ಬೆಂಗಳೂರಿನ ಡಿಜೆ ಮತ್ತು ಕೆಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ನಾಯಕರು ಆರೋಪ-ಪ್ರತ್ಯಾರೋಪಗಳನ್ನ ಮಾಡುತ್ತಿದ್ದಾರೆ.
ಬೆಂಗಳೂರು, (ಆ.23): ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆಗೆ ಬಿಜೆಪಿಯ ಕುಮ್ಮಕ್ಕೇ ಕಾರಣ ಎಂಬುದಾಗಿ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತಂತೆ ಇಂದು (ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಸುರೇಶ್, ಬಿಬಿಎಂಪಿ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಘಟನೆ ಬಗ್ಗೆ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದೆ. ನಿಜಕ್ಕೂ ಬಿಜೆಪಿ ನಾಯಕರ ಕುಮ್ಮಕ್ಕಿನಿಂದಲೇ ಗಲಭೆ ನಡೆದಿದೆ ಎಂದರು.
ಆಯುಕ್ತ ಕಮಲ್ ಪಂತ್‌ಗೆ ಬೆದರಿಕೆ ಹಾಕಿಲ್ಲ: ಡಿಕೆಶಿ
ಗಲಾಟೆ ಆರಂಭವಾದ ನಂತರ ನಾಲ್ಕು ಗಂಟೆ ಸರ್ಕಾರ ಸುಮ್ಮನೇ ಇದ್ದದು ಏಕೆ..? ಗಲಭೆ ನಡೆಯುತ್ತಿದ್ದರೂ ಅದನ್ನು ತಡೆಯದೇ ಹೋಗಿದ್ದು ಇದಕ್ಕೆ ಸಾಕ್ಷಿ ಎಂದು ಹೇಳಿದರು.
ಇನ್ನೂ ಇದೇ ವೇಳೆ ಡಿಕೆಶಿ ಫೋಟ್ ಟ್ಯಾಪಿಂಗ್ ಬಗ್ಗೆ ಮಾತನಾಡಿದ ಅವರು ಫೋನ್ ಟ್ಯಾಪಿಂಗ್ ಬರೀ ಆರೋಪವಲ್ಲ, ಇದು ಸತ್ಯ. ಕೆಪಿಸಿಸಿ ಅಧ್ಯಕ್ಷರ ಪೋನ್ ಕಳೆದ 15 ದಿನಗಳಿಂದ ಡಿಸ್ಟರ್ಬ್ ಇದೆ ಎಂದು ತಿಳಿಸಿದರು.
ಇದೇ ಕಾರಣದಿಂದಾಗಿ ಡಿಕೆ ಶಿವಕುಮಾರ್ ದೂರು ನೀಡಿದ್ದಾರೆ. ಒಂದು ಪಕ್ಷದ ಅಧ್ಯಕ್ಷರು ಗಂಭೀರ ಆರೋಪ ಮಾಡಿದ್ದಾರೆ. ಇದನ್ನು ಲಘುವಾಗಿ ಪರಿಗಣಿಸೋಕೆ ಸಾಧ್ಯವಿಲ್ಲ. ವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡೋಕೆ ಅವಕಾಶವಿಲ್ಲ. ಪೊಲೀಸರು ತನಿಖೆ ಮಾಡಿ ಸತ್ಯಾಸತ್ಯತೆಯನ್ನು ಬಹಿರಂಗ ಪಡಿಸಲಿ ಎಂದು ಒತ್ತಾಯಿಸಿದರು.