ಸಿಎಂ ಸಿದ್ದರಾಮಯ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ: ಬಿ.ವೈ.ವಿಜಯೇಂದ್ರ ಟೀಕೆ

By Kannadaprabha NewsFirst Published Dec 14, 2023, 5:36 PM IST
Highlights

ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿ ಆರ್ಥಿಕವಾಗಿ ದಿವಾಳಿಯಾಗಿದ್ದು, ರೈತರ, ರಾಜ್ಯದ ಅಭಿವೃದ್ಧಿಗೆ ಹಣಕಾಸು ಹೊಂದಾಣಿಕೆ ಮಾಡದೆ ಕೇಂದ್ರದ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಸದಸ್ಯ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.

ವಿಧಾನಸಭೆ (ಡಿ.14): ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿ ಆರ್ಥಿಕವಾಗಿ ದಿವಾಳಿಯಾಗಿದ್ದು, ರೈತರ, ರಾಜ್ಯದ ಅಭಿವೃದ್ಧಿಗೆ ಹಣಕಾಸು ಹೊಂದಾಣಿಕೆ ಮಾಡದೆ ಕೇಂದ್ರದ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಸದಸ್ಯ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ. ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಪರಿಸ್ಥಿತಿ ಉಂಟಾಗಿ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ರೈತರ ಮತ್ತು ರಾಜ್ಯದ ಅಭಿವೃದ್ಧಿಗೆ ಕೇಂದ್ರದ ಯೋಜನೆಗಳನ್ನು ಬಳಕೆ ಮಾಡಬಹುದಾಗಿದೆ. ಆದರೆ, ರಾಜ್ಯ ಸರ್ಕಾರವು ಕೇಂದ್ರದ ಯೋಜನೆಗಳಿಗೆ ಅನುದಾನ ಬಳಕೆ ಮಾಡುತ್ತಿಲ್ಲ. 

ರಾಜ್ಯದ ಖಜಾನೆ ಖಾಲಿಯಾಗಿದ್ದು, ಆರ್ಥಿಕವಾಗಿ ದಿವಾಳಿಯಾಗಿದೆ. ಹಣಕಾಸಿನ ಸಮಸ್ಯೆಯಿಂದಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು. ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯ ಸರ್ಕಾರವು ತನ್ನ ಪಾಲಿನ ಅನುದಾನವನ್ನು ಬಿಡುಗಡೆ ಮಾಡಬೇಕು. ಆಗ ಮಾತ್ರ ಕೇಂದ್ರವು ತನ್ನ ಪಾಲಿನ ಅನುದಾನವನ್ನು ನೀಡಲಿದೆ. ಕೇಂದ್ರ ಸರ್ಕಾರ ಅನುದಾನ ನೀಡಲಿದೆ ಎಂದು ರಾಜ್ಯ ಸರ್ಕಾರ ನುಣಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಇದನ್ನು ಬದಿಗಿಟ್ಟು ಕೇಂದ್ರದ ಮೇಲೆ ಗೂಬೆ ಕೂರಿಸದೆ ರೈತರ ಮತ್ತು ರಾಜ್ಯದ ಏಳ್ಗೆಯತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದರು.

Latest Videos

ಪಬ್ಲಿಸಿಟಿಗಾಗಿ ಬಿಜೆಪಿ ರಾಜಕೀಯ ಮಾಡುತ್ತಿದೆ: ಸಚಿವ ಮಧು ಬಂಗಾರಪ್ಪ ಕಿಡಿ

ಕಾಂಗ್ರೆಸ್‌ ಟಯರ್‌ ಪಂಚರ್ ಆಗಿದೆ: ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಜಯ ಸಿಕ್ಕಿದೆ. ಪಂಚರಾಜ್ಯ ಚುನಾವಣೆ ಮುನ್ನ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತೇವೆಂದು ಐಎನ್‌ಡಿಐ ಕೂಟ ಇತ್ತು. ಚುನಾವಣೆ ನಂತರ ಬಿಜೆಪಿಗೆ ಆನೆಬಲ ಬಂದಿದೆ. ಕಾಂಗ್ರೆಸ್‌ ಪಕ್ಷಕ್ಕೆ ಟಯರ್‌ ಪಂಚರ್‌ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದರು.

ನಗರದಲ್ಲಿ ಬೆಳಗಾವಿ ಹಾಗೂ ಧಾರವಾಡ ವಿಭಾಗದ ನಗರಸಭೆ ಸದಸ್ಯರ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಂಚ ರಾಜ್ಯಗಳ ಫಲಿತಾಂಶ ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಕೇಂದ್ರದಲ್ಲಿ ನರೇಂದ್ರ ಮೋದಿ ಬೇಕು ಎನ್ನುವ ಸಂದೇಶ ನೀಡಿದ್ದಾರೆ. ಕಳೆದ ಚುನಾವಣೆಯಲ್ಲಿ ನಮಗೆ ನಿಜವಾಗಲೂ ಹಿನ್ನಡೆ ಆಗಿದೆ. ಕಳೆದೊಂದು ತಿಂಗಳಿನಿಂದ ಬದಲಾವಣೆ ಆಗಿದೆ. ಕರ್ನಾಟಕದ 28 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ಕಾಂಗ್ರೆಸ್‌ನವರು ಆತಂಕದಲ್ಲಿದ್ದಾರೆ ಎಂದರು.

ಕಳೆದ 4 ವರ್ಷಗಳ ಕಾಲ ನಳೀನ ಕುಮಾರ ಕಟೀಲ ಪಕ್ಷದ ಸಂಘಟನೆ ಶಕ್ತಿ ಕೊಟ್ಟರು. ಚುನಾವಣೆ ನಂತರ ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಆಯ್ಕೆ ವಿಚಾರದಲ್ಲಿ ಚರ್ಚೆ ಟೀಕೆ ಆಗುತ್ತಿತ್ತು. ನಂತರ ರಾಷ್ಟ್ರೀಯ ನಾಯಕರು ನನಗೆ ದೊಡ್ಡ ಜವಾಬ್ದಾರಿ ವಹಿಸಿದ್ದಾರೆ. ವಿಧಾಸಭಾ ಚುನಾವಣೆ ಆದ ನಂತರ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಜಯ ಸಿಕ್ಕಾಗ ನಮಗೆ ಗಾಬರಿ ಆಗಿತ್ತು. ಆದರೆ, ಕಳೆದ 20 ದಿನಗಳಿಂದ ಯಾವ ರೀತಿ ಬದಲಾವಣೆ ಆಗಿದೆ ಎಂಬುವುದನ್ನು ನೋಡಿದ್ದೇವೆ ಎಂದರು.

ಅವರಿಬ್ಬರ ಪಾಪದ ಕೊಡ ತುಂಬಿದೆ: ಸೋಮಣ್ಣ, ಯತ್ನಾಳ್ ವಿರುದ್ಧ ರೇಣುಕಾಚಾರ್ಯ ಏಕವಚನದಲ್ಲಿ ವಾಗ್ದಾಳಿ

ಹೊಸ ಸರ್ಕಾರದ ಬಂದಾಗ ಜನರು ಸಕಾರಾತ್ಮಕ ಮಾತನಾಡುತ್ತಾರೆ. ಆದರೆ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಏಕೆ ಅಧಿಕಾರಕ್ಕೆ ಬಂತು ಎಂದು ಜನ ಶಾಪ ಹಾಕ್ತಿದ್ದಾರೆ. ಆರೇ ತಿಂಗಳಲ್ಲಿ ಕಾಂಗ್ರೆಸ್ ಜನಪ್ರಿಯತೆ ಕಳೆದುಕೊಂಡಿದೆ. ರಾಜ್ಯದಲ್ಲಿ ಬಿಜೆಪಿ ಪರವಾಗಿ ವಾತಾವರಣ ನಿರ್ಮಾಣವಾಗುತ್ತಿದೆ. ಬರಗಾಲ ಇದ್ದರೂ ಪರಿಹಾರ ನೀಡುತ್ತಿಲ್ಲ. ರೈತ ಪರವಾಗಿ ಚಿಂತನೆ ರಾಜ್ಯ ಸರ್ಕಾರಕ್ಕಿಲ್ಲ. ಜಾನುವಾರುಗಳಿಗೆ ಹಾಕುವ ಮೇವಿನ ಬೆಲೆ ಏರಿಕೆ ಮಾಡಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆ ಹಣ ಬಂದ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೈಬಲಪಡಿಸುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕು. ಆಗ ಪ್ರಧಾನಿ ನರೇಂದ್ರ ಮೋದಿ ತಡೆಯುವ ಶಕ್ತಿ ಯಾರಿಗೂ ಇರುವುದಿಲ್ಲ. ನಮ್ಮ ಜವಾಬ್ದಾರಿ ಅರಿತು ಪಕ್ಷ ಸಂಘಟನೆ ಮಾಡಬೇಕು ಎಂದು ಕರೆ ನೀಡಿದರು.

click me!