
ಬೆಂಗಳೂರು(ಅ.08) ಎಐಸಿಸಿ ವರಿಷ್ಠರ ಭೇಟಿ ಬಳಿಕ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ಗಮನ ಸೆಳೆದಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಸೋಮವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಭೇಟಿ ಮಾಡಿದ್ದಾರೆ.
ಬೆಂಬಲಿಗ ಶಾಸಕರ ಪ್ರತ್ಯೇಕ ತಂಡದೊಂದಿಗೆ ಆಗಾಗ್ಗೆ ಸಭೆಗಳನ್ನು ನಡೆಸುವ ಸತೀಶ್ ರನ್ನು ವಿಜಯೇಂದ್ರ ಹಾಗೂ ಡಿ.ಕೆ. ಸುರೇಶ್ ಒಂದೇ ದಿನ ಭೇಟಿ ಮಾಡಿದ್ದು, ಈ ಸರಣೆ ಭೇಟಿಗಳು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದ ಆಸಿರತೆ ಕುರಿತ ಚರ್ಚೆಗಳು ನಡೆಯುತ್ತಿರುವಾಗಲೇ ಸತೀಶ್ ಭೇಟಿ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಜಿ.ವೈ.ವಿಜಯೇಂದ್ರ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ.
ಸಿಎಂ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಹೆಸರು ಕೇಳಿಬಂದ ಬೆನ್ನಲ್ಲೇ ಸಿದ್ದರಾಮಯ್ಯರ ಪರ ಲಕ್ಷ್ಮಣ್ ಸವದಿ ಫುಲ್ ಬ್ಯಾಟಿಂಗ್!
ಸೋಮವಾರ ಸಚಿವರ ಸರ್ಕಾರಿ ನಿವಾಸದಲ್ಲಿ ಸತೀಶ್ ರನ್ನು ವಿಜಯೇಂದ್ರ ಭೇಟಿಯಾಗಿ ಶಿಕಾರಿಪುರ ತಾಲೂಕಿನ ಕುಟ್ನಳ್ಳಿ ಟೋಲ್ ತೆರವು ವಿಚಾರವಾಗಿ ಮನವಿ ಮಾಡಿದರು. ಈ ವೇಳೆ ಕೆಲ ಸಮಯ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿದರು. ಇದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಿದರು ಎಂದು ಹೇಳಲಾಗಿದೆ.
ಅನುದಾನ ಕೇಳಲು ಭೇಟಿ:
ಸುರೇಶ್ ಇದಕ್ಕೂ ಮೊದಲು ಮಾಜಿ ಸಂಸದ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರ ಸಹೋದರ ಡಿ.ಕೆ. ಸುರೇಶ್ ಅವರು ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದು ಸಹ ಕುತೂಹಲ ಮೂಡಿಸಿದೆ. ಭೇಟಿ ಬಳಿಕ ಮಾತನಾಡಿದ ಡಿ.ಕೆ. ಸುರೇಶ್, ರಾಜಕೀಯ ಭೇಟಿಯಲ್ಲ, ಸತೀಶ್ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಹಾಗೂ ಪ್ರಭಾವಿ ಸಚಿವರು. ಕನಕಪುರ ವಿಧಾನಸಭಾ ಕ್ಷೇತ್ರದ ಕೆಲವು ಅಭಿವೃದ್ಧಿ ಯೋಜನೆಗಳ ಮಂಜೂರಾತಿ ಬಗ್ಗೆ ಅವರ ಜತೆ ಚರ್ಚೆ ಮಾಡಲಾಯಿತು. ಅವರು ನಮ್ಮ ಮನವಿಗೆ ಒಪ್ಪಿದ್ದು. ಮುಖ್ಯಮಂತ್ರಿಗಳು ಅನುದಾನ ಬಿಡುಗಡೆ ಮಾಡಿದ ತಕ್ಷಣ ಮಂಜೂರಾತಿ ನೀಡುವುದಾಗಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಡಿ .ಕೆ. ಶಿವಕುಮಾರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ಖರ್ಗೆ ಅವರು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಭೇಟಿ ಮಾಡಿ, ಪಕ್ಷ ಸಂಘಟನ ಹಾಗೂ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡುವುದು ನಮ್ಮ ಕರ್ತವ್ಯ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.