'ಕಾಂಗ್ರೆಸ್ ಸರ್ಕಾರ, ಗುರುವಾರದ ಸರ್ಕಾರ' ಸಚಿವರ ಸಾಧನೆಯೇ ಶೂನ್ಯ; ಆರ್. ಅಶೋಕ

By Sathish Kumar KH  |  First Published Dec 1, 2024, 1:05 PM IST

ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಸಚಿವರ ಸಾಧನೆಯ ವರದಿ ಕೇಳಿದ್ದಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಇದೊಂದು ಗುರುವಾರದ ಸರ್ಕಾರ ಸಾಧನೆ ಶೂನ್ಯವಾಗಿದೆ ಎಂದು ಟೀಕೆ ಮಾಡಿದ್ದಾರೆ.


ಬೆಂಗಳೂರು (ಡಿ.01): ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಸಚಿವರ ಸಾಧನೆಯ ವರದಿ ಕೇಳಿದ್ದಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಇದೊಂದು ಗುರುವಾರದ ಸರ್ಕಾರ ಸಾಧನೆ ಶೂನ್ಯವಾಗಿದೆ ಎಂದು ಟೀಕೆ ಮಾಡಿದ್ದಾರೆ.

ಜ್ಯ ರಾಜಕಾರಣದಲ್ಲಿ ಇದೀಗ ಸಚಿವ ಸಂಪುಟ ಬದಲಾವಣೆ ಚರ್ಚೆಗಳು ಶುರುವಾಗಿವೆ. ಈ ಬೆನ್ನಲ್ಲಿಯೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ ಹೋಗಿ ಬಂದಿದ್ದಾರೆ. ಇದರ ಬೆನ್ನಲ್ಲಿಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಸಚಿವರ ಸಾಧನೆಯ ವರದಿ ಕೇಳಿದ್ದಾರೆ. ಇದಕ್ಕೆ ವ್ಯಂಗ್ಯಾತ್ಮಕವಾಗಿ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ಆರ್. ಅಶೋಕ್ ಅವರು ನಿಮ್ಮ ಸಚಿವರು ಸಾಧನೆ ಮಾಡಿದ್ದರೆ ತಾನೇ ವರದಿ ಕೊಡೋದಕ್ಕೆ, ಇದು ಕೇವಲ ಗುರುವಾರದ ಸರ್ಕಾರ ಎಂದು ಟೀಕೆ ಮಾಡಿದ್ದಾರೆ.

Tap to resize

Latest Videos

ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 'ಸಚಿವರಿಗೆ ಖರ್ಗೆ ಚಾಟಿ' ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಕಟಿಸಲಾದ ವರದಿಯ ತುಣುಕನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ವಿಪಕ್ಷ ನಾಯಕ ಆರ್. ಅಶೋಕ್ ಅವರು, ಖರ್ಗೆ ಅವರಿಗೆ ಟೀಕೆ ಮಾಡಿ ಪೋಸ್ಟ್ ಹಂಚಿಕೊಂಡಿದ್ದಾರೆ. 'ಸನ್ಮಾನ್ಯ ಮಲ್ಲಿಕಾರ್ಜುನ ಖರ್ಗೆ ಅವರೇ, ಸಾಧನೆಗಳಿದ್ದರೆ ತಾನೆ ವರದಿ ಕೊಡೋದಕ್ಕೆ. ಪಾಪ ತಾವು ರಾಜ್ಯದಲ್ಲಿ ಅಧಿಕಾರ ತ್ಯಾಗ ಮಾಡಿ ದೇಶಾದ್ಯಂತ ಕಾಂಗ್ರೆಸ್ ಪಕ್ಷ ಕಟ್ಟಲು ಶ್ರಮ ಪಡುತ್ತಿದ್ದೀರಿ. ಹಾಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಏನು ಮಾಡುತ್ತಿದೆ, ರಾಜ್ಯದಲ್ಲಿ ತಮ್ಮ ಪಕ್ಷದ ಗೋಳೇನು ಎನ್ನುವ ಬಗ್ಗೆ ತಮಗೆ ಬಹುಶಃ ಮಾಹಿತಿ ಇಲ್ಲ ಎಂದು ಕಾಣುತ್ತದೆ.

ಇದನ್ನೂ ಓದಿ: ಮಂತ್ರಿಗಳ ಸಾಧನೆ ಕೇಳಿ 6 ತಿಂಗಳಾದ್ರೂ ವರದಿ ಕೊಡದ್ದಕ್ಕೆ ಕಿಡಿ: ಸಚಿವರಿಗೆ ಖರ್ಗೆ ಚಾಟಿ

ನಾನು ಈಗಾಗಲೇ ಹಲವು ಬಾರಿ ಹೇಳಿರುವಂತೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಕೇವಲ 'ಗುರುವಾರದ ಸರ್ಕಾರ. ಗುರುವಾರದಂದು ಸಂಪುಟ ಸಭೆ ನಡೆಯುವ ದಿನ ಮಾತ್ರ ಮುಖ್ಯಮಂತ್ರಿಗಳು, ಬಹುತೇಕ ಸಚಿವರು, ಅಧಿಕಾರಿಗಳು ವಿಧಾನಸೌಧದಲ್ಲಿ, ವಿಕಾಸಸೌಧದಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಬಾಕಿ ದಿನ ಎಲ್ಲರೂ ತಮ್ಮದೇ ಲೋಕದಲ್ಲಿ ಇರುತ್ತಾರೆ, ತಮ್ಮದೇ ರಾಜಕೀಯ ಲೆಕ್ಕಾಚಾರದಲ್ಲಿ ಮುಳುಗಿರುತ್ತಾರೆ.

ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿರುವ ಮುಖ್ಯಮಂತ್ರಿಗಳಿಗೆ ಕಾನೂನು ಹೋರಾಟ, ಕುರ್ಚಿ ಉಳಿಸಿಕೊಳ್ಳುವ ಚಿಂತೆ. ಮುಖ್ಯಮಂತ್ರಿ ಆಗಲು ತುದಿಗಾಲಲ್ಲಿ ನಿಂತಿರುವ ಡಿಸಿಎಂ ಸಾಹೇಬರಿಗೆ ಹಗಲು, ರಾತ್ರಿ ಅದೇ ಕನಸು. ಇನ್ನು ಉಳಿದ ಕೆಲವರಿಗೆ ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಏನಾದರೂ ಲಾಭವಿದೆಯೇ ಎನ್ನುವ ಆಸೆ. ಇನ್ನು ಹಿರಿಯ ಶಾಸಕರಿಗೆ ಸಂಪುಟ ಪುನಾರಚನೆಯಲ್ಲಿ ಒಂದು ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವ ಚಿಂತೆ. ಇನ್ನು ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ತಮಗೆ ತಿಳಿದೇ ಇದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಬಳಿ 'ರಸ್ತೆಗೆ ಒಂದು ಬುಟ್ಟಿ ಮಣ್ಣು ಹಾಕೋದಕ್ಕೂ ದುಡ್ಡಿಲ್ಲ' ಅಂತ ತಾವೇ ಹೇಳಿದ್ದೀರಿ.

ಇದನ್ನೂ ಓದಿ:ನಾನು ಹೋರಿ ಥರ, ಎಲ್ಲಾ ಎದುರಿಸುವೆ: ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ

ಪರಿಸ್ಥಿತಿ ಹೀಗಿರುವಾಗ ಆಡಳಿತ ಹಳಿ ತಪ್ಪದೇ ಇರುತ್ತದೆಯೇ? ಪಾಪ ಕಾಂಗ್ರೆಸ್ ಸಚಿವರು ಏನಾದರೂ ಸಾಧನೆ ಮಾಡಿದ್ದರೆ ತಾನೇ ತಮಗೆ ವರದಿ ಕೊಡೋಕೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಅವರು ಭಾರೀ ಟೀಕೆ ಮಾಡಿದ್ದಾರೆ.

click me!