* ವೀರಶೈವ- ಲಿಂಗಾಯತ ಬಗ್ಗೆ ದೊಡ್ಡವರೇ ನಿರ್ಣಯ ಕೈಗೊಳ್ಳಲಿ
* ಹಿಂದೂ ಎನ್ನುವುದು ಒಂದು ಜೀವನ ಪದ್ಧತಿ
* ಭಾರತದಲ್ಲಿರುವರೆಲ್ಲರೂ ಹಿಂದೂ ಜೀವನ ಪದ್ದತಿಯಲ್ಲಿದ್ದೇವೆ, ನಾವೆಲ್ಲರೂ ಹಿಂದೂಗಳೇ
ಬೆಳಗಾವಿ(ಮೇ.21): ವೀರಶೈವ ಹಾಗೂ ಲಿಂಗಾಯತ ಎರಡು ಶಬ್ಧಗಳ ನಡುವೆ ಬೆಂಕಿ ಹಚ್ಚುವ ಕೆಲಸವನ್ನು ಈ ಹಿಂದೆ ಕಾಂಗ್ರೆಸ್ ಪಕ್ಷ ಮಾಡಿ ತನ್ನ ಕೈಯನ್ನು ತಾನೇ ಸುಟ್ಟುಕೊಂಡಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ ಮತ್ತು ಲಿಂಗಾಯತ ಎರಡೂ ಶಬ್ಧಗಳು ಮೊದಲಿನಿಂದೂ ಬಳಕೆಯಲ್ಲಿವೆ. ಅದರ ಬಗ್ಗೆ ನಾವು ಹೆಚ್ಚು ಚರ್ಚೆ ಮಾಡದೇ ಯಾವ ನಮ್ಮ ಸಮಾಜ ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ಶಿಕ್ಷಣ ಸಂಸ್ಥೆಗಳು, ಮಠ ಮಾನ್ಯಗಳ ಸ್ಥಾಪನೆಯಲ್ಲಿ ಸಾಕಷ್ಟು ತ್ಯಾಗ ಮಾಡಿದೆ. ಜಮೀನು, ಹಣ, ಶ್ರಮ ಹಾಕಿದೆ. ಈ ಹಿನ್ನೆಲೆಯಲ್ಲಿ ಇದೀಗ ಸಮಾಜದ ಸ್ಥಿತಿ ಮೀಸಲಾತಿ ಬೇಡಿಕೆ ಕೇಳಿಬಂದಿದೆ. ವೀರಶೈವ- ಲಿಂಗಾಯತ ಒಳಪಂಗಡಗಳ ಎಲ್ಲ ಸಮಾಜಗಳು ಬಡತನದಲ್ಲಿವೆ. ಕೃಷಿಯನ್ನು ನಂಬಿ, ಕೃಷಿಗೆ ಪೂರಕವಾದ ಉಪಕಸುಬುಗಳನ್ನು ಮಾಡಿಕೊಂಡು ಬಂದಿವೆ ಎಂದರು.
ವೇದಿಕೆಯಲ್ಲೇ ಉರುಳಿದ ಲೈಟಿಂಗ್ ಟ್ರಸ್: ಅಪಾಯದಿಂದ ಪಾರಾದ ಸಂಸದ ಈರಣ್ಣಾ ಕಡಾಡಿ
ವೀರಶೈವ-ಲಿಂಗಾಯತ ಶಬ್ದಗಳ ಬಗ್ಗೆ ನಾವು ಹೆಚ್ಚು ಚರ್ಚೆ ಮಾಡಬೇಕಿಲ್ಲ. ಅದರ ಬಗ್ಗೆ ದೊಡ್ಡವರು ನಿರ್ಣಯ ಮಾಡುತ್ತಾರೆ. ಸಮಾಜಕ್ಕೆ ಸರ್ಕಾರದ ಮಟ್ಟದಲ್ಲಿ ಯಾವ ಅನುಕೂಲವಾಗಬೇಕು. ಈ ನಿಟ್ಟಿನಲ್ಲಿ ನಾವು ಚಿಂತನೆ ಮಾಡಬೇಕಿದೆ ಎಂದು ಹೇಳಿದರು.
ಸಮಾಜದ ಮುಖಂಡರು ಸಾರ್ವಜನಿಕವಾಗಿ ಚರ್ಚೆ ಮಾಡದೇ ಸಂಘಟನಾತ್ಮಕವಾಗಿ ಮುಖಂಡರೆಲ್ಲರೂ ಒಂದು ಕಡೆ ಸೇರಿ ಚರ್ಚೆ ಮಾಡುವುದು ಒಳಿತು. ಸಮಾಜದ ಧಿಕ್ಕು ತಪ್ಪಿಸುವ ಕೆಲಸವನ್ನು ಸರಿಮಾಡಬೇಕಿದೆ. ಮಾಧ್ಯಮಗಳ ಮುಂದೆ ಬಂದು, ರಸ್ತೆ ಮೇಲೆ ಬಂದು ಚರ್ಚೆ ಮಾಡಿ ಸಮಾಜದಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ. ಎಲ್ಲ ಮುಖಂಡರು ಒಂದು ಕಡೆ ಸೇರಿ ಚರ್ಚಿಸಿ, ತೀರ್ಮಾನ ಮಾಡಬೇಕು.
ವೀರಶೈವ- ಲಿಂಗಾಯತ ಸಮಾಜ ಹಿಂದೂ ಧರ್ಮದ ಭಾಗವೇ ಎಂಬ ಪ್ರಶ್ನೆಗೆ ಪ್ರತಿಕ್ರಿಸಿದ ಅವರು, ಹಿಂದೂ ಎನ್ನುವುದು ಒಂದು ಜೀವನ ಪದ್ಧತಿ. ಭಾರತದಲ್ಲಿರುವರೆಲ್ಲರೂ ಹಿಂದೂ ಜೀವನ ಪದ್ದತಿಯಲ್ಲಿದ್ದೇವೆ. ನಾವೆಲ್ಲರೂ ಹಿಂದೂಗಳೇ. ಜಾತಿ ವ್ಯವಸ್ಥೆ ಬಂದಾಗ ಅವರು ನಡೆದುಕೊಂಡು ಬಂದ ಪೂಜಾ ವಿಧಾನಗಳು, ಹಬ್ಬ ಹರಿದಿನಗಳು, ಆಚಾರ- ವಿಚಾರಗಳು ಆ ಹಿನ್ನೆಲೆಯಲ್ಲಿ ಇವೆಲ್ಲ ನಿರ್ಮಾಣವಾಗಿವೆ ಎಂದು ಹೇಳಿದರು. ಲಿಂಗಾಯತ ಒಂದು ಪ್ರತ್ಯೇಕ ಧರ್ಮವಾಗಿದೆ ಎಂಬ ತೋಂಟದ ಸಿದ್ದರಾಮ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಧರ್ಮ ಬೇರೆ, ಜಾತಿ ಬೇರೆ. ಅದೇ ರೀತಿ ಜೀವನ ಪದ್ಧತಿ ಬೇರೆ. ಹಿಂದೂ ಎನ್ನುವುದು ಇಡೀ ದೇಶಕ್ಕೆ ಇರುವಂತಹ ಒಂದು ಜೀವನ ಪದ್ಧತಿ. ಹಾಗಾಗಿ ನಾವು ಹಿಂದು ಎಂದು ಹೇಳಿಕೊಳ್ಳುತ್ತೇವೆ ಎಂದು ಹೇಳಿದರು.