ರಾಹುಲ್‌ಗೆ ಕಂಡದ್ದು ರಾಜಕೀಯ ನಿರುದ್ಯೋಗ: ಸಂಸದ ತೇಜಸ್ವಿ ಸೂರ್ಯ

By Kannadaprabha News  |  First Published Feb 6, 2023, 1:30 AM IST

ಕಳೆದ ಎಂಟು ವರ್ಷಗಳಿಂದ ದೇಶದಲ್ಲಿ ಅಭಿವೃದ್ಧಿಯ ಶಕೆಯನ್ನೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆದರೂ ಭಾರತ್‌ ಜೋಡೋ ಯಾತ್ರೆ ವೇಳೆ ರಾಹುಲ್‌ ಗಾಂಧಿ ಅವರು ದೇಶದಲ್ಲಿ ನಿರುದ್ಯೋಗದ ಬಗ್ಗೆ ಆರೋಪಿಸುತ್ತಿದ್ದಾರೆ. ವಾಸ್ತವದಲ್ಲಿ ರಾಹುಲ್‌ ಹಾಗೂ ಕಾಂಗ್ರೆಸಿಗರು ತಮ್ಮ ರಾಜಕೀಯ ನಿರುದ್ಯೋಗವನ್ನೇ ದೇಶದ ನಿರುದ್ಯೋಗ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ: ಸಂಸದ ತೇಜಸ್ವಿ ಸೂರ್ಯ


ಮಂಗಳೂರು(ಫೆ.06):  ಮುಂದಿನ 25 ವರ್ಷಗಳ ಭಾರತ ಅಭಿವೃದ್ಧಿಯ ದೂರದೃಷ್ಟಿಯನ್ನು ಇರಿಸಿಕೊಂಡು 2023ನೇ ಸಾಲಿನ ಬಜೆಟ್‌ನ್ನು ಕೇಂದ್ರ ಸರ್ಕಾರ ರೂಪಿಸಿದೆ. ಕಳೆದ ಎಂಟು ವರ್ಷಗಳಲ್ಲಿ ಈ ದಿಕ್ಕಿನಲ್ಲಿ ಸಾಗಲು ಸೂಕ್ತ ರನ್‌ವೇಯನ್ನು ಪ್ರಧಾನಿ ನರೇಂದ್ರ ಮೋದಿ ಕಲ್ಪಿಸಿದ್ದಾರೆ. ಈಗ ಅದೇ ರನ್‌ವೇ ಶಕ್ತಿಯನ್ನು ಬಳಸಿಕೊಂಡು ಭಾರತವನ್ನು ಅಭಿವೃದ್ಧಿಯಲ್ಲಿ ವಿಶ್ವಮಟ್ಟದಲ್ಲಿ ಟೇಕಾಫ್‌ ಮಾಡುವ ಜವಾಬ್ದಾರಿ ಎಲ್ಲ ಭಾರತೀಯರ ಮೇಲೆ ಇದೆ ಎಂದು ಬೆಂಗಳೂರು ದಕ್ಷಿಣ ಸಂಸದ, ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟರು. ದ.ಕ. ಬಿಜೆಪಿಯ ಆರ್ಥಿಕ ಪ್ರಕೋಷ್ಠದಿಂದ ಭಾನುವಾರ ಇಲ್ಲಿನ ಕೆನರಾ ಶಿಕ್ಷಣ ಸಂಸ್ಥೆಗಳ ಸುಧೀಂದ್ರ ಸಭಾಂಗಣದಲ್ಲಿ ‘ಕೇಂದ್ರ ಬಜೆಟ್‌ ಕುರಿತ ವಿಶ್ಲೇಷಣೆ ಹಾಗೂ ಸಂವಾದ’ದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಯುಪಿಐ ಮುಖಾಂತರ ಡಿಜಿಟಲ್‌ ಪೇಮೆಂಟ್‌ ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕಿಂತ ಭಾರತದಲ್ಲೇ ಹೆಚ್ಚಾಗುತ್ತಿದೆ. ಎಂಟು ವರ್ಷಗಳಲ್ಲಿ 49.5 ಕೋಟಿ ಮಂದಿಗೆ ಬ್ಯಾಂಕ್‌ ಖಾತೆ, 22 ಕೋಟಿಗೂ ಹೆಚ್ಚು ಶೌಚಾಲಯ, 9.5 ಕೋಟಿ ಎಲ್‌ಪಿಜಿ ಸಂಪರ್ಕ, 26 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ, ಕಿಸಾನ್‌ ಸನ್ಮಾನ್‌ ಸೇರಿದಂತೆ ಜನೋಪಯೋಗಿ ಯೋಜನೆ ಕಾರ್ಯಗತಗೊಳಿಸಲಾಗಿದೆ. ಮುಂದಿನ 25 ವರ್ಷಗಳ ದೂರದೃಷ್ಟಿಯ ಬಜೆಚ್‌ನಲ್ಲಿ ಕೃಷಿ ಕ್ಷೇತ್ರದಲ್ಲಿ ಕಾಮನ್‌ ಸಾಫ್‌್ಟವೇರ್‌, ತಾಂತ್ರಿಕತೆ, ಸಂಶೋಧನೆಗೆ ವಿಶೇಷ ಒತ್ತು, ಸಿರಿಧಾನ್ಯಗಳಿಗೆ ಅಂತಾರಾಷ್ಟ್ರೀಯ ಮಾರ್ಕೆಟ್‌, ಎಂಜಿನಿಯರಿಂಗ್‌, ಮೆಡಿಕಲ್‌ ಕಾಲೇಜುಗಳು ಹೆಚ್ಚಳ ಮೂಲಕ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಲಾಗುತ್ತಿದೆ. ಈ ಮೂಲಕ ವಿಶ್ವ ಮಟ್ಟದಲ್ಲಿ ದಾದಿಯರಿಗೆ ಉದ್ಯೋಗ ಸೃಷ್ಟಿಮುಂದಿನ ದಿನಗಳಲ್ಲಿ ಸಾಧ್ಯವಾಗಲಿದೆ ಎಂದರು.

Tap to resize

Latest Videos

ವಿಮಾನದ ಡೋರ್ ತೆರೆದಿದೆ ಎಂದಿದ್ದೇ ತಪ್ಪಾಯ್ತಾ?: ತೇಜಸ್ವಿ ಸೂರ್ಯರನ್ನು ಸಮರ್ಥಿಸಿಕೊಂಡ ಸಿ.ಟಿ. ರವಿ

ಅಗ್ಗದ ಸ್ಕೀಂ ಬದಲು ಭವಿಷ್ಯದ ಸ್ಕೀಂ!:

ಭವಿಷ್ಯದ ತಂತ್ರಜ್ಞಾನಕ್ಕೆ ಭಾರತ ಸಿದ್ಧತೆ ನಡೆಸಿದೆ. ಈ ಹಿಂದಿನ ಕಾಂಗ್ರೆಸ್‌ ಸರ್ಕಾರದಂತೆ ಯಾವತ್ತೂ ದೇಶಕ್ಕೆ ನಷ್ಟಆಗುವ ಅಗ್ಗದ ಕೊಡುಗೆಗಳ ಪ್ರಚಾರ ಸ್ಕೀಮ್‌ನ್ನು ನರೇಂದ್ರ ಮೋದಿ ಸರ್ಕಾರ ಮಾಡಿಲ್ಲ. ಈ ಬಾರಿ ಬಜೆಟ್‌ನಲ್ಲಿ ಇದ್ದ ಏಕೈಕ ರಾಜ್ಯದ ಹೆಸರು ಇದ್ದರೆ ಅದು ಕರ್ನಾಟಕ ಮಾತ್ರ. ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರು. ಕಾದಿರಿಸುವ ಮೂಲಕ ಉತ್ತರ ಕರ್ನಾಟಕ ಜನತೆಯ ಬಹಳ ವರ್ಷಗಳ ನೀರಿನ ಬವಣೆಯನ್ನು ಹೋಗಲಾಡಿಸಲು ಕ್ರಮ ಕೈಗೊಂಡಿದೆ. ಬೆಂಗಳೂರಿನ ಸಬರ್ಬನ್‌ ರೈಲು ಯೋಜನೆಗೆ 1,500 ಕೋಟಿ ರು., ರಾಜ್ಯದ ರೈಲ್ವೆ ಮೂಲಸೌಕರ್ಯಕ್ಕೆ ಗರಿಷ್ಠ 7,500 ಕೋಟಿ ರು. ಮೀಸಲಿಟ್ಟಿದೆ. ತಂತ್ರಜ್ಞಾನ ಯುಗದಲ್ಲಿ ಕೃತಕಬುದ್ಧಿಮತ್ತೆ, ಸ್ಟಾರ್ಟಪ್‌, 5 ಜಿ ಲ್ಯಾಬ್‌ ನಿರ್ಮಾಣ ಸೇರಿದಂತೆ ವಿವಿಧ ರೀತಿಯ ಸಂಶೋಧನೆಗಳಿಗೆ ಈ ಪ್ರತ್ಯೇಕ ಮೂಲಸೌಕರ್ಯ ನಿಧಿ ಬಳಕೆಯಾಗಲಿದೆ ಎಂದರು.

ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಅತಿ ಹೆಚ್ಚು ಸ್ಥಾನ: ಸಂಸದ ತೇಜಸ್ವಿ ಸೂರ್ಯ

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಮೇಯರ್‌ ಜಯಾನಂದ ಅಂಚನ್‌, ಸಿಎ ಅನಂತೇಶ್‌ ಪ್ರಭು, ಅಭಿವ್ಯಕ್ತ ಪರಿಷತ್‌ ಅಧ್ಯಕ್ಷ ರವೀಂದ್ರನಾಥ್‌, ಆರ್ಥಿಕ ಪ್ರಕೋಷ್ಠ ರಾಜ್ಯಸದಸ್ಯ ಚಿದಾನಂದ್‌, ಮಂಗಳೂರು ಬಾರ್‌ ಕೌನ್ಸಿಲ್‌ ಅಧ್ಯಕ್ಷ ಪೃಥ್ವಿರಾಜ್‌ ಶೆಟ್ಟಿ, ಬಿಜೆಪಿ ಆರ್ಥಿಕ ಪ್ರಕೋಷ್ಠ ಸಂಚಾಲಕ ಸಿಎ ಶಾಂತಾರಾಮ ಶೆಟ್ಟಿ ಇದ್ದರು.

ರಾಹುಲ್‌ಗೆ ಕಂಡದ್ದು ರಾಜಕೀಯ ನಿರುದ್ಯೋಗ!

ಕಳೆದ ಎಂಟು ವರ್ಷಗಳಿಂದ ದೇಶದಲ್ಲಿ ಅಭಿವೃದ್ಧಿಯ ಶಕೆಯನ್ನೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆದರೂ ಭಾರತ್‌ ಜೋಡೋ ಯಾತ್ರೆ ವೇಳೆ ರಾಹುಲ್‌ ಗಾಂಧಿ ಅವರು ದೇಶದಲ್ಲಿ ನಿರುದ್ಯೋಗದ ಬಗ್ಗೆ ಆರೋಪಿಸುತ್ತಿದ್ದಾರೆ. ವಾಸ್ತವದಲ್ಲಿ ರಾಹುಲ್‌ ಹಾಗೂ ಕಾಂಗ್ರೆಸಿಗರು ತಮ್ಮ ರಾಜಕೀಯ ನಿರುದ್ಯೋಗವನ್ನೇ ದೇಶದ ನಿರುದ್ಯೋಗ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಕಳೆದ ಎಂಟು ವರ್ಷದಲ್ಲಿ ಉದ್ಯೋಗ ನೋಂದಣಿ ಸಂಖ್ಯೆ 9.5 ಕೋಟಿನಿಂದ 27 ಕೋಟಿಗೆ ಏರಿಕೆಯಾಗಿದೆ ಎಂದರು.

click me!