ಕಾಂಗ್ರೆಸ್‌ ಶಾಸಕರು, ಸಚಿವರ ಕ್ಷೇತ್ರಗಳಲ್ಲೇ ಅರಳಿದ ಕಮಲ: ಕೈಹಿಡಿಯದ ಗ್ಯಾರಂಟಿ ಯೋಜನೆಗಳು

By Kannadaprabha NewsFirst Published Jun 5, 2024, 1:56 PM IST
Highlights

ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿ, ಬಿಜೆಪಿ ಆಡಳಿತ ವಿರೋಧಿ ಅಲೆಗಳಿಂದಾಗಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಮೂಲಕ ಬಿಜೆಪಿಗೆ ಕಾಂಗ್ರೆಸ್ ಪಡೆ ಶಾಕ್ ನೀಡಿತ್ತು. ಆದರೆ ಲೋಕಸಭೆ ಚುನಾವಣೆ ಫಲಿತಾಂಶ ಗಮನಿಸಿದರೆ ಕೈ ಪಡೆ ಕ್ಷೇತ್ರಗಳಲ್ಲೇ ಲೀಡ್ ಪಡೆಯುವ ಮೂಲಕ ಕಮಲ ಕಮಾಲ್ ಮಾಡಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ(ಜೂ.05):  ಕಿತ್ತೂರು ಕರ್ನಾಟಕದ ಧಾರವಾಡ, ಹಾವೇರಿ-ಗದಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಬಿಜೆಪಿ ಗದ್ದಿದೆ. ಸಚಿವರು ಹಾಗೂ ಕಾಂಗ್ರೆಸ್ ಶಾಸಕರೇ ತಮ್ಮ ಅಭ್ಯರ್ಥಿಗಳಿಗೆ ಮತ ಕೊಡಿಸುವಲ್ಲಿ ವಿಫಲವಾಗಿರುವುದು ಲೋಕಸಭೆ ಚುನಾವಣೆ ಫಲಿತಾಂಶದಿಂದ ಗೋಚರವಾಗಿದೆ.

Latest Videos

ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿ, ಬಿಜೆಪಿ ಆಡಳಿತ ವಿರೋಧಿ ಅಲೆಗಳಿಂದಾಗಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಮೂಲಕ ಬಿಜೆಪಿಗೆ ಕಾಂಗ್ರೆಸ್ ಪಡೆ ಶಾಕ್ ನೀಡಿತ್ತು. ಆದರೆ ಲೋಕಸಭೆ ಚುನಾವಣೆ ಫಲಿತಾಂಶ ಗಮನಿಸಿದರೆ ಕೈ ಪಡೆ ಕ್ಷೇತ್ರಗಳಲ್ಲೇ ಲೀಡ್ ಪಡೆಯುವ ಮೂಲಕ ಕಮಲ ಕಮಾಲ್ ಮಾಡಿದೆ.

ಲೋಕಸಭಾ ಚುನಾವಣೆ 2024 ರಿಸಲ್ಟ್‌: ಕರಾವಳಿಯಲ್ಲಿ ಕಮಲ ಕಮಾಲ್, 3 ಕಡೆ ಗೆಲುವು..!

ಯಾವ್ಯಾವ ಕ್ಷೇತ್ರ?:

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ನೋಡಿದರೆ ಚುನಾವಣೆ ಉಸ್ತುವಾರಿ ಹೊತ್ತಿದ್ದ ಸಂತೋಷ ಲಾಡ್ ಕ್ಷೇತ್ರವಾದ ಕಲಘಟಗಿಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋತಿ ಬರೋಬ್ಬರಿ 32737 ಲೀಡ್ ಪಡೆದರೆ, ಇನ್ನು ಜೋಶಿ ಅವರ ರಾಜಕೀಯ ಬದ್ಧ ವೈರಿ ಎಂದು ಹೇಳಿಕೊಳ್ಳುವ ಧಾರವಾಡಶಾಸಕವಿನಯ್ ಕುಲಕರ್ಣಿ ಕ್ಷೇತ್ರದಲ್ಲಿ 21,316 ಮತಗಳ ಲೀಡ್ ಪಡೆಯುವಲ್ಲಿ ಜೋಶಿ ಯಶಸ್ವಿಯಾಗಿದ್ದಾರೆ.

ಹಾವೇರಿ-ಗದಗ ಕ್ಷೇತ್ರದ ಎಂಟು ಕ್ಷೇತ್ರಗಳ ಪೈಕಿ ಗೆಲುವಿನ ಬಳಿಕ ಹಾವೇರಿಯಲ್ಲಿ ಬೃಹತ್ ಮೆರವಣಿಗೆ ನಡೆಸಿ ಸಂಭ್ರಮಿಸಿದ ಬಸವರಾಜ ಬೊಮ್ಮಾಯಿ, ಶಿರಹಟ್ಟಿಯೊಂದನ್ನು ಹೊರತುಪಡಿಸಿ ಉಳಿದ ಏಳೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಇದ್ದಾರೆ. ಈ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿಯ ಬಸವರಾಜ ಬೊಮ್ಮಾಯಿ ಹೆಚ್ಚಿನ ಮತ ಪಡೆದಿದ್ದಾರೆ. ಅದರಲ್ಲೂ ಹಿರಿಯ ಸಚಿವ, ಕ್ಷೇತ್ರದ ಉಸ್ತುವಾರಿ ಹೊತ್ತಿದ್ದ ಎಚ್. ಕೆ.ಪಾಟೀಲ ಪ್ರತಿನಿಧಿಸುವ ಗದಗ ಕ್ಷೇತ್ರದಲ್ಲಿ ಬಿಜೆಪಿಗೆ 10,509 ಮತ ಹೆಚ್ಚು ಬಿದ್ದಿವೆ. ಇನ್ನು ಶ್ರೀನಿವಾಸ ಮಾನೆ ಪ್ರತಿನಿಧಿಸುವ ಹಾನಗಲ್‌ನಲ್ಲಿ 8924ಮತ, ರುದ್ರಪ್ಪ ಲಮಾಣಿ ಕ್ಷೇತ್ರವಾದ ಹಾವೇರಿಯಲ್ಲಿ 389 ಮತ, ಬಸವರಾಜ ಶಿವಣ್ಣವರ ಪ್ರತಿನಿಧಿಸುವ ಬ್ಯಾಡಗಿಯಲ್ಲಿ 7192, ಯು.ಬಿ.ಬಣಕಾರರ ಹಿರೇಣೆದೂರಲ್ಲಿ 18720, ಪ್ರಕಾಶ ಕೋಳಿವಾಡರ ರಾಣಿಬೆನ್ನೂರಲ್ಲಿ 6509 ಹೆಚ್ಚು ಮತಗಳು ಬಿಜೆಪಿಗೆ ಪಾಲಾಗಿವೆ.

ಇನ್ನು ಉತ್ತರ ಕನ್ನಡ ಕ್ಷೇತ್ರದ ಎಂಟೂ ಕ್ಷೇತ್ರಗಳಲ್ಲಿ ಬಿಜೆಪಿಯೇ ಹೆಚ್ಚು ಮತಪಡೆದು ಕಾಂಗ್ರೆಸ್‌ನ್ನು ಕಂಗಾಲು ಮಾಡಿದೆ. ಬಾಬಾಸಾಹೇಬ ಪಾಟೀಲೆ ಪ್ರತಿನಿಧಿಸುವ ಬೆಳಗಾವಿ ಜಿಲ್ಲೆಯ ಕಿತ್ತೂರಲ್ಲಿ 36242 ಹೆಚ್ಚು ಮತಗಳು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಬಿದ್ದಿದೆ. ಹಿರಿಯ ಮುಖಂಡ, ಕಾಂಗ್ರೆಸ್ ಜಿಲ್ಲಾ ಮಟ್ಟಿಗೆ ಹೈಕಮಾಂಡ್ ಎಂದೇ ಬಿಂಬಿತವಾ ಗಿರುವ ಆರ್.ವಿ.ದೇಶಪಾಂಡ ಕ್ಷೇತ್ರವಾಗಿರುವ ಹಳಿಯಾಳದಲ್ಲೇ ಬಿಜೆಪಿ ಬರೋಬ್ಬರಿ 28,880 ಮತ ಹೆಚ್ಚಿಗೆ ಬಿದ್ದಿವೆ. ಸತೀಶ್ ಸೈಲ್ ಪ್ರತಿನಿಧಿಸುವ ಕಾರವಾರದಲ್ಲಂತೂ 65 ಸಾವಿರಕ್ಕೂ ಅಧಿಕ, ಸಚಿವ ಮಂಕಾಳ ವೈದ್ಯ ಪ್ರತಿನಿಧಿಸುವ ಭಟ್ಕಳದಲ್ಲಿ 32403, ಭೀಮಣ್ಣನಾಯ್ಕ ಅವರ ಶಿರಸಿಯಲ್ಲಿ 39926 ಹೆಚ್ಚು ಮತ ಬಿಜೆಪಿ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಲೋಕಸಭಾ ಚುನಾವಣೆ ಫಲಿತಾಂಶ 2024: ಉತ್ತರದಲ್ಲಿ ಬಿಜೆಪಿಗೆ ‘ಶೋಭೆ’ ಕರಂದ್ಲಾಜೆ..!

ಇನ್ನು ಬಿಜೆಪಿಯ ಶಿವರಾಂ ಹೆಬ್ಬಾರ ಯಲ್ಲಾಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಆದರೆ ಇವರು ಬಹಿರಂಗವಾಗಿಯೇ ಕಾಂಗ್ರೆಸ್‌ನ್ನು ಬೆಂಬಲಿಸಿದ್ದರು. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ಬೀಳಬಹುದು ಎಂಬ ನಿರೀಕ್ಷೆಯಿತ್ತು. ಕಾಂಗ್ರೆಸ್ ಕೂಡ ಇದನ್ನೇ ನಂಬಿತ್ತು. ಆದರೆ ಮತದಾರ ಮಾತ್ರ ಇಲ್ಲಿ ಬಿಜೆಪಿಗೆ ಮಣೆಹಾಕಿದ್ದಾನೆ. ಕಾಂಗ್ರೆಸ್ಗಿಂತ ಬಿಜೆಪಿಗೆ 18387 ಮತಗಳು ಬಿದ್ದಿವೆ.

ಈ ಮೂಲಕ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚು ಮತ ಪಡೆದು ಕಮಲಮಯವನ್ನಾಗಿ ಮಾಡಿದೆ. ಇನ್ನು ವಿಧಾನಸಭೆ ಚುನಾವಣೆಯೇ ಬೇರೆ. ಲೋಕಸಭೆ ಚುನಾವಣೆಯೇಬೇರೆ ಎಂದು ಮತದಾರ ತೋರಿಸಿದ್ದಾನೆ.

click me!