ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಪ್ರಧಾನಿ ಮೋದಿ ಹತಾಸೆಯಿಂದ ಬಹಳ ಲಘುವಾಗಿ ಮಾತನಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್, ಸುವರ್ಣನ್ಯೂಸ್
ರಾಯಚೂರು (ಏ.29) : ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಪ್ರಧಾನಿ ಮೋದಿ ಹತಾಸೆಯಿಂದ ಬಹಳ ಲಘುವಾಗಿ ಮಾತನಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ರಾಯಚೂರಿನಲ್ಲಿ ಸಿದ್ದರಾಮಯ್ಯ ವಿಶೇಷ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ತಾವು ಗ್ಯಾರಂಟಿ ಕಾರ್ಡ್ ನ ಭರವಸೆಗಳು ಈಡೇರಿಸಲು ಆಗಲ್ಲ, ಅವರಿಗೆ ಹತಾಸೆಯಾಗಿ ಹೀಗೆ ಹೇಳಿಕೆ ನೀಡಿದ್ದಾರೆ. ನಾವು 163 ಭರವಸೆಯಲ್ಲಿ 158 ಭರವಸೆಗಳು ಈಡೇರಿಸಿದ್ದೇವೆ ಎಂದರು.
ಪ್ರಧಾನಿಯವರು ಅವರ ಪಕ್ಷದ ನಾಯಕರು ನೀಡಿದ ಭರವಸೆ ಈಡೇರಿಸಿದ್ದಾರೆ ಎಂಬುವುದು ಮೊದಲು ನೋಡಬೇಕು. ಪ್ರಧಾನಿಯವರಿಗೆ ಎಲ್ಲಾ ಗೊತ್ತಿದ್ದು ಸುಳ್ಳು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿಯವರು 600 ಭರವಸೆ ಕೊಟ್ಟಿದ್ರು 55 ಮಾತ್ರ ಈಡೇರಿಸಿದ್ದಾರೆ.
ಯಾರಿಗೆ ಬಂದಿದೆ ಅಚ್ಛೇದಿನ್?: ಬಿಜೆಪಿ ವಿರುದ್ಧ ಸಿದ್ದು ವಾಗ್ದಾಳಿ
ಅವರ ಪಕ್ಷ ಸುಳ್ಳು ಹೇಳಿ ಜನರಿಗೆ ದ್ರೋಹಮಾಡಿದ್ದು ಗೊತ್ತಿದ್ರೂ ಪ್ರಧಾನಿ ಸುಮ್ಮನಿದ್ದಾರೆ. ಈ ಗ್ಯಾರಂಟಿ ಕೊಡಬಾರದು ಭಾರ ಆಗ್ತದೆ ರಾಜ್ಯ ಸಾಲಗಾರ ಆಗ್ತದೆ ಅಂತ ಹೇಳಿದ್ದಾರೆ. 2014ರಲ್ಲಿ ನೀಡಿದ ಭರವಸೆಯಲ್ಲಿ ನೀವು ಎಷ್ಟು ಈಡೇರಿಸಿದ್ದೀರಿ ಯುವಕರಿಗೆ ಉದ್ಯೊಗ ಕೊಟ್ಟಿದ್ದೀರಾ? ರೈತರ ಆದಾಯ ದುಪ್ಪಟ್ಟು ಮಾಡಿದ್ದೀರಾ ಅಂತ ಪ್ರಶ್ನಿಸಿದರು.
ಸ್ವಾತಂತ್ರ್ಯ ಬಂದಾಗಿನಿಂದ ದೇಶದ ಸಾಲ 53 ಲಕ್ಷ11 ಸಾವಿರ ಕೋಟಿ ಇತ್ತು,ನರೇಂದ್ರ ಮೋದಿ 9 ವರ್ಷದಲ್ಲಿ 152 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ವಸ್ತು ಸ್ಥಿತಿ ತಿರುಚಿ ಮೋದಿ ಮಾತನಾಡುತ್ತಾರಲ್ಲ ಇದೆ ನನಗೆ ಅಚ್ಚರಿಯಾಗುತ್ತೆ ಅಂತ ಸಿದ್ದರಾಮಯ್ಯ ಹೇಳಿದರು.
ನರೇಂದ್ರ ಮೋದಿ(Narendra Modi)ಯವರು ಇಲ್ಲಿ ತಮ್ಮ ಸರ್ಕಾರ ಬರುತ್ತೆ ಅಂತ ಭ್ರಮೆಯಲ್ಲಿದ್ದಾರೆ. ನಮ್ಮ ಗ್ಯಾರಂಟಿ ಬಗ್ಗೆ ಮಾತನಾಡುತ್ತಾರೆ. ಬಿಜೆಪಿಯವರ ವಾರೆಂಟಿ ಮುಗಿದಿದೆ. ಬಿಜೆಪಿ ರಾಜ್ಯ ನಾಯಕರು ಭ್ರಷ್ಟರಾಗಿದ್ದಾರೆ. ಅದಕ್ಕೆ ಮೋದಿ ,ನಡ್ಡಾ ,ಅಮಿತ್ ಶಾರನ್ನ ಕರೆಸುತ್ತಿದ್ದಾರೆ. ಮೋದಿ 100 ಬಾರಿ ಬಂದ್ರೂ ರಾಜ್ಯದಲ್ಲಿ ಬಿಜೆಪಿ ಬರಲ್ಲ.ಇದು ವಿಧಾನಸಭಾ ಚುನಾವಣೆ(Karnataka assembly election 2023) ಲೋಕಸಭಾ ಚುನಾವಣೆ ಅಲ್ಲ. ಸ್ಥಳಿಯ ವಿಚಾರಗಳು ಇಲ್ಲಿ ಚರ್ಚೆಯಾಗುತ್ತವೆ. ಮೋದಿ ಹೋದಲೆಲ್ಲಾ ಮಾಯಮಂತ್ರ ಮಾಡಲು ಆಗಲ್ಲ ಅಂತ ಸಿದ್ದರಾಮಯ್ಯ(Siddaramaiah) ವಾಗ್ದಾಳಿ ನಡೆಸಿದರು.
ಸಿದ್ದರಾಮನಹುಂಡಿ ಗಲಾಟೆಗೆ ಬಿಜೆಯವರೇ ಕಾರಣ:
ನಮ್ಮೂರಲ್ಲಿ ಗಲಾಟೆ ಶುರು ಮಾಡಿಸಿದ್ದು ಬಿಜೆಪಿಯವರು,ಇದುವರೆಗೂ ನಮ್ಮೂರಲ್ಲಿ ಗಲಾಟೆ ಆಗಿಲ್ಲ. ಯಾರೇ ಬಂದರೂ ನಮ್ಮವರು ಗಲಾಟೆ ಮಾಡಿಲ್ಲ. ಬಿಜೆಪಿ(Karnataka BJP)ಯವರದ್ದೇ ತಪ್ಪು ಅಂತ ಸಿದ್ದರಾಮನಹುಂಡಿಯಲ್ಲಿ ನಡೆದ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ವಿಚಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ರು. ಇನ್ನೂ ಮತಗಳ ಧೃವೀಕರಣಕ್ಕೆ ಬಿಜೆಪಿಯವರು ಗಲಾಟೆ ಮಾಡಿಸಿದ್ದಾರೆ. ಪ್ರತಾಪ್ ಸಿಂಹ(Pratap simha) ಯಾರು ಮಾತನಾಡಲು ಅವರು ನಮ್ಮ ಕ್ಷೇತ್ರಕ್ಕೆ ಸಂಬಂಧವಿಲ್ಲ. ಜಾತಿಬೇಧ ಯಾರು ಮಾಡ್ತಾರೆ ನಾನು ಎಲ್ಲಾ ವರ್ಗಕ್ಕೆ ಯೋಜನೆ ಕೊಟ್ಟಿದ್ದೇನೆ. ನಮ್ಮವರು ನನಗೆ ಜೈಕಾರ ಕೂಗುತ್ತಿದ್ದರಂತೆ ಇವರು ಸುಮ್ನೆ ಹೋಗಬೇಕಿತ್ತು. ಯಾಕೆ ಗಲಾಟೆ ಮಾಡಿದರು. ಅವರು ಕಂಪ್ಲೆಂಟ್ ಕೊಟ್ಟರೆ ನಮ್ಮವರು ಕಂಪ್ಲೆಂಟ್ ಕೊಡ್ತಾರೆ. ಆದ್ರೂ ಯಾರೇ ಆಗಲಿ ಪ್ರಚಾರ ವೇಳೆ ಗಲಾಟೆ ಮಾಡುವುದು ತಪ್ಪು ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ರು.
ಮೋದಿಯನ್ನ ಮಲ್ಲಿಕಾರ್ಜುನ ಖರ್ಗೆ ವಿಷಸರ್ಪಕ್ಕೆ ಹೋಲಿಸಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ. ಖರ್ಗೆ ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದಾರೆ. ಮತ್ತೆ ಅದರ ಬಗ್ಗೆ ಚರ್ಚೆ ಯಾಕೆ ಅದರ ಅವಶ್ಯಕತೆಯಿಲ್ಲ. ಬಸನಗೌಡ ಯತ್ನಾಳ ಬಗ್ಗೆ ನಾನು ಪ್ರತಿಕ್ರಿಯಿಸಿಲ್ಲ. ಪಶ್ಚಾತ್ತಾಪಕ್ಕಿಂತ ಯಾವುದು ದೊಡ್ಡದಿಲ್ಲ .ಖರ್ಗೆ ಇನ್ನೊಬ್ಬನಿಗೆ ನೋವಾಗಿದೆ ಅಂತ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲಿಗೆ ಆ ವಿಷಯ ಮುಗಿಯಿತು. ಕಾಂಗ್ರೆಸ್ ನಲ್ಲಿ ಯಾವುದೇ ಸಿಎಂ ಖುರ್ಚಿ ಕಚ್ಚಾಟಯಿಲ್ಲ. ಬಿಜೆಪಿಯಲ್ಲಿ ಶುರುವಾಗಿದೆ.ನಮ್ಮಲ್ಲಿ ಮುಂಚಿತವಾಗಿ ಸಿಎಂ ಅಭ್ಯರ್ಥಿ ಘೋಷಣೆ ಮಾಡಲ್ಲ. ಬಿಜೆಪಿಯವರು ಸಿಎಂ ಕುರ್ಚಿಗಾಗಿ ಈಗ ಕಚ್ಚಾಟ ಶುರು ಮಾಡಿದ್ದಾರೆ ಎಂದ ಸಿದ್ದರಾಮಯ್ಯ ಹೇಳಿದರು.
ಮೋದಿ ಯಾವತ್ತೂ ರೈತರ ಸಾಲಮನ್ನಾ ಮಾಡಿಲ್ಲ
ಪ್ರಧಾನಿ ಮೋದಿಯವರು ದೇಶದ ಪ್ರಧಾನಿಯಾಗಿ 9 ವರ್ಷವಾಯ್ತು. ಏಕೆ ರೈತರ ಸಾಲ ಪ್ರಧಾನಿ ಮೋದಿ ಮನ್ನಾ ಮಾಡಲಿಲ್ಲ. ಮೋದಿಯವರು ಯಾವತ್ತೂ ರೈತರ ಸಾಲಮನ್ನಾ ಮಾಡಿಲ್ಲ. ಬಿಜೆಪಿಯ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಭಿವೃದ್ಧಿ ಕೆಲಸ ಬಿಟ್ಟು ಲವ್ ಜಿಹಾದ್ ಬಗ್ಗೆ ಮಾತನಾಡಿ ಅಂತರೇ ನಾವು ಕೊಟ್ಟ ಭರವಸೆಗಳು ಜಾರಿ ಮಾಡೇ ಮಾಡುತ್ತೇವೆ. ಪ್ರಧಾನಿ ಮೋದಿಯ ಸುಳ್ಳಿಗೆ ತಕ್ಕ ಉತ್ತರ ನಾವು ಕೊಟ್ಟೆ ಕೊಡುತ್ತೇವೆ. ಸಂಸದ ತೇಜಸ್ವಿ ಸೂರ್ಯಗೆ ಅಮಾವಾಸ್ಯೆ ಅಂತ ನಾನು ಕರೆಯುತ್ತೇನೆ ಎಂದರು.
ರೈತರ ಸಾಲಮನ್ನಾ ಮಾಡಲು ಆಗಲ್ಲ.ರೈತರ ಸಾಲಮನ್ನಾ ಮಾಡಿದ್ರೆ, ರಾಜ್ಯ ದಿವಾಳಿ ಆಗುತ್ತೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ರು. ದೇಶದ ಅತೀ ದೊಡ್ಡ ಉದ್ಯಮಿಗಳಾದ ಅಂಬಾನಿ,ಅದಾನಿ, ವಿಜಯ ಮಲ್ಯ, ನೀರವ ಮೋದಿ ಇವರ ಸಾಲಮನ್ನಾ ಮಾಡಿದ್ರೆ ದೇಶ ಹಾಳಾಗಲ್ವಾ? ರೈತರ ಸಾಲಮನ್ನಾ ಮಾಡಿದ್ರೆ ದೇಶ ಹಾಳಾಗುತ್ತಾ? ಮೋದಿಯವರು ಸುಳ್ಳು ಹೇಳುತ್ತಾರೆ ಎಂಬುವುದು ನನ್ನ ನೋವಿನ ಸಂಗತಿಯಾಗಿದೆ. ಈಗಿನ ರಾಜ್ಯ ಸರ್ಕಾರದ ಬಗ್ಗೆ ಬೀದಿ - ಬೀದಿಯಲ್ಲಿ ಮಾತನಾಡುತ್ತಾರೆ. ಹುದ್ದೆಗಳ ನೇಮಕಾತಿಯಲ್ಲಿ ಲಂಚ, ಕಾಮಗಾರಿಯಲ್ಲಿ ಲಂಚ, ಎಲ್ಲದಕ್ಕೂ ಲಂಚ ಲಂಚ ಬೇಕಾಗಿದೆ. ಕೆಂಪಯ್ಯ ಪ್ರಧಾನಿಗೆ ಪತ್ರ ಬರೆದು ಒಂದೂವರೆ ವರ್ಷವಾಯ್ತು. ಏನು ಕ್ರಮಕೈಗೊಂಡರಾ? ಸಿಎಂ ಬಸವರಾಜ್ ಬೊಮ್ಮಾಯಿ(CM Basavaraj bommai) ದಾಖಲೆಗಳು ಕೊಡಿ ಎನ್ನುತ್ತಾರೆ. ಪಿಎಸ್ ಐ ನೇಮಕಾತಿಯಲ್ಲಿ ಅವ್ಯವಹಾರ ಮಾಡಿದ ಅಧಿಕಾರಿಗಳು ಜೈಲಿನಲ್ಲಿ ಇದ್ದಾರೆ. ಸಂತೋಷ ಪಾಟೀಲ್ ಆತ್ಮಹತ್ಯೆ(Santosh patil suicide case) ಮಾಡಿಕೊಂಡಿದ್ದಾನೆ. ಈಶ್ವರಪ್ಪ ರಾಜೀನಾಮೆ ಕೊಟ್ಟು ಮನೆಗೆ ಹೋಗಿದ್ದಾರೆ. ಇನ್ನೂ ಬಿಜೆಪಿ ಶಾಸಕ ವೀರುಪಾಕ್ಷಪ್ಪ ಮಾಡಾಳ್ ಮಗ ಲಂಚ ಸ್ವೀಕಾರ ಮಾಡುವಾಗ ಸಿಕ್ಕ ಬಿದ್ದಿದ್ದಾನೆ. ಇಷ್ಟು ದಾಖಲೆಗಳು ಸಾಕು ಆಗುದಿಲ್ವಾ ಸಿಎಂ ಬೊಮ್ಮಾಯಿಯವರೇ..ನನ್ನ ಕಾಲದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ನೀವು ಆರೋಪ ಮಾಡುವುದು ಬಿಟ್ಟು, ದಾಖಲೆಗಳು ಇದ್ರೆ ತನಿಖೆ ಮಾಡಿಸಿ, ನಾನು ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಐದು ವರ್ಷ ಸರ್ಕಾರ ನಡೆಸಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಮೋದಿ ಹೇಳಿದ ‘ಆತ್ಮಹತ್ಯೆ ಜೋಕಿಗೆ’ ರಾಹುಲ್, ಪ್ರಿಯಾಂಕಾ ಕಿಡಿ
ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಆಗಲ್ಲ
ಈಗ ವಿಧಾನಸಭಾ ಚುನಾವಣೆ ನಡೆದಿದೆ. ಈ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಬರಲ್ಲ.ನಾನು ಭರವಸೆಯಿಂದ ಹೇಳುತ್ತಿರುವೆ. 130ಕ್ಕೂ ಹೆಚ್ಚು ಸ್ಥಾನಗಳು ಕಾಂಗ್ರೆಸ್ ಸೀಟುಗಳು ಬರುತ್ತವೆ. ಜನರು ಸಂಮಿಶ್ರ ಸರ್ಕಾರದಿಂದ ಬೇಸತ್ತು ಹೋಗಿದ್ದಾರೆ.ಜನರು ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ಬರುತ್ತೆ ಎಂದು ಸಿದ್ದರಾಮಯ್ಯ ನುಡಿದರು.