಗುಂಪು ಮಾಡಿ ಅಧಿಕಾರ ಅನುಭವಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕವಾಂಡ್ ಅನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಹೈಕವಾಂಡ್ ಸುಪ್ರೀಂ. ಹೈಕವಾಂಡ್ ನಿರ್ಧಾರವೇ ಅಂತಿಮ. ಈ ಹಿಂದೆ ಎಂ. ವೀರಪ್ಪಮೊಯ್ಲಿ ಅವರನ್ನು ಕಾಂಗ್ರೆಸ್ ಮುಖ್ಯಮಂತ್ರಿಯನ್ನಾಗಿ ಮಾಡಿದಾಗ ಯಾರೂ ಕೂಡ ಹೈಕವಾಂಡ್ ನಿರ್ಧಾರವನ್ನು ಪ್ರಶ್ನಿಸಲಿಲ್ಲ.
ಸಿಎಂ ರೇಸ್ ನಲ್ಲಿ ಇದ್ದವರೂ ಕೂಡ ಹೈಕವಾಂಡ್ ನಿಲುವಿಗೆ ತಲೆಬಾಗಿದ್ದಾಗಿ ಸ್ಮರಿಸಿದರು. ನಾಯಕತ್ವ ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್ ಹೈಕವಾಂಡ್ ನಿರ್ಧಾರ ಅಂತಿಮ. ಡಿ.ಕೆ. ಶಿವಕುವಾರ್ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಸಿದ್ದರಾಮಯ್ಯ ಸರ್ವನಾಶ ಮಾಡಲು ಹೊರಟಿದ್ದಾರೆ. ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯಲು ಬಯಸದೆ ತಮ್ಮವರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ನಾನಿದ್ದರೆ ಸರ್ಕಾರ ಎನ್ನುವ ಅಹಂನಲ್ಲಿದ್ದಾರೆ. ಹೈಕಮಾಂಡ್ ನ್ನೇ ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಶಾಲಾ ಶಿಕ್ಷಣ ಅಧೋಗತಿ: ಸಿದ್ದರಾಮಯ್ಯ ಸರ್ಕಾರದಲ್ಲಿ ಶಾಲಾ ಶಿಕ್ಷಣ ಅಧೋಗತಿಗೆ ಹೋಗಿದೆ. ಶಿಕ್ಷಣದ ಬಗ್ಗೆ ಸಿದ್ದರಾಮಯ್ಯ ಬಹಳ ಮಾತನಾಡುತ್ತಾರೆ, ಆದರೆ ಅವರ ಮಾತಿಗೂ ವಾಸ್ತವಕ್ಕೂ ವ್ಯತ್ಯಾಸವಿದೆ. ಶಾಲೆಗಳಲ್ಲಿ ಮಕ್ಕಳಿಗೆ ಊಟ, ಪಾಠ ಎರಡೂ ಸಿಗುತ್ತಿಲ್ಲ. ಹಸಿವಿನಿಂದ ಮಕ್ಕಳು ಮಲಗುತ್ತಿದ್ದಾರೆ. ಸಮೀಕ್ಷೆಗೆ ಶಿಕ್ಷಕರನ್ನು ನೇಮಿಸಿರುವುದರಿಂದ ಈ ರೀತಿ ಆಗಿದೆ. ಆದರೂ ನೀವು ಬೊಗಳೆ ಹೊಡೆಯುತ್ತಿದ್ದೀರಿ. ಉತ್ತರ ಕರ್ನಾಟಕದಲ್ಲಿ ಬಹಳ ಮಕ್ಕಳು ಊಟವಿಲ್ಲದೇ ಬಳಲುತ್ತಿದ್ದು, ಮಕ್ಕಳಿಗೆ ಆಹಾರ ನೀಡಲು ಕ್ರಮವಹಿಸಿ ಎಂದು ಆಗ್ರಹಿಸಿದರು. ಎಸ್ಸೆಸ್ಸೆಲ್ಸಿ ತೇರ್ಗಡೆಗೆ 33 ಅಂಕ ನಿಗದಿ ನಿಯಮದಿಂದ ಶಾಲಾ ಶಿಕ್ಷಣದ ವ್ಯವಸ್ಥೆ ಹಾಳಾಗಲಿದೆ. ಕಡಿಮೆ ಅಂಕ ಪಡೆದರೂ ಪಾಸಾಗಬಹುದೆಂಬ ಮನೋಭಾವದಿಂದ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಕುಂಠಿತವಾಗುತ್ತದೆ. ಸಿದ್ದರಾಮಯ್ಯ ನಗೆಪಾಟಲಿಗೀಡಾಗುತ್ತಿದ್ದಾರೆ ಎಂದರು.
ಎಸಿಪಿಯಾಗಲು 1 ಕೋಟಿ ಬೇಕು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಮೈಸೂರಿನಲ್ಲೂ ಕೂಡ ಹಾಳಾಗಿದೆ. ಮೈಸೂರಿಗೆ ಎಸಿಪಿ ಆಗಿ ಬರಬೇಕಾದರೆ 1 ಕೋಟಿ ರೂ. ನೀಡಬೇಕಿದೆ. ಇನ್ ಸ್ಪೆಕ್ಟರ್ ಆಗಲು 75 ಲಕ್ಷ, ಎಸ್‌ಐ ಆಗಲು 50 ಲಕ್ಷ ಕೊಡಬೇಕು. ಇದರ ಪರಿಣಾಮ ರಾಜ್ಯದಲ್ಲಿ ಆಡಳಿತ ಯಂತ್ರ, ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಅವರು ಹೇಳಿದರು. ಈಗ ಕರ್ತವ್ಯ ನಿರ್ವಹಿಸುತ್ತಿರುವವರು ಎಲ್ಲಾ ಅಧಿಕಾರಿಗಳು ಶಾಸಕರ ಕೃಪಾ ಪೋಷಿತರು. ಶಾಸಕರು ಆಯಾ ಕ್ಷೇತ್ರಗಳ ಮಾಲೀಕರು. ರಾಜ್ಯದಲ್ಲಿ ಅತ್ಯಾ*ಚಾರ, ಮಕ್ಕಳನ್ನು ಹೊತ್ತುಕೊಂಡು ಹೋಗುವ ಘಟನೆ ನಡೆಯುತ್ತಿದ್ದು, ಈ ಬಗ್ಗೆ ಮಾಹಿತಿ ಇದ್ದರೂ ಅವರ ಪುತ್ರ ಯತೀಂದ್ರ ಹಾಗು ಆತನ ಸ್ನೇಹಿತರು ವರ್ಗಾವಣೆ ದಂಧೆಯಲ್ಲಿ ತೊಡಗಿರುವುದರಿಂದ ಸಿಎಂ ಸಿದ್ದರಾಮಯ್ಯಗೆ ಇದನ್ನು ಕೇಳಲಾಗುತ್ತಿಲ್ಲ ಎಂದು ಆರೋಪಿಸಿದರು.
ಕಾಂತರಾಜು ಆಯೋಗದ ವರದಿಯನ್ನು ಮೊದಲು ಸ್ವೀಕರಿಸಿ, ಗಣತಿ ಹೆಸರಿನಲ್ಲಿ ಶಿಕ್ಷಕರನ್ನು ನಿಮ್ಮಿಷ್ಟದಂತೆ ನಡೆಸಿಕೊಳ್ಳುತ್ತಿದ್ದಾರೆ. ಜನರ ಹಿಂದೆ ಬಾರದೆ ಎಲ್ಲರೂ ದುಡ್ಡಿನ ಹಿಂದೆ ಹೋಗುತ್ತಿದ್ದಾರೆ. ಯಾವುದೇ ವಾನದಂಡವಿಲ್ಲದೇ ಹಣ ಕೊಡಲಾಗುತ್ತಿದೆ. ಯಾರಾದರೂ ಹುಚ್ಚ, ಹೆಣ್ಣು ಮಕ್ಕಳಿಗೆ ಎರಡು ಸಾವಿರ ಕೊಡ್ತಾನಾ? ಎಂದು ಅವರು ಪ್ರಶ್ನಿಸಿದರು. ಮಡಿವಾಳರು ಶಾಸಕರಾಗಬೇಕು ಎನ್ನುವ ವಿಶ್ವನಾಥ್ ಯಾರಿಗೆ ಅವಕಾಶ ಕೊಟ್ಟಿದ್ದಾರೆ. ತರೀಕೆರೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತವರಿಗೆ ಅವಕಾಶ ಮಾಡಿಕೊಡಿ. ಅದನ್ನು ಬಿಟ್ಟು ಬರಿ ಬೊಗಳೆ ಬಿಟ್ಟರೆ ಸರಿಯೇ? ಸಿದ್ದರಾಮಯ್ಯ ಹೋದಲ್ಲೆಲ್ಲಾ ಸುಳ್ಳು ಹೇಳುವ ಮೂಲಕ ನಗೆಪಾಟಲಿಗೆ ಒಳಗಾಗುತ್ತಿದ್ದಾರೆ. ಈಗ ತೋರಿಕೆಗಾಗಿ ಮೂರು ಪಟ್ಟೆ ವಿಭೂತಿ, ಮಧ್ಯೆ ಕುಂಕುಮ ಹಾಕಿಕೊಂಡು ನಾನು ಹಿಂದೂ ಎನ್ನುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.