ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯನವರ 75ನೇ ಜನ್ಮದಿನ ನಿಮಿತ್ತ ಅಮೃತ ಮಹೋತ್ಸವವfನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಬಿಜೆಪಿಯ ಲಿಂಗಾಯತ ಮುಖಂಡನ ಜನ್ಮದಿನೋತ್ಸವಕ್ಕೆ ಸಿದ್ಧತೆ ನಡೆದಿದೆ.
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ, (ಆಗಸ್ಟ್, 04): ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಜನ್ಮದಿನದ ಅಮೃತಮಹೋತ್ಸವ ಅಭೂತಪೂರ್ವ ಯಶಸ್ವಿಯಾಗಿದೆ. ಇದರೊಂದಿಗೆ ಸಿದ್ದರಾಮಯ್ಯನವರು ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಬಿಜೆಪಿಯ ಹಿರಿಯ ನಾಯಕ, ಲಿಂಗಾಯತ ಮುಖಂಡನ ಜನ್ಮದಿನೋತ್ಸವಕ್ಕೆ ಸಿದ್ಧತೆ ನಡೆದಿದೆ ಎಂದು ತಿಳಿದುಬಂದಿದೆ.
ಹೌದು..ಸದ್ದಿಲ್ಲದೇ ಉತ್ತರ ಕರ್ನಾಟಕದ ಪ್ರಭಾವಿ ಬಿಜೆಪಿ ನಾಯಕ, ಲಿಂಗಾಯತ ಲೀಡರ್, ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆ ಅವರ 75ನೇ ಜನ್ಮದಿನೋತ್ಸವ ಆಚರಣೆಗೆ ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರಾಜ್ಯಸಭಾ ಮಾಜಿ ಸದಸ್ಯರಾಗಿರುವ ಪ್ರಭಾಕರ್ ಕೋರೆ ಕೆಎಲ್‌ಇ ಕಾರ್ಯಾಧ್ಯಕ್ಷರಾದ ಬಳಿಕ ಕೆಎಲ್‌ಇ ಸಂಸ್ಥೆಯನ್ನು ಮುನ್ನಡೆಸಿಕೊಂಡು ದೇಶ ವಿದೇಶದಲ್ಲಿಯೇ ತನ್ನದೇ ಆದ ಛಾಪು ಮೂಡಿಸಿದೆ.
undefined
ಸಿದ್ದರಾಮೋತ್ಸವಕ್ಕೆ ಹರಿದು ಬಂದ 10 ಲಕ್ಷ ಜನ: ಜನಸ್ತೋಮ ನೋಡಿ ಕಾಂಗ್ರೆಸ್ಸಿಗರಿಗೇ ಅಚ್ಚರಿ..!
ಐದು ದಶಕಗಳ ಕಾಲ ಅವರು ಡಾ.ಪ್ರಭಾಕರ ಕೋರೆ ಮಾಡಿದ ಸಾಮಾಜಿಕ, ಶೈಕ್ಷಣಿಕ ಸೇವೆ ಅನನ್ಯ. ಸದ್ಯ ಬಿಜೆಪಿಯಲ್ಲಿರುವ ಡಾ.ಪ್ರಭಾಕರ ಕೋರೆ ಆಗಸ್ಟ್ 1ರಂದು 75ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಸದ್ಯ ಮುಂಬರುವ ಅಕ್ಟೋಬರ್ ತಿಂಗಳಲ್ಲಿ ಅದ್ಧೂರಿಯಾಗಿ ಜನ್ಮದಿನ ಆಚರಣೆಗೆ ಡಾ.ಪ್ರಭಾಕರ ಕೋರೆ ಜನ್ಮದಿನಕ್ಕೆ ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ. ಪ್ರಧಾನಿ ಮೋದಿ ಸೇರಿ ನಾಲ್ವರು ಪ್ರಮುಖ ನಾಯಕರ ಆಹ್ವಾನಕ್ಕೆ ಚಿಂತನೆ ನಡೆದಿದೆ. ಕೇಂದ್ರ ಸಚಿವ ಅಮಿತ್ ಶಾ, ರಾಜನಾಥಸಿಂಗ್, ನಿತಿನ್ ಗಡ್ಕರಿ ಆಹ್ವಾನಕ್ಕೆ ಅಭಿಮಾನಿಗಳು ಚಿಂತನೆ ನಡೆಸುತ್ತಿದ್ದು ನಾಲ್ವರ ಪೈಕಿ ಒಬ್ಬರು ನಾಯಕರು ಡಾ.ಪ್ರಭಾಕರ ಕೋರೆ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
'ಅಭಿಮಾನಿಗಳು ಕರೆದರೆ ಹೋಗ್ತೀನಿ'
ಇನ್ನು ಜನ್ಮದಿನೋತ್ಸವ ಆಚರಣೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾ.ಪ್ರಭಾಕರ ಕೋರೆ, 'ಜನ್ಮದಿನೋತ್ಸವ ಆಚರಣೆ ಬಗ್ಗೆ ನನಗೆ ಗೊತ್ತಿಲ್ಲ, ಅಭಿಮಾನಿಗಳು ಎಲ್ಲೇ ಕರೆದರೂ ಹೋಗ್ತೀನಿ. ಅಭಿಮಾನಿಗಳು ಕರೆದ್ರೆ ಹೋಗ್ತೀನಿ ಎಂದರು. ಇನ್ನು ಡಾ.ಪ್ರಭಾಕರ ಕೋರೆಗೆ ರಾಜ್ಯಪಾಲ ಹುದ್ದೆ ನೀಡುವ ಬಗ್ಗೆ ಪಕ್ಷದಲ್ಲಿ ಚಿಂತನೆ ನಡೆದಿದೆ ಎಂಬ ಮಾತುಗಳು ಕೇಳಿ ಬರ್ತಿವೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಾ.ಪ್ರಭಾಕರ ಕೋರೆ, ಪಕ್ಷ ಜವಾಬ್ದಾರಿ ನೀಡಿದ್ರೆ ನಿಭಾಯಿಸುವೆ. ರಾಜ್ಯ ರಾಜಕಾರಣ ದಲ್ಲಿ ಯಾವಾಗಲೂ ಆ್ಯಕ್ಟೀವ್ ಇದ್ದೇನೆ. ಮುಂದೆಯೂ ಆ್ಯಕ್ಟೀವ್ ಆಗಿ ಇರ್ತೀನಿ ಎಂದರು. ಉತ್ತರ ಕರ್ನಾಟಕ ಲಿಂಗಾಯತ ಮುಖಂಡರನ್ನು ಬಿಜೆಪಿ ಕಡೆಗಣಿಸುತ್ತಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ,'ಹಾಗೇನಿಲ್ಲ. ಲಿಂಗಾಯತ ಸಮುದಾಯದವರೇ ಸಿಎಂ ಇದ್ದಾರೆ. ಲಿಂಗಾಯತ ರನ್ನು ಬಿಜೆಪಿ ಕಡೆಗಣಿಸಿಲ್ಲ. ಉತ್ತರ ಕರ್ನಾಟಕ ಲಿಂಗಾಯತ ಸಮುದಾಯದವರನ್ನು ಬಿಜೆಪಿಯವರು ಎತ್ತಿ ಹಿಡಿದಿದ್ದಾರೆ' ಎಂದು ತಿಳಿಸಿದ್ದಾರೆ.
ಕೋರೆ ಕೊಡುಗೆ ಅಪಾರ ಅಂದ್ರು ಸಚಿವ ಅಶ್ವತ್ಥ್ ನಾರಾಯಣ
ಇನ್ನು ಡಾ.ಪ್ರಭಾಕರ ಕೋರೆ ಅಭಿಮಾನಿಗಳು ಅವರ 75ನೇ ಜನ್ಮದಿನೋತ್ಸವ ಆಚರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ, 'ಖಂಡಿತ ಮಾಡಬೇಕು. ಡಾ.ಪ್ರಭಾಕರ ಕೋರೆ ಕೊಟ್ಟಂತಹ ಕೊಡುಗೆ ಸಾರ್ವಜನಿಕರು ಅಭಿಮಾನಿಗಳು ಹಿತೈಷಿಗಳು ಈ ನಾಡಿನ ಜನತೆ ಅದನ್ನ ಪರಿಗಣಿಸಿ ಮಾಡಬೇಕು. ಬೆಂಗಳೂರಿನಲ್ಲಿಯೂ ಸಂಸ್ಥೆ ಕಟ್ಟಿದ್ದಾರೆ ಅಲ್ಲಿಯೂ ನಾವೆಲ್ಲ ಮಾಡಬೇಕು. ಕಳೆದ ಐವತ್ತು ವರ್ಷಗಳಲ್ಲಿ ಕೆಎಲ್‌ಇ ಸಂಸ್ಥೆಯನ್ನು ಅತಿ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಅದಕ್ಕೆ ಹೃದಯಪೂರ್ವಕವಾಗಿ ಅಭಿನಂದಿಸುವೆ. ಡಾ.ಪ್ರಭಾಕರ ಕೋರೆಯವರ 75ನೇ ಜನ್ಮದಿನೋತ್ಸವ ಶುಭಾಶಯ ಕೋರುತ್ತೇನೆ ಎಂದಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇವೆ. ಇದೀಗ ಜನ್ಮದಿನದ ಹೆಸರಿನಲ್ಲಿ ರಾಜಕೀಯ ನಾಯಕರು ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಆ್ಯಕ್ಟೀವ್ ಇರ್ತೀನಿ ಅಂದಿರುವ ಡಾ.ಪ್ರಭಾಕರ ಕೋರೆಯವರ ಅದ್ಧೂರಿ ಜನ್ಮದಿನ ಅಮೃತಮಹೋತ್ಸವಕ್ಕೆ ಸಿದ್ಧತೆ ನಡೆದಿದ್ದು ಕಾರ್ಯಕ್ರಮಕ್ಕೆ ಯಾರೆಲ್ಲ ನಾಯಕರು ಬರಲಿದ್ದಾರೆ ಎಂಬುವುದು ಬೆಳಗಾವಿ ಜಿಲ್ಲಾ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದಂತೂ ಸತ್ಯ.