
ವಿಜಯಪುರ(ಮಾ.11): ಬರುವ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವುದೇ ಬಿಜೆಪಿ ಗುರಿಯಾಗಿದೆ. ಹಾಗಾಗಿ ರಾಜ್ಯದಲ್ಲಿ ನಾಲ್ಕು ತಂಡಗಳಾಗಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿದೆ. ಯಾತ್ರೆಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಹೀಗಾಗಿ, ಬರುವ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟಬಹುಮತದಿಂದ ಅಧಿಕಾರಕ್ಕೆ ಬರುವುದು ಸ್ಪಷ್ಟವಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು ಹೇಳಿದರು.
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ತಂಡಗಳ ಬಿಜೆಪಿ ವಿಜಯ ಸಂಕಲ್ಪ ಸಮಾರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ. ಈ ಸಮಾವೇಶದಲ್ಲಿ ಲಕ್ಷಾಂತರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.
ಸಿದ್ದರಾಮಯ್ಯ ಅಧಿಕಾರಕ್ಕೆ ಬರುವುದು ಹಗಲುಗನಸು: ಸಚಿವ ಕಾರಜೋಳ
ಚುನಾವಣೆಯಲ್ಲಿ ಟಿಕೆಟ್ ಕೊಡುವುದು ಬಿಡುವುದು ವರಿಷ್ಠರ ನಿರ್ಧಾರ. ಈ ಬಾರಿ ಸುಭದ್ರ ಸರ್ಕಾರ ನೀಡುವತ್ತ ಗಮನ ಹರಿಸಬೇಕಿದೆ. ಹಾಗಾಗಿ ವರಿಷ್ಠರು ಇದನ್ನು ಗಮನದಲ್ಲಿಟ್ಟುಕೊಂಡು ಯಾರಿಗೆ ಟಿಕೆಟ್ ನೀಡಬೇಕು, ನೀಡಬಾರದು ಎಂಬುವುದರ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ವಿ.ಸೋಮಣ್ಣ ಒಬ್ಬ ಮುತ್ಸದ್ದಿ ರಾಜಕಾರಣಿ. ಅವರು ಮಂಡ್ಯದಲ್ಲಿ ಬಿಜೆಪಿಗೆ ಅದ್ಭುತ ವಿಜಯ ತಂದು ಕೊಟ್ಟಿದ್ದಾರೆ. ಅವರು ಬಿಜೆಪಿ ಬಿಡಲಿಕ್ಕಿಲ್ಲ. ಈ ಬಗ್ಗೆ ಅವರ ಜೊತೆಗೆ ನಾನು ಮಾತನಾಡುತ್ತೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದಶಪಥ ರಸ್ತೆ ಕೇಂದ್ರ ಸಚಿವ ನಿತಿನ ಗಡ್ಕರಿ ಅವರು ಚಾಲನೆ ನೀಡಿದ ಕಾಮಗಾರಿ. ಸಿದ್ದರಾಮಯ್ಯ ಇದನ್ನು ಕಾಂಗ್ರೆಸ್ ಮಾಡಿದ್ದು ಎಂದು ಹೇಳುತ್ತಿರುವುದು ತಪ್ಪು. ದಶಪಥ ರಸ್ತೆ ಬಿಜೆಪಿಯೇ ನಿರ್ಮಾಣ ಮಾಡಿದ್ದು ಎಂಬುವುದು ಇಡೀ ಜಗತ್ತಿಗೆ ಗೊತ್ತಿದೆ ಎಂದರು.
ಎಲ್ಲಾ ಶಾಸಕರಿಗೂ ಟಿಕೆಟ್ ಸಿಗಲ್ಲ, ಹಾಲಿ ಬಿಜೆಪಿ ಶಾಸಕರಿಗೆ ಶಾಕ್ ಕೊಟ್ಟ ಸಿಎಂ ಬೊಮ್ಮಾಯಿ!
ಪಂಚಮಸಾಲಿ ಸಮಾಜವನ್ನು 2ಬಿ ಗುಂಪಿಗೆ ಸೇರಿಸಿದ್ದು ಬಿಜೆಪಿ ಸರ್ಕಾರ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಮಾಜವನ್ನು 2ಎ ಗುಂಪಿಗೆ ಸೇರಿಸುವ ಬೇಡಿಕೆ ಹಿನ್ನೆಲೆಯಲ್ಲಿ ಸಕಾರಾತ್ಮಕ ವಿಚಾರ ಹೊಂದಿದ್ದಾರೆ. ಪಂಚಮಸಾಲಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ನುಡಿದರು.
ರಾಜ್ಯ ಸರ್ಕಾರ ನೀಡುತ್ತಿರುವ ವಿದ್ಯಾಸಿರಿ ಯೋಜನೆಯಿಂದ ಕೃಷಿಕರ ಮಕ್ಕಳ ಶಿಕ್ಷಣಕ್ಕೆ, ನೇಕಾರ ಸಮ್ಮಾನದಂಥ ಯೋಜನೆಗಳು ಆರ್ಥಿಕ ಶಕ್ತಿ ನೀಡುತ್ತಿದೆ ಎಂದು ಅವರು ಹೇಳಿದರು. ಲೋಕಾಯುಕ್ತ ಶಕ್ತಿಯನ್ನು ಕಾಂಗ್ರೆಸ್ಸಿನವರು ಕುಗ್ಗಿಸಿದ್ದರು. ಬಿಜೆಪಿ ಲೋಕಾಯುಕ್ತಕ್ಕೆ ಶಕ್ತಿ ತುಂಬಿದೆ. ಹಾಗಾಗಿ, ಕಾಂಗ್ರೆಸ್ಸಿನವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಅವರು ತಿಳಿಸಿದರು. ಯಾತ್ರೆಯ ಸಂಚಾಲಕ ಅರುಣ ಶಹಪುರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಸುರೇಶ ಬಿರಾದಾರ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.