
ಬೆಂಗಳೂರು (ಫೆ.07): ಅನುದಾನ ನೀಡಿಕೆಯಲ್ಲಿ ತಾರತಮ್ಯ ನೀಡಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಅತ್ತ ದೆಹಲಿಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಬುಧವಾರ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದರೆ, ಇತ್ತ ಬೆಂಗಳೂರಿನಲ್ಲಿ ಪ್ರತಿಪಕ್ಷ ಬಿಜೆಪಿಯು ಬರ ಪರಿಹಾರ ಕ್ರಮಗಳಿಗೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದೆ. ಬುಧವಾರ ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಲಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮತ್ತಿತರರು ಭಾಗವಹಿಸಲಿದ್ದಾರೆ.
ಪ್ರತಿಭಟನೆ ನಡೆಸುವ ಸಂಬಂಧ ಕಳೆದ ಶುಕ್ರವಾರ ನಡೆದ ಬಿಜೆಪಿಯ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ರಾಜ್ಯ ಸರ್ಕಾರವೇ 222ಕ್ಕೂ ಹೆಚ್ಚು ತಾಲೂಕುಗಳನ್ನು ಬರಗಾಲಪೀಡಿತ ಎಂದು ಘೋಷಿಸಿದ್ದರೂ ಕುಡಿಯುವ ನೀರು ಸೇರಿದಂತೆ ಬರ ಪರಿಹಾರದ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿಯು ಪ್ರತಿಭಟನೆ ನಡೆಸಲಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ಕಾಂಗ್ರೆಸ್ಸಿನ ಬೂಟಾಟಿಕೆ ಗ್ಯಾರಂಟಿಗಿಂತ ಮೋದಿ ಗ್ಯಾರಂಟಿಯೇ ಶ್ರೇಷ್ಠ: ವಿಜಯೇಂದ್ರ
ಬಿಜೆಪಿಗೆ 400+ ಸ್ಥಾನ ಬರುತ್ತೆಂಬ ಸತ್ಯ ಖರ್ಗೆ ಬಾಯಲ್ಲಿ ಬಂದಿದೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400ಕ್ಕೂ ಹೆಚ್ಚು ಸ್ಥಾನ ಬರುತ್ತದೆ, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುತ್ತಾರೆಂಬ ಮಾತು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಾಯಲ್ಲಿ ಮಾತು ಬಂದಿದೆ. ಖರ್ಗೆ ಅವರಿಗೂ ಸತ್ಯ ಅರಿವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭಾ ಚುನಾವಣೆ ವಿಚಾರದಲ್ಲಿ ಸತ್ಯ ಎಲ್ಲರಿಗೂ ಒಂದೇ. ಅದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಿಗೂ ಗೊತ್ತು ಎಂದರು.
ಇನ್ನು ರಾಮನ ಮಂದಿರಗಳನ್ನು ಪುನಶ್ಚೇತನ ಮಾಡುವ ನಿರ್ಧಾರ ಕೈಗೊಂಡಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹ ಎಂದಿರುವ ವಿಜಯೇಂದ್ರ, ಶ್ರೀ ರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡುತ್ತಿದ್ದ ಕಾಂಗ್ರೆಸ್‌ನವರಿಗೆ ಈಗ ಬುದ್ಧಿ ಬಂದಿದೆ. ಒಳ್ಳೆಯ ಕೆಲಸಕ್ಕೆ ನಾವು ಅಭಿನಂದನೆ ಸಲ್ಲಿಸುತ್ತಿದ್ದೇನೆ. ಒಳ್ಳೆಯ ಕೆಲಸಕ್ಕೆ ನಮ್ಮ ಬೆಂಬಲ ಸದಾ ಇದೆ. ರಾಮನನ್ನು ಅವರು ಒಪ್ಪಿಕೊಂಡಿರುವುದು ತುಂಬಾ ಸಂತೋಷಕರ ಎಂದರು.
ಬಿಜೆಪಿಯ ವಿಜಯೇಂದ್ರ ಲಾಟರಿ ರಾಜ್ಯಾಧ್ಯಕ್ಷ: ಡಿ.ಕೆ.ಶಿವಕುಮಾರ್ ವ್ಯಂಗ್ಯ
ಇದೇ ವೇಳೆ ಮಂಡ್ಯದಲ್ಲಿ ಭಗವಾಧ್ವಜ ಗಲಾಟೆ ವಿಚಾರ ಕಾಂಗ್ರೆಸ್ ಸರ್ಕಾರದ ಪಿತೂರಿಯಾಗಿತ್ತು ಎಂದು ಆರೋಪಿದ ಅವರು, ಹನುಮ ಧ್ವಜ ಹಾರಿಸಲು ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದು ಧ್ವಜ ಸ್ತಂಭ ನಿರ್ಮಾಣ ಮಾಡಲಾಗಿತ್ತು. ಈ ಘಟನೆ ನಾವು ಭಾರತದಲ್ಲಿದ್ದೇವಾ ಅಥವಾ ಬೇರೆ ದೇಶದಲ್ಲಿದ್ದೇವೆಯಾ ಎಂಬ ಅನುಮಾನ ಉಂಟು ಮಾಡಿತ್ತು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.