ಬಿಜೆಪಿ ಸಂವಿಧಾನ ಒಪ್ಪಬೇಕು ಇಲ್ಲ, ಆರ್‌ಎಸ್ಎಸ್‌ನ ಒಪ್ಪಬೇಕು: ಮಾಜಿ ಸಚಿವ ಕಿಮ್ಮನೆ ರತ್ನಾಕರ್

Kannadaprabha News   | Kannada Prabha
Published : Jul 11, 2025, 11:21 PM IST
kimmane rathnakar

ಸಾರಾಂಶ

ಬಿಜೆಪಿಯವರು ಸಂವಿಧಾನವನ್ನು ಒಪ್ಪಿಕೊಳ್ಳಬೇಕು ಇಲ್ಲವೇ ಆರ್.ಎಸ್.ಎಸ್. ಪ್ರತಿರೂಪವಾದ ಚಿಂತನ ಗಂಗಾ ಮತ್ತು ಕೃತಿ ಸಂಘ ರೂಪದರ್ಶನ ಒಪ್ಪಿಕೊಳ್ಳಬೇಕು. ಇವೆರಡೂ ಒಟ್ಟಿಗೇ ಇರಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ಶಿವಮೊಗ್ಗ (ಜು.11): ಬಿಜೆಪಿಯವರು ಸಂವಿಧಾನವನ್ನು ಒಪ್ಪಿಕೊಳ್ಳಬೇಕು ಇಲ್ಲವೇ ಆರ್.ಎಸ್.ಎಸ್. ಪ್ರತಿರೂಪವಾದ ಚಿಂತನ ಗಂಗಾ ಮತ್ತು ಕೃತಿ ಸಂಘ ರೂಪದರ್ಶನ ಒಪ್ಪಿಕೊಳ್ಳಬೇಕು. ಇವೆರಡೂ ಒಟ್ಟಿಗೇ ಇರಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಿಜೆಪಿ ಸಂವಿಧಾನ ಒಪ್ಪಿದರೆ ಆರ್.ಎಸ್.ಎಸ್. ಅನ್ನು ತಿರಸ್ಕರಿಸಬೇಕು. ಅಥವಾ ಆರ್.ಎಸ್.ಎಸ್. ಅನ್ನು ಒಪ್ಪಿದರೆ ಸಂವಿಧಾನ ತಿರಸ್ಕರಿಸಬೇಕು. ಆದರೆ, ಇವರು ದ್ವಂದ್ವ ನಿಲುವು ತಾಳಿದ್ದಾರೆ. ಜಾತ್ಯಾತೀತವನ್ನೇ ವಿರೋಧಿಸುತ್ತಿದ್ದಾರೆ. ಮೀಸಲಾತಿಯನ್ನು ಒಪ್ಪುತ್ತಿಲ್ಲ. ಈ ಬಗ್ಗೆ ಬಿಜೆಪಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಎಲ್ಲಾ ಜಾತಿ ಧರ್ಮದವರನ್ನು ಒಳಗೊಳ್ಳುವ ಬಹುತ್ವದ ಭಾರತ ಕಟ್ಟುವ ಜಾತ್ಯಾತೀತತೆಯನ್ನು ಅಪ್ಪಿಕೊಳ್ಳುವ ಸಾಮಾಜಿಕ ಮತ್ತು ಶೈಕ್ಷಣಿಕ ಅಸಮಾನತೆ ತೆಗೆದು ಸಹಬಾಳ್ವೆಯ ವಾತಾವರಣವನ್ನು ಮೂಡಿಸುತ್ತದೆ. ಇದು ಕಾಂಗ್ರೆಸ್ ಪಕ್ಷದ ಮೂಲ ತತ್ವವಾಗಿದೆ. ಆದರೆ, ಇದಕ್ಕೆ ವಿರುದ್ಧವಾಗಿ ಬಿಜೆಪಿ ನಡೆಯುತ್ತಿದ್ದು, ಪ್ರಧಾನಿ ಮೋದಿ ಅವರ ನೇತೃತ್ವದ ಸರ್ಕಾರದ ಉದ್ದೇಶ, ಆಡಳಿತ ಮತ್ತು ಆರ್ಥಿಕ ನೀತಿ ಶ್ರೀಮಂತರನ್ನು ಅತಿ ಶ್ರೀಮಂತರನ್ನಾಗಿ ಮಾಡುವುದು, ಬಡವರನ್ನು ನಿರ್ಗತಿಕರನ್ನಾಗಿ ಮಾಡುವುದು ಎಂದು ಕಿಡಿಕಾರಿದರು.

ಮನುಷ್ಯರ ನಡುವೆ ಮೇಲು ಕೀಳು ಭಾವನೆ ಇರಬಾರದು, ಆದರೆ ಶ್ರೇಣೀಕೃತ ಸಮಾಜ ಸಮರ್ಥನೆಯನ್ನು ಬಿಜೆಪಿಯವರು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ‘ಬಂಚ್ ಆಫ್ ಥಾಟ್ಸ್’ ಪುಸ್ತಕದಲ್ಲಿ ವಿವರಣೆ ಇದೆ. ಈ ಪುಸ್ತಕವನ್ನು ಬಿಜೆಪಿ ಒಪ್ಪಿಕೊಂಡಿದೆ ಎಂದಾದರೆ ಶ್ರೇಣೀಕೃತ ಸಮಾಜವನ್ನು ಸಮರ್ಥನೆ ಮಾಡಿಕೊಂಡಂತೆ ಆಗುತ್ತದೆ. ಆದ್ದರಿಂದ ಗೋಳ್ವಾಲ್ಕರ್ ಮತ್ತು ಹೆಗಡೇವಾರ್ ಹೇಳಿದ್ದನ್ನು ನಾವು ಒಪ್ಪುವುದಿಲ್ಲ ಎಂದು ಧೈರ್ಯವಾಗಿ ಬಿಜೆಪಿಯವರು ಹೇಳಬೇಕಲ್ಲವೇ ಎಂದು ಪ್ರಶ್ನಿಸಿದರು.

ಅಂಬೇಡ್ಕರ್ ಅವರ ಸಂವಿಧಾನಬದ್ಧ ಆಶಯಗಳೇ ಬೇರೆ. ಗಾಂಧಿ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ನೆಹರೂ ಇವರ ಪ್ರತಿಪಾದನೆಗಳು ಸಮಾಜವಾದಿ ಮತ್ತು ಜಾತ್ಯಾತೀತ ನಿಲುವೇ ಆಗಿವೆ. ಆದರೆ, ಬಿಜೆಪಿ ಮತ್ತು ಆರ್.ಎಸ್.ಎಸ್. ಪರಿವಾರದವರು ಈ ಆಶಯಗಳಿಗೆ ವಿರುದ್ಧವಾಗಿದ್ದಾರೆ. ಹೆಗಡೇವಾರ್, ಗೋಳ್ವಾಲ್ಕರ್, ಸಾವರ್ಕರ್, ಗಾಂಧಿ ಹಂತಕ ನಾಥೂರಾಮ್ ಗೂಡ್ಸೆ ಮುಂತಾದವರ ಚಿಂತನೆಗಳೇ ಬೇರೆ. ಚಿಂತನ ಗಂಗಾ ಮತ್ತು ಕೃತಿ ಸಂಘ ರೂಪ ದರ್ಶನದ ಸಂವಿಧಾನವನ್ನು ತಂತ್ರಗಾರಿಕೆಯ ಹಿಂಸೆಯನ್ನು ಅನುಷ್ಠಾನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಭಾಷೆಯ ಬಗ್ಗೆ ಕೂಡ ಅಷ್ಟೇ. ಚಿಂತನ ಗಂಗಾದ ಇಂಗ್ಲಿಷ್ ಆವೃತ್ತಿಯ ಪುಟ 112 ಮತ್ತು 113 ರಲ್ಲಿ ಸಂಸ್ಕೃತಕ್ಕೆ ಮೊದಲ ಸ್ಥಾನ ನೀಡಲಾಗಿದೆ. ಹಾಗೆಯೇ ಈ ಕೃತಿಗಳಲ್ಲಿ ಜಾತಿ ವ್ಯವಸ್ಥೆ ಸಮರ್ಥನೆ, ಒಕ್ಕೂಟ ವ್ಯವಸ್ಥೆ ರದ್ದು ಮಾಡುವುದು, ಮೀಸಲಾತಿ ವಿರೋಧ, ಅಷ್ಟೇಕೆ ಬಿಜೆಪಿ ಒಂದು ಸಂವಿಧಾನದ ಭಾಗವೇ ಎಂದು ಹೇಳಲಾಗುತ್ತಿದೆ. ಈ ಪುಸ್ತಕವನ್ನು ಒಪ್ಪಿಕೊಳ್ಳುವ ಮೂಲಕ ಬಿಜೆಪಿ ದಲಿತರು ಹಿಂದುಗಳೇ ಅಲ್ಲ ಎಂಬ ಭಾವನೆಗೆ ಬಂದಂತಿದೆ. ಮೀಸಲಾತಿ ಕೂಡ ಬೇಡ ಎಂದು ಹೇಳಿದ್ದಾರೆ. ಇದಕ್ಕೆಲ್ಲಾ ಬಿಜೆಪಿ ಮತ್ತು ಸಂಘ ಪರಿವಾದವರು ಉತ್ತರ ಕೊಡಬೇಕಲ್ಲ ಎಂದು ವಾಗ್ದಾಳಿ ನಡೆಸಿದರು.

ಕುವೆಂಪು ಕೂಡ ದ್ವಿಭಾಷಾ ಸೂತ್ರವನ್ನು ಒಪ್ಪಿದ್ದರು. ಆದರೆ, ದೇಶದ ಒಕ್ಕೂಟ ವ್ಯವಸ್ಥೆ ರದ್ದು ಮಾಡಿ ದೇಶಕ್ಕೆ ಒಂದೇ ಸಂಸತ್ ಒಂದೇ ಭಾಷೆ ಎಂದು ಸಂಪರ್ಕ ಭಾಷೆಯನ್ನಾಗಿ ಹಿಂದಿ ಉಳಿಸಿಕೊಂಡು, ದೇಶದ ಮತ್ತು ರಾಜ್ಯಗಳ ಸುಮಾರು ೪ ಸಾವಿರ ಭಾಷೆಗಳ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಮತ್ತು ರಾಷ್ಟ್ರಧ್ವಜವನ್ನೇ ತೆಗೆದು ಹಾಕಿ ಚಿಂತನ ಗಂಗಾ ಪ್ರತಿಪಾದಿಸುವ ಭಗವಾನ್‌ ಧ್ವಜವನ್ನು ರಾಷ್ಟ್ರಧ್ವಜವನ್ನಾಗಿ ಮಾಡಬೇಕು ಎನ್ನುವುದನ್ನು ಹೇಗೆ ಒಪ್ಪಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಹಾಗಾಗಿ ದೇಶದ ಜನರನ್ನು ಗೂಳಿಯ ಹಿಂದೇ ಏನೋ ಸಿಗುತ್ತೆ ಎಂದು ಓಡುವ ನರಿಯನ್ನಾಗಿ ಮಾಡಬಾರದು, ಬಿಜೆಪಿ ತನ್ನ ಅಂತರಂಗವನ್ನು ಬಹಿರಂಗಪಡಿಸಿ ಚರ್ಚೆಗೆ ಸಿದ್ಧರಾಗಲಿ ಎಂದು ಹರಿಹಾಯ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ