ಸಿದ್ದು ಕ್ಷೇತ್ರ ವರುಣಾದಿಂದ ವಿಜಯೇಂದ್ರ ಸ್ಪರ್ಧೆ: ಕಟೀಲ್ ಹೇಳಿದ್ದಿಷ್ಟು

By Girish Goudar  |  First Published Mar 31, 2023, 12:38 PM IST

ಚುನಾವಣೆ ಬಂದಾಗ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹೋಗುವುದು ಸಾಮಾನ್ಯ. ಗೋಪಾಲಕೃಷ್ಣ ಹೊರತುಪಡಿಸಿ ಯಾವ ಶಾಸಕರು ಹೋಗುವುದಿಲ್ಲ. ನಮ್ಮ ಪಕ್ಷಕ್ಕೆ ಕಾಂಗ್ರೆಸ್ ಸೇರಿದಂತೆ ಬೇರೆ ಪಕ್ಷದಿಂದ ಬರುವವರು ಇದ್ದಾರೆ: ನಳಿನ್ ಕುಮಾರ್ ಕಟೀಲ್


ಬಳ್ಳಾರಿ/ಹಾವೇರಿ(ಮಾ.31): ವರುಣಾ ಕ್ಷೇತ್ರದಿಂದ ಬಿ.ವೈ. ವಿಜಯೇಂದ್ರ ಸ್ಪರ್ಧೆ ವಿಚಾರವಾಗಿ ಪಕ್ಷದಿಂದ ಅಭಿಪ್ರಾಯ ಸಂಗ್ರಹ ಮಾಡುವ ಕೆಲಸ ನಡೆದಿದೆ. ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಿಗೆ ತಂಡಗಳನ್ನು ಕಳುಹಿಸಿ ಅಭಿಪ್ರಾಯವನ್ನ ಸಂಗ್ರಹ ಮಾಡುತ್ತಿದ್ದೇವೆ. ಅಭಿಪ್ರಾಯ ಸಂಗ್ರಹದ ನಂತರ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಒಂದು ವಾರದೊಳಗೆ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಲಿದೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. 

ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಕೂಡ್ಲಿಗಿ ಶಾಸಕ ಎನ್.ವೈ. ಗೋಪಾಲಕೃಷ್ಣ ರಾಜೀನಾಮೆ ನೀಡುವ ವಿಚಾರ ಮಾಧ್ಯಮಗಳಿಂದ ತಿಳಿದಿದೆ. ಅವರನ್ನ ಪಕ್ಷದಲ್ಲಿ ಉಳಿಸಿಕೊಳ್ಳಲು ಮಾತುಕತೆ ಮಾಡಲಾಗಿತ್ತು. ಅವರು ಪಕ್ಷ ಬಿಡುವ ಬಗ್ಗೆ ಯಾವುದೇ ಕಾರಣಗಳನ್ನ ಕೊಟ್ಟಿಲ್ಲ. ಚುನಾವಣೆ ಬಂದಾಗ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹೋಗುವುದು ಸಾಮಾನ್ಯ. ಗೋಪಾಲಕೃಷ್ಣ ಹೊರತುಪಡಿಸಿ ಯಾವ ಶಾಸಕರು ಹೋಗುವುದಿಲ್ಲ. ನಮ್ಮ ಪಕ್ಷಕ್ಕೆ ಕಾಂಗ್ರೆಸ್ ಸೇರಿದಂತೆ ಬೇರೆ ಪಕ್ಷದಿಂದ ಬರುವವರು ಇದ್ದಾರೆ ಅಂತ ಹೇಳಿದ್ದಾರೆ. 

Tap to resize

Latest Videos

undefined

ಸಿದ್ದು ವಿರುದ್ಧ ವಿಜಯೇಂದ್ರ ಸ್ಪರ್ಧೆ ಬಗ್ಗೆ ಚರ್ಚೆ: ಯಡಿಯೂರಪ್ಪ

ರಾಜ್ಯದಲ್ಲಿ ಮತದಾರರ ಒಲವು ನಮ್ಮ ಪರವಾಗಿ ಇದೆ. ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಒಂದು ಕ್ಷೇತ್ರಕ್ಕೆ ಹೋಗಲು ಪರದಾಡುತ್ತಿದ್ದಾರೆ. ಕಾಂಗ್ರೆಸ್ ಹೀನಾಯವಾಗಿ ಸೋಲು ಕಾಣುತ್ತದೆ ಅಂತ ಕಾಂಗ್ರೆಸ್‌ ವಿರುದ್ಧ ಕಟೀಲ್‌ ಹರಿಹಾಯ್ದಿದ್ದಾರೆ. 

ಇತಿಹಾಸದಲ್ಲಿ ಮೊದಲ ಸಲ ಇಂತಹ ನಿರ್ಣಯ ಕೈಗೊಂಡ ಬಿಜೆಪಿ 

ಹಾವೇರಿ: ಬಿಜೆಪಿ ಇವತ್ತು ನಮ್ಮ ಪದಾಧಿಕಾರಿಗಳ ಅಭಿಪ್ರಾಯ, ಪಕ್ಷದ ಅಭಿಪ್ರಾಯ ತಿಳಿಯಲು ಪ್ರಕ್ರಿಯೆ ಪ್ರಾರಂಭ ಮಾಡಿದೆ. ಇತಿಹಾಸದಲ್ಲಿ ಬಿಜೆಪಿ ಮೊದಲ ಸಲ ಇಂತಹ ನಿರ್ಣಯ ಕೈಗೊಂಡಿದೆ ಅಂತ ಸಚಿವ ಶ್ರೀರಾಮುಲು ತಿಳಿಸಿದ್ದಾರೆ. 

ಇಂದು ಹಾವೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಶ್ರೀರಾಮುಲು, ಬಣಗಳ ಮೇಲೆ ನಾವು ರಾಜಕಾರಣ ಮಾಡುತ್ತೇವೆ. ಶಕ್ತಿ ಕೇಂದ್ರದ ಪ್ರಮುಖರ ಅಭಿಪ್ರಾಯ ಕೇಳ್ತಿರಲಿಲ್ಲ. ಪ್ರತಿಪಕ್ಷ ಕಾಂಗ್ರೆಸ್ ದೇಶದಲ್ಲಿ ದಿವಾಳಿ ಹತ್ತ ಹೋಗಿದೆ. ಮುಂದಿನ ದಿನಗಳಲ್ಲಿ ಹರಾಜಿಗೆ ಬರಲಿದೆ ಅಂತ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ. 

ರಾಜ್ಯದಲ್ಲಿ 140 ಸೀಟ್ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ಕಾಂಗ್ರೆಸ್ ಬಹಳಷ್ಟು ವರ್ಷಗಳಿಂದ ಜನರಿಗೆ ಟೋಪಿ ಹಾಕೋದು ಕಿವಿಯಲ್ಲಿ ಹೂವಿಡುವುದನ್ನ ಮಾಡುತ್ತಿದೆ. ಮಹಾ ಸಂಗಮದ ಮೂಲಕ ಜನರಿಗೆ ವಿಶ್ವಾಸ ಮೂಡಿಸಿದ್ದೇವೆ. ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್‌ಗೆ ನಿದ್ದೆಗೆಟ್ಟಿದೆ. ಡಿಕೆಶಿ, ಸಿದ್ದರಾಮಯ್ಯ ಏನೇ ಸರ್ಕಸ್ ಮಾಡಿದ್ರು ಗೆಲುವು ಸಾಧ್ಯವಾಗಲ್ಲ. ಬಿಜೆಪಿ ಡಿಮ್ಯಾಂಡ್ ಇರುವ ಪಾರ್ಟಿ, ಬೇರೆ ಪಕ್ಷಗಳಿಗೆ ಡಿಮ್ಯಾಂಡ್ ಇಲ್ಲ. ಅವರು ಮೂರು ಬಿಟ್ಟವರು, ನಮ್ಮ ಪಕ್ಷದ ಶಾಸಕರನ್ನ ಕರೆಯೋದನ್ನ ನೋಡಿದ್ರೆ ಸೋಲನ್ನ ಒಪ್ಪಿಕೊಂಡಂತೆ, ಅವರಿಗೆ ಸೋಲಿನ ಭಯ ಶುರುವಾಗಿದೆ ಅಂತ ಹೇಳಿದ್ದಾರೆ. 

ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರೆ, ಸಿದ್ದರಾಮಯ್ಯ ಬಾದಾಮಿಯಲ್ಲಿಯೂ ಗೆಲ್ಲುತ್ತಿರಲಿಲ್ಲ. ಅವತ್ತು ಬಾದಾಮಿಯಲ್ಲಿ ಜೆಡಿಎಸ್ ಅಭ್ಯರ್ಥಿ ಪಡೆದ ಮತಗಳು ಬಿಜೆಪಿಯದ್ದು, ನಾವು ಹೊಂದಾಣಿಕೆ ಮಾಡಿಕೊಂಡಿದ್ದರೆ ಅವತ್ತೆ ಮುಗಿದು ಹೋಗುತ್ತಿತ್ತು ಅಂತ ಸ್ಪಷ್ಟಪಡಿಸಿದ್ದಾರೆ. 

ಸಿದ್ದರಾಮಯ್ಯನವರ ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು? ತೇಲಿಬರುತ್ತಿದೆ ವಿಜಯೇಂದ್ರ ಹೆಸರು!

ಸಿಎಂ ಬೊಮ್ಮಾಯಿ ಎರಡು ಕಡೆ ಸ್ಪರ್ಧೆ ಮಾಡಲ್ಲ. ಈ ವಿಚಾರ ಪಕ್ಷದಲ್ಲಿ ಚರ್ಚೆ ಮಾಡಿಲ್ಲ. ಶಿಗ್ಗಾವಿಯಿಂದಲೇ ಸಿಎಂ ಸ್ಪರ್ಧೆ ಮಾಡುತ್ತಾರೆ. 56 ಇಂಚಿನ ಚಾತಿ ಇರುವ ವ್ಯಕ್ತಿ ನಮ್ಮ ಬೊಮ್ಮಾಯಿಯವರು, ಎಲ್ಲಾ ಆಶಯಗಳನ್ನ ಈಡೇರಿಸುವ ಕೆಲಸ ಮಾಡಿದ್ದಾರೆ ಅಂತ ತಿಳಿಸಿದ್ದಾರೆ. 

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!