ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂಬ ಸಂಸದ ಡಿ.ಕೆ. ಸುರೇಶ್ ಆರೋಪಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿರುಗೇಟು ಕೊಟ್ಟಿದ್ದಾರೆ.
ಬೆಂಗಳೂರು, (ಆ. 23): ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ನೋಡಿದರೆ ನಗಬೇಕೋ ಅಳಬೇಕೋ ಗೊತ್ತಿಲ್ಲ ಎಂದು ಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಂಸದ ಸುರೇಶ್ ಆರೋಪಕ್ಕೆ ವ್ಯಂಗ್ಯವಾಡಿದ್ದಾರೆ.
ಇಂದು (ಬಾಣುವಾರ) ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರೊಂದಿಗೆ ಚರ್ಚೆಯ ಬಳಿಕ ಮಾತನಾಡಿ ವಿಜಯೇಂದ್ರ, ಕೋವಿಡ್ ಸಂದರ್ಭದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೋಗಿ ಕಾಂಗ್ರೆಸ್ ಈಗ ಬೆತ್ತಲಾಗಿದೆ. ಈಗ ಫೋನ್ ಟ್ಯಾಪಿಂಗ್ ಆರೋಪ ಮಾಡುವ ಮೂಲಕ ತಮ್ಮ ಪಕ್ಷವನ್ನು ಚಾಲ್ತಿಯಲ್ಲಿರಿಸುವ ಯತ್ನವನ್ನು ಡಿಕೆ ಸುರೇಶ್ ಹಾಗೂ ಡಿಕೆ ಶಿವಕುಮಾರ್ ಅವರು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
'ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಗೆ ಬಿಜೆಪಿಯ ಕುಮ್ಮಕ್ಕೇ ಕಾರಣ'
ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕೆಲಸ ಮಾಡಿದರೆ ನಿಮ್ಮ ಪಕ್ಷಕ್ಕೆ ಒಳಿತು. ಡಿಜೆ ಹಳ್ಳಿ ಪ್ರಕರಣದಲ್ಲಿ ಸತ್ಯ ಜಗಜ್ಜಾಹೀರಾಗಿದೆ. ಸತ್ಯ ಶೋಧನಾ ಸಮಿತಿ ನಿಮಗೆ ಬೇಕಿರಲಿಲ್ಲ. ನಿಮ್ಮ ಪಕ್ಷದ ಅಂತರಂಗ ತಿಳಿಯಲು ಸತ್ಯಶೋಧನಾ ಸಮಿತಿ ಬಳಸಿಕೊಳ್ಳಿ ಎಂದು ಟಾಂಗ್ ಕೊಟ್ಟರು.
ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಕಚ್ಚಾಟದಿಂದ ಗಲಭೆ ಘಟನೆ ನಡೆದಿದೆ. ಇದು ಎಲ್ಲರಿಗೂ ಗೊತ್ತಾಗಿದೆ. ರಾಜ್ಯದ ಜನರನ್ನು ಮೂರ್ಖರನ್ನಾಗಿ ಮಾಡುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಲು ಪ್ರಯತ್ನಿಸುತ್ತಿದೆ. ಆದರೆ ಅದಾಗುವುದಿಲ್ಲ ಎಂದರು.