ಕಾಂಗ್ರೆಸ್ ಗ್ಯಾರಂಟಿಗಳ ಲಾಭ ಪಡೆಯೋರಲ್ಲಿ ಬಿಜೆಪಿಗರೇ ಮೊದಲು: ಸಚಿವ ಮಧು ಬಂಗಾರಪ್ಪ

By Kannadaprabha News  |  First Published Jan 17, 2024, 9:11 AM IST

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಹಾಕುತ್ತಿರುವುದಷ್ಟೇ ಅಲ್ಲ, ಫಲಾನುಭವಿಗಳು ಕೂಡ ಬಿಜೆಪಿಯವರೇ ಆಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಇವರೆಲ್ಲರೂ ಕಾಂಗ್ರೆಸ್‌ಗೇ ಮತ ನೀಡುತ್ತಾರೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. 
 


ಶಿವಮೊಗ್ಗ (ಜ.17): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಹಾಕುತ್ತಿರುವುದಷ್ಟೇ ಅಲ್ಲ, ಫಲಾನುಭವಿಗಳು ಕೂಡ ಬಿಜೆಪಿಯವರೇ ಆಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಇವರೆಲ್ಲರೂ ಕಾಂಗ್ರೆಸ್‌ಗೇ ಮತ ನೀಡುತ್ತಾರೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. 

ಆ ಎಲ್ಲ ಯೋಜನೆಗಳ ಸೌಲಭ್ಯ ಪಡೆಯುತ್ತಿರುವವರಲ್ಲಿ ಶೇ.70ರಷ್ಟು ಬಿಜೆಪಿ ಕಾರ್ಯಕರ್ತರೇ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು. ಬಿಜೆಪಿಯವರು ಏನೇ ಟೀಕೆ ಟಿಪ್ಪಣಿ ಮಾಡಿಕೊಳ್ಳಲಿ. ಜನ ಅವರ ಮಾತನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ. ರಾಜ್ಯ ಸರ್ಕಾರ ಉತ್ತಮ ಆಡಳಿತವನ್ನು ನೀಡುತ್ತಿದೆ. ಜನರು ಸಿದ್ದರಾಮಯ್ಯ ಅವರ ಹೆಸರನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಮತ್ತೆ ಕೇಂದ್ರದಲ್ಲಿ ಕೂಡ ನಮಗೇ ಅಧಿಕಾರ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Latest Videos

undefined

‘ಸಬ್ ಕಾ ಸಾಥ್-ಸಬ್ ಕಾ ವಿಕಾಸ್’ ಪ್ರತಿಪಾದಕರಿಂದ ಧರ್ಮ ತಾರತಮ್ಯ: ಸಿದ್ದರಾಮಯ್ಯ

ಅನಂತಕುಮಾರ್‌ ವಿರುದ್ಧ ವಾಗ್ದಾಳಿ: ಬಿಜೆಪಿಯವರು ಆ ಪಕ್ಷದಲ್ಲಿ ಕೆಲ ಹುಚ್ಚರನ್ನು ಇಟ್ಟುಕೊಂಡಿದ್ದಾರೆ ಎಂದು ಪರೋಕ್ಷವಾಗಿ ಸಂಸದ ಅನಂತಕುಮಾರ್ ಅವರನ್ನು ಗುರಿಯಾಗಿ ಮಾತನಾಡಿದ ಮಧು ಬಂಗಾರಪ್ಪ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದ ದಾಳಿ ನಡೆಸಿದ ಮಾಜಿ ಸಂಸದ ಅನಂತ್‌ಕುಮಾರ್ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದರು. ಮಾಡುವುದಕ್ಕೆ ಅವರಿಗೆ ಬೇರೇನು ಕೆಲಸವಿಲ್ಲ. ಅವರು ರಾಮನ ಹೆಸರಿನಲ್ಲೂ ರಾಜಕೀಯ ಮಾಡುತ್ತಾರೆ, ಹಿಂದುತ್ವದ ಹೆಸರಿನಲ್ಲೂ ರಾಜಕೀಯ ಮಾಡುತ್ತಾರೆ. 

ಗೊಂದಲ ಮೂಡಿಸುವ ಹೇಳಿಕೆ ನೀಡಿರುವ ಅನಂತ್‌ಕುಮಾರ್ ಹೆಗಡೆ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಮುಂದಿನ ಚುನಾವಣೆಯಲ್ಲಿ ಅನಂತಕುಮಾರ್ ಹೆಗಡೆ ಮತ್ತು ನಳಿನ್‌ಕುಮಾರ್ ಕಟೀಲ್ ಅವರಿಗೇ ಬಿಜೆಪಿ ಟಿಕೆಟ್ ನೀಡಬೇಕು. ಮಂಗಳೂರಿನ ಉಸ್ತುವಾರಿ ನಾನೇ ಇದ್ದೇನೆ. ಪಕ್ಕದ ಜಿಲ್ಲೆ ಉತ್ತರ ಕನ್ನಡಕ್ಕೂ ಹೋಗುತ್ತೇನೆ. ಅಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಹೇಗೆ ಗೆಲ್ಲಿಸಿಕೊಂಡು ಬರುತ್ತೇನೆ ನೋಡುತ್ತಿರಿ ಎಂದು ಸವಾಲ್ ಎಸೆದರು.

ಅಲ್ಲಮಪ್ರಭುಗೆ ಸಿಎಂ ಗೌರವ: ಶಿವಮೊಗ್ಗದ ಫ್ರೀಡಂ ಪಾರ್ಕ್‌ಗೆ ಅಲ್ಲಮ ಪ್ರಭುಗಳ ಹೆಸರನ್ನು ಇಡಬೇಕು ಎಂದು ಸಿಎಂ ಸಿದ್ಧರಾಮಯ್ಯ ಅವರಲ್ಲಿ ಸೂಕ್ಷ್ಮವಾಗಿ ಪ್ರಸ್ತಾಪ ಮಾಡಿದ್ದೆ. ಅನುಭವ ಮಂಟಪದ ಮೂಲಕ 12ನೇ ಶತಮಾನದಲ್ಲಿ ಸಾಮಾಜಿಕ ನ್ಯಾಯ ಕೊಡಿಸುವ ಕೆಲಸವನ್ನು ಅಲ್ಲಮಪ್ರಭು ಮಾಡಿದ್ದರು. ಫ್ರೀಡಂ ಪಾರ್ಕ್‌ಗೆ ಅವರ ಹೆಸರು ಇಡುವ ಪ್ರಸ್ತಾಪಕ್ಕೆ ಬಹಿರಂಗ ಸಭೆಯಲ್ಲಿ ಸಿಎಂ ಒಪ್ಪಿಗೆ ಸೂಚಿಸುವ ಮೂಲಕ ಅಲ್ಲಮಪ್ರಭುಗೆ ಗೌರವ ಸಮರ್ಪಣೆ ಮಾಡಿದ್ದಾರೆ. ಅಲ್ಲಮ ಹೆಸರಿನಲ್ಲಿಯೇ ಅಲ್ಲಾ, ಅಮ್ಮ, ಪ್ರಭು ಇದ್ದು, ಇದು ಮುಸ್ಲಿಂ, ಹಿಂದೂ ಮತ್ತು ಕ್ರೈಸ್ತ ಧರ್ಮಗಳ ಸಂಕೇತವಾಗಿದೆ ಎಂದು ವ್ಯಾಖ್ಯಾನಿಸಿದರು.

ಶರಣರ ಸ್ಥಳಗಳು ಅಭಿವೃದ್ಧಿಯಾಗಿಲ್ಲ: ಆದರೆ, ಅಲ್ಲಮಪ್ರಭು ಹುಟ್ಟಿದ ಊರು ಅಭಿವೃದ್ಧಿಯಾಗದೇ ಇರುವುದು ನನ್ನ ಮನಸ್ಸಿಗೆ ನೋವಾಗಿತ್ತು. ಈ ವಿಚಾರಕ್ಕೆ ಸಿಎಂ ಅವರು ಕೂಡ ತಕ್ಷಣ ಸ್ಪಂದಿಸಿದ್ದಾರೆ. ಅಲ್ಲಮನ ಜನ್ಮಸ್ಥಳ ಇನ್ನೂ ಯಾಕೇ ಅಭಿವೃದ್ಧಿಯಾಗಿಲ್ಲ? ಶಿಕಾರಿಪುರ ತಾಲೂಕಿನಲ್ಲಿರುವ ಯಾವ ಶರಣರ ಸ್ಥಳಗಳು ಇದುವರೆಗೂ ಅಭಿವೃದ್ಧಿ ಆಗಿಲ್ಲ. ಇದಕ್ಕೆ ಅಲ್ಲಿನ ನಾಯಕರೇ ಉತ್ತರ ನೀಡಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಪ್ರಮುಖರಾದ ಎನ್.ರಮೇಶ್, ಕಲಗೋಡು ರತ್ನಾಕರ್, ವೈ.ಎಚ್. ನಾಗರಾಜ್, ಜಿ.ಡಿ. ಮಂಜುನಾಥ್, ಎಸ್.ಕೆ. ಮರಿಯಪ್ಪ ಸೇರಿದಂತೆ ಹಲವರಿದ್ದರು.

ಬಿಜೆಪಿಯವರಿಗಷ್ಟೇ ಅಲ್ಲ, ಕಾಂಗ್ರೆಸ್‌ನವರಿಗೂ ಶ್ರೀರಾಮಚಂದ್ರ ದೇವರು: ಸಚಿವ ನಾಗೇಂದ್ರ

ಸಂಸದರ ಧ್ವಂದ್ವ ನಿಲುವು: ಶಿವಮೊಗ್ಗದಲ್ಲಿ ನಡೆದ ಯುವನಿಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಸದರು ಮತ್ತು ಶಾಸಕರು ಮುಖ್ಯಮಂತ್ರಿ ಅವರನ್ನು, ಯೋಜನೆಯನ್ನು ಹೊಗಳಿದ್ದರು. ಆದರೆ, ಮಾರನೇ ದಿನ ಟೀಕೆ ಮಾಡಿದ್ದಾರೆ. ಇದು ದ್ವಂದ್ವ ನಿಲುವಲ್ಲದೇ ಮತ್ತೇನು? ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯುವ ಸಮುದಾಯದವನ್ನು ನೋಡಿ, ಸಂಸದರಷ್ಟೇ ಅಲ್ಲ, ಬಿಜೆಪಿ ಶಾಸಕರು ಭಯಗೊಂಡಿದ್ದಾರೆ ಎಂದು ಸಚಿವ ಮಧು ಛೇಡಿಸಿದರು. ಭಾರತ್ ಜೋಡೋ ನ್ಯಾಯ್ ಯಾತ್ರೆ ಆರಂಭವಾಗಿದೆ. ರಾಜ್ಯದ ನಾಯಕರ ಜೊತೆ ನಾನು ಕೂಡ ರಾಹುಲ್ ಗಾಂಧಿ ಅವರ ಜೊತೆ ಹೆಜ್ಜೆ ಹಾಕುತ್ತೇನೆ. ರಾಹುಲ್ ಅವರ ಪ್ರತಿಯೊಂದು ಹೆಜ್ಜೆಯೂ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ. ಬಿಜೆಪಿಯ ಧರ್ಮಾಧಾರಿತ ರಾಜ್ಯಕಾರಣ ಕೊನೆಯಾಗುವ ಕಾಲ ದೂರವಿಲ್ಲ. ನಾವು ರಾಮನ ಭಕ್ತರು, ಹನುಮಂತನ ಭಕ್ತರು, ಲಕ್ಷ್ಮಣನ ಭಕ್ತರು ಕೂಡ. ರಾಮ ಯಾರ ಸ್ವತ್ತು ಅಲ್ಲ ಎಂದರು.

click me!