
ಬೆಂಗಳೂರು (ಅ.31): ಜೆನ್‌ಝೀಗಳ ಓಲೈಕೆಗೆ ಮುಂದಾಗಿರುವ ಬಿಜೆಪಿ ನವೆಂಬರ್‌ನಲ್ಲಿ ಒಂದು ತಿಂಗಳ ಕಾಲ ‘ಪ್ರಜಾಪ್ರಭುತ್ವ ಉಳಿಸಿ-ಅರಾಜಕತೆ ಅಳಿಸಿ’ ಅಭಿಯಾನ ಹಮ್ಮಿಕೊಂಡಿದೆ.
ಯುವ ಸಮುದಾಯಕ್ಕೆ ಎಸ್ಐಆರ್ ಕುರಿತಂತೆ ಸರಿಯಾದ ಮಾಹಿತಿ ನೀಡಿ ಕಾಂಗ್ರೆಸ್ಸಿನ ಅರಾಜಕತೆಯ ಮನಸ್ಥಿತಿಯನ್ನು ಬಯಲು ಮಾಡುವ ಉದ್ದೇಶದಿಂದ ನ.1ರಿಂದ ನ.30ರವರೆಗೆ ಕಾಲೇಜು ವಿದ್ಯಾರ್ಥಿಗಳು, ಯುವಜನರ ನಡುವೆ ಈ ಅಭಿಯಾನ ನಡೆಯಲಿದೆ. ಅಲ್ಲದೆ, ನ.2 ರಿಂದ 6ರವರೆಗೆ ಐದು ದಿನಗಳ ಕಾಲ ಹತ್ತು ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಪಾದಯಾತ್ರೆ ಮತ್ತು ಬಹಿರಂಗ ಸಭೆ ನಡೆಸಲಾಗುವುದು. ಇದರಲ್ಲಿ ಪಕ್ಷ ನೂತನ ರಾಜ್ಯ ಉಸ್ತುವಾರಿ ಹರೀಶ್ ದ್ವಿವೇದಿ ಸೇರಿದಂತೆ ರಾಜ್ಯದ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ.
ಶುಕ್ರವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ವಿ.ಸುನೀಲ್‌ಕುಮಾರ್, ಕಾಂಗ್ರೆಸ್ ಈ ದೇಶದಲ್ಲಿ ಎಸ್ಐಆರ್ ವಿಚಾರದ ಮೂಲಕ ಯುವಕರನ್ನು ಸಂಘರ್ಷಕ್ಕೆ ಇಳಿಸುವ ಹಾಗೂ ಯುವಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸವನ್ನು ಕಳೆದ ಕೆಲವು ತಿಂಗಳಿನಿಂದ ನಿರಂತರವಾಗಿ ಮಾಡುತ್ತಿದೆ. ಯುವಜನರ ನಡುವೆ ದೊಡ್ಡ ಸಂವಾದ ಗೋಷ್ಠಿಗಳನ್ನು ರಾಜ್ಯಾದ್ಯಂತ ನಡೆಸಲಾಗುವುದು ಎಂದು ವಿವರಿಸಿದರು.
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಯುವಜನರನ್ನು ಕಣ್ಮುಂದೆ ಇಟ್ಟುಕೊಂಡು ಅನೇಕ ಯೋಜನೆಗಳನ್ನು ಮಾಡಿದ್ದಾರೆ. ಸ್ಟಾರ್ಟಪ್ ಸಂಖ್ಯೆಗಳೂ ಹೆಚ್ಚಾಗಿವೆ. 2,12,283 ಸ್ಟಾರ್ಟಪ್‌ಗಳು ಆರಂಭವಾಗಿವೆ. ಈ ಪೈಕಿ 21,601 ಕರ್ನಾಟಕದಲ್ಲೇ ಆರಂಭಗೊಂಡಿವೆ. ಕ್ರೀಡಾ ಕ್ಷೇತ್ರದಲ್ಲಿ ಯುವಜನರಿಗಾಗಿ ಹೊಸ ಯೋಜನೆಗಳನ್ನು ನೀಡಿದ್ದಾರೆ. ಆದರೆ, ಕಾಂಗ್ರೆಸ್ ಯುವಜನರ ಮನಸ್ಸನ್ನು ದಾರಿ ತಪ್ಪಿಸುವ ಯತ್ನ ಮಾಡುತ್ತಿದೆ. ಭಾರತವನ್ನು ಬಾಂಗ್ಲಾ, ಶ್ರೀಲಂಕಾ, ಫ್ರಾನ್ಸ್ ಮಾಡಲು, ಇಲ್ಲಿ ಅರಾಜಕತೆ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ನ.3ರಂದು ಹುಬ್ಬಳ್ಳಿ, 5ರಂದು ಬೆಂಗಳೂರಿನಲ್ಲಿ ಕಾರ್ಯಕ್ರಮ ಇದೆ. ರಾಜ್ಯದೆಲ್ಲೆಡೆ ವಿವಿಧ ಹಂತಗಳಲ್ಲಿ ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.
ಕಾಂಗ್ರೆಸ್ಸಿನದೇ ಯೋಜನೆಗಳನ್ನು ಪರಿಷ್ಕರಿಸುವ ಸರಕಾರ, ಮತದಾರರ ಪಟ್ಟಿ ಪರಿಷ್ಕರಣೆಗೆ (ಎಸ್ಐಆರ್) ಯಾಕೆ ವಿರೋಧ ಮಾಡುತ್ತಿದೆ? ಎಸ್ಐಆರ್, ಚುನಾವಣಾ ಆಯೋಗದ ಕಾನೂನುಬದ್ಧ ಚಟುವಟಿಕೆ. ಇದನ್ನು ನೆಪವಾಗಿ ಇಟ್ಟುಕೊಂಡು, ಸುಪ್ರೀಂ ಕೋರ್ಟ್ ಹೇಳಿದಂತೆ ಯುವಕರನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡು ಸಂಘರ್ಷಕ್ಕೆ ಇಳಿಸುವುದು ಸರಿಯಲ್ಲ ಎಂದು ತಿಳಿಸಿದರು.
ಈ ದೇಶದಲ್ಲಿ 12 ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ಆಗಿದೆ. 10 ಬಾರಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗಲೇ ಆಗಿದೆ. 2004ರಲ್ಲಿ ಎಸ್ಐಆರ್ ಆಗಿದ್ದು, ಸುಮಾರು 2 ದಶಕಗಳ ಬಳಿಕ ಮತದಾರರ ಪಟ್ಟಿ ಪರಿಷ್ಕರಿಸಲಾಗುತ್ತಿದೆ. ಈ ಕುರಿತು ಸುಳ್ಳು ಸುದ್ದಿ ಹಬ್ಬಿಸುವ ಪ್ರಯತ್ನ ಕಾಂಗ್ರೆಸ್ಸಿನದು. ದೇಶವನ್ನು ಅಸ್ಥಿರಗೊಳಿಸಲು ಯಾವ ಶಕ್ತಿಯಿಂದಲೂ ಅಸಾಧ್ಯ ಎಂದು ಸುನೀಲ್‌ಕುಮಾರ್ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.