
ದಾವಣಗೆರೆ (ಮಾ.10): ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಕ್ಕೆ ರೂಪಿಸಲಾದ ಮಾನದಂಡದಲ್ಲಿ ದೇಶದಲ್ಲೇ ದಾವಣಗೆರೆ 9ನೇ ಸ್ಥಾನದಲ್ಲಿದ್ದು, ಹಿಂದೆ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣ, ಬೇತೂರು ರಸ್ತೆ ಬಸ್ಸು ನಿಲ್ದಾಣ, ಹಳೆ ಬಸ್ಸು ನಿಲ್ದಾಣಕ್ಕೆ ಒಪ್ಪಿಗೆ ನೀಡಿದ್ದು, ಹಳೆ ಬಸ್ಸು ನಿಲ್ದಾಣವನ್ನು ತರಾತುರಿಯಲ್ಲಿ ಉದ್ಘಾಟಿಸಿದ ಬಿಜೆಪಿಯವರು ಹಾಳು ಗೆಡವಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕಿಡಿಕಾರಿದ್ದಾರೆ.
ನಗರದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿರುವ ಕೆಎಸ್ಸಾರ್ಟಿಸಿ ಮುಖ್ಯ ಬಸ್ಸು ನಿಲ್ದಾಣ, ಬೇತೂರು ರಸ್ತೆಯ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದ ಲೋಕಾರ್ಪಣೆ ಸಮಾರಂಭ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣ ಸುಮಾರು 120 ಕೋಟಿ ರು. ವೆಚ್ಚದಲ್ಲಿ ಅತ್ಯಾಧುನಿಕವಾಗಿ ನಿರ್ಮಾಣವಾಗಿದ್ದು, ಇದೊಂದು ವ್ಯವಸ್ಥಿತ ನಿಲ್ದಾಣವಾಗಿದೆ ಎಂದರು.
ಬೇತೂರು ಬಸ್ಸು ನಿಲ್ದಾಣ ನಿರ್ಮಾಣಕ್ಕೆ ಯಲ್ಲಪ್ಪ ಅಂಬರಕರ್ ಕುಟುಂಬವನ್ನು ಅಭಿನಂದಿಸಬೇಕು. ದೂಡಾ ಜೊತೆ ಅಂಬರಕರ ಕುಟುಂಬ ಲೇಔಟ್ ಮಾಡಲು ಮುಂದಾಗಿತ್ತು. ಆದರೆ, ಬಸ್ಸು ನಿಲ್ದಾಣ ಮಾಡಲು ಸಹಕರಿಸಿತು. 10 ಕೋಟಿ ವೆಚ್ಚದಲ್ಲಿ ಅಲ್ಲೊಂದು ನಿಲ್ದಾಣವಾಗಿದೆ. ನಾವು ಹಿಂದೆ ಡಿಆರ್‌ಆರ್ ಶಾಲೆಗೆ ಸೈಕಲ್ ನಲ್ಲಿ ಹೋಗುವಾಗ ಆಗ ಶಾಸಕರಿದ್ದ ಪಂಪಾಪತಿ ಇಲ್ಲಿ ಶಾಮಿಯಾನ ಹಾಕಿಕೊಂಡು, 3 ತಿಂಗಳ ಧರಣಿ ಸತ್ಯಾಗ್ರಹ ಮಾಡಿ, ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣಕ್ಕಾಗಿ ಹೋರಾಟ ನಡೆಸಿದ್ದರು. ಆಗ ಊರ ಹೊರಗ ನಿಲ್ದಾಣ ಆಯಿತೆಂದು ಜನರೂ ಮಾತನಾಡುತ್ತಿದ್ದರು. ಈಗ ಅದೇ ನಿಲ್ದಾಣ ಊರ ಮಧ್ಯೆ ಇದೆ ಎಂದು ಅವರು ನೆನಪು ಮೆಲಕು ಹಾಕಿದರು.
ನಮ್ಮ 5 ಗ್ಯಾರಂಟಿಗಳಿಂದ ಪ್ರಧಾನಿ ಮೋದಿಯವರಿಗೇ ಶಾಕ್: ಸಚಿವ ಚಲುವರಾಯಸ್ವಾಮಿ
ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದಲ್ಲಿ ಕೆಲಸ ಮಾಡಿದ್ದ ಕೆ.ಎಸ್.ಬಸವಂತಪ್ಪ ಈಗ ಶಾಸಕನಾಗಿ, ಅದೇ ನಿಲ್ದಾಣ ಉದ್ಘಾಟನೆಯಲ್ಲಿ ಭಾಗಿಯಾಗಿದ್ದಾರೆ. ಇನ್ನು ಬಸ್ಸು ನಿಲ್ದಾಣಕ್ಕೆ ಪಂಪಾಪತಿ ಹೆಸರಿಡುವಂತೆ ಬೇಡಿಕೆ ಇದೆ. ಸಚಿವ ರಾಮಲಿಂಗಾ ರೆಡ್ಡಿ ಸಾರಿಗೆ ನಿಗಮದ ಸಭೆಯಲ್ಲಿ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು. ಮುಂದಿನ ದಿನಗಳಲ್ಲಿ ನಗರ, ಗ್ರಾಮೀಣ ಭಾಗಕ್ಕೆ ಬಸ್ಸುಗಳ ಸೇವೆಯನ್ನು ವಿಸ್ತರಿಸಲಾಗುವುದು. ಹೊಸ ಮಾರ್ಗಕ್ಕೂ ಜನರ ಬೇಡಿಕೆಗೆ ಸ್ಪಂದಿಸಿ, ಬಸ್ಸು ಸೇವೆ ಒದಗಿಸಲಾಗುವುದು ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.