ಕಾಂಗ್ರೆಸ್‌ ಗ್ಯಾರಂಟಿ ಚರ್ಚೆ ಗದ್ದಲಕ್ಕೆ ಉಭಯ ಕಲಾಪ ಬಲಿ..!

Published : Jul 05, 2023, 02:00 AM IST
ಕಾಂಗ್ರೆಸ್‌ ಗ್ಯಾರಂಟಿ ಚರ್ಚೆ ಗದ್ದಲಕ್ಕೆ ಉಭಯ ಕಲಾಪ ಬಲಿ..!

ಸಾರಾಂಶ

ಉಚಿತ ಯೋಜನೆ ಬಗ್ಗೆ ತುರ್ತು ಚರ್ಚೆಗೆ ಬಿಜೆಪಿ ನಿಲುವಳಿ, ಚರ್ಚೆಗೆ ಸಿಗದ ಅವಕಾಶ, ದಿನವಿಡೀ ಧರಣಿ, ಗದ್ದಲ, ಕಲಾಪ 4 ಬಾರಿ ಮುಂದಕ್ಕೆ 

ವಿಧಾನ ಮಂಡಲ(ಜು.05):  ಚುನಾವಣೆ ವೇಳೆ ಕಾಂಗ್ರೆಸ್‌ ಘೋಷಿಸಿದ ಐದು ‘ಗ್ಯಾರಂಟಿ’ ಕಾರ್ಯಕ್ರಮಕ್ಕೆ ಸರ್ಕಾರ ಷರತ್ತು ವಿಧಿಸಿರುವುದು ಹಾಗೂ ಕಾರ್ಯಕ್ರಮ ಜಾರಿಯಲ್ಲಿ ವಿಳಂಬದ ಬಗ್ಗೆ ತುರ್ತಾಗಿ ಚರ್ಚಿಸಲು ನಿಲುವಳಿ ಪ್ರಸ್ತಾವನೆಗೆ ಅವಕಾಶ ನೀಡುವಂತೆ ಬಿಜೆಪಿ ಮಾಡಿದ ಮನವಿಗೆ ಉಭಯ ಸದನಗಳ ಪೀಠಾಧ್ಯಕ್ಷರು ಒಪ್ಪದ ಕಾರಣ ಉಭಯ ಸದನಗಳಲ್ಲಿ ಬಿಜೆಪಿ ಸದಸ್ಯರು ದಿನವಿಡೀ ಧರಣಿ ನಡೆಸಿದರು.

ಸರ್ಕಾರದ ವಿರುದ್ಧ ಘೋಷಣೆ, ವಾಗ್ವಾದ, ಮಾತಿನ ಚಕಮಕಿಗಳು ನಿರಂತರವಾಗಿ ಆಡಳಿತ ಹಾಗೂ ಬಿಜೆಪಿ ಸದಸ್ಯರ ನಡುವೆ ನಡೆದವು, ನಾಲ್ಕು ಬಾರಿ ಸದನವನ್ನು ಮುಂದೂಡಲಾಯಿತು. ಕೊನೆಗೆ ಧರಣಿ, ಘೋಷಣೆ ನಡುವೆಯೇ ಕಾಗದ ಪತ್ರಗಳ ಮಂಡನೆ, ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ, ಶೂನ್ಯ ವೇಳೆ ಕಲಾಪವನ್ನು ಪೀಠಾಧ್ಯಕ್ಷರು ನಡೆಸಿದರು. ಆಡಳಿತ ಪಕ್ಷದ ನಾಯಕರು, ಪೀಠಾಧ್ಯಕ್ಷರು ಸಾಕಷ್ಟುಮನವಿ ಮಾಡಿಕೊಂಡರೂ ಬಿಜೆಪಿ ಸದಸ್ಯರು ಪಟ್ಟು ಸಡಿಲಿಸದೇ ಧರಣಿ ಮುಂದುವರೆಸಿದ ಕಾರಣ ಸದನವನ್ನು ಬುಧವಾರಕ್ಕೆ ಮುಂದೂಡಿದರು.

Party Rounds: ಕಮಿಷನ್‌ ಆರೋಪ- ಎಚ್‌ಡಿಕೆ Vs ಕಾಂಗ್ರೆಸ್‌ ನಾಯಕರು ಜಟಾಪಟಿ

ಬೆಳಗ್ಗೆ ವಿಧಾನಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪ್ರಶ್ನೋತ್ತರ ಮುಂದೂಡಿ ಗ್ಯಾರಂಟಿಗಳ ಚರ್ಚೆಗೆ ನಿಲುವಳಿ ಪ್ರಸ್ತಾಪಿಸಲು ಅವಕಾಶ ನೀಡುವಂತೆ ಸ್ಪೀಕರ್‌ ಅವರಿಗೆ ಮನವಿ ಮಾಡಿದರು. ಇದಕ್ಕೆ ಸಭಾಧ್ಯಕ್ಷ ಯು.ಟಿ.ನಿಯಮಾವಳಿ ಪ್ರಕಾರ ಪ್ರಶ್ನೋತ್ತರ, ಶೂನ್ಯವೇಳೆ ಕಲಾಪದ ಬಳಿಕ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದರೂ ಬಿಜೆಪಿ ಸದಸ್ಯರು ಒಪ್ಪಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಶ್ನೋತ್ತರಕ್ಕೂ ಮುನ್ನ ನಿಲುವಳಿ ಸೂಚನೆಗೆ ಅವಕಾಶ ನೀಡದಂತೆ ಮನವಿ ಮಾಡಿದರು.

ಇದನ್ನು ಒಪ್ಪದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ‘ಧೋಖಾ ದೋಖಾ ಕಾಂಗ್ರೆಸ್‌ ಧೋಖಾ’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಸದಸ್ಯರು ಕೂಡ ‘ಡೌನ್‌ಡೌನ್‌ ಬಿಜೆಪಿ ಡೌನ್‌’ ಎಂದು ಘೋಷಣೆಗಳನ್ನು ಕೂಗಿದರು. ಧರಣಿ ಪರಿಣಾಮ ನಾಲ್ಕು ಬಾರಿ ಸದನವನ್ನೂ ಮುಂದೂಡಲಾಯಿತು.

ದಿನದ ಕೊನೆಯಲ್ಲಿ ಬಿಜೆಪಿಯ ಧರಣಿಯ ನಡುವೆಯೇ ಸಭಾಧ್ಯಕ್ಷರು ಪ್ರಶ್ನೋತ್ತರ, ಶೂನ್ಯವೇಳೆ, ಕಾಗದ ಪತ್ರಗಳ ಮಂಡನೆ ಸೇರಿದಂತೆ ದಿನದ ಕಾರ್ಯಕಲಾಪಗಳನ್ನು ಪೂರ್ಣಗೊಳಿಸಿ ಸದನವನ್ನು ಬುಧವಾರಕ್ಕೆ ಮುಂದೂಡಿದರು.

ವಿಧಾನಸಭೆಯೊಳಗೆ ಸಂವಿಧಾನ ಪೀಠಿಕೆ ಓದು; ಸ್ಪೀಕರ್ ಖಾದರ್ ಹೊಸ ಸಂಪ್ರದಾಯ

ವಿಧಾನ ಪರಿಷತ್ತಿನಲ್ಲೂ ನಿರಂತರ ಧರಣಿ:

ಬೆಳಗ್ಗೆ ಮೇಲ್ಮನೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಅವರು, ಸಾರ್ವಜನಿಕ ಮಹತ್ವದ ವಿಷಯ ಕುರಿತು ಪ್ರಸ್ತಾಪಿಸಬೇಕಾಗಿದೆ, ಹಾಗಾಗಿ ನಿಲುವಳಿ ಪ್ರಸ್ತಾವನೆಗೆ ಅನುಮತಿ ನೀಡುವಂತೆ ಉಪಸಭಾಪತಿ ಎಂ.ಕೆ.ಪ್ರಾಣೇಶ್‌ ಅವರಿಗೆ ಮನವಿ ಮಾಡಿದರು. ಇದಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತೀವ್ರ ವಿರೋಧ ವ್ಯಕ್ತಪಡಿಸಿ, ನಿಯಮಾವಳಿ ಪ್ರಕಾರ ಪ್ರಶ್ನೋತ್ತರ, ಶೂನ್ಯವೇಳೆ ಕಲಾಪದ ನಂತರ ನಿಲುವಳಿ ಪ್ರಸ್ತಾವನೆ ಮಾಡಲು ಅವಕಾಶವಿದೆ. ಬಿಜೆಪಿ ಅವರು ಪ್ರಸ್ತಾಪಿಸುವ ವಿಷಯ ನಿಲುವಳಿ ಸೂಚನೆ ಅಡಿ ಬರುತ್ತದೆಯೋ ಇಲ್ಲವೋ ಎಂಬ ಬಗ್ಗೆ ನಂತರ ಮಾತನಾಡುತ್ತೇವೆ, ಹಾಗಾಗಿ ನಿಯಮಾವಳಿ ಪ್ರಕಾರ ಕಲಾಪ ನಡೆಸಬೇಕು ಎಂದರು.

ಆದರೆ ಸಭಾಪತಿಗಳ ನಿರ್ಧಾರವನ್ನು ಒಪ್ಪದ ಬಿಜೆಪಿ ಸದಸ್ಯರು ಪೀಠದ ಮುಂದೆ ಬಂದು ಧರಣಿ ಆರಂಭಿಸಿ,‘ನಿಲ್ಲಿಸಿ, ನಿಲ್ಲಿಸಿ, ಮೋಸ ನಿಲ್ಲಿಸಿ’ ಎಂದು ಘೋಷಣೆ ಕೂಗತೊಡಗಿದರು. ಹೀಗಾಗಿ ಸದನವನ್ನು ಕೆಲ ಕಾಲ ಮುಂದೂಡಿದರು. ಪುನಃ ಸದನ ಆರಂಭವಾದ ಮೇಲೂ ಬಿಜೆಪಿ ಸದಸ್ಯರು ಧರಣಿ ಮುಂದುವರೆಸಿದಾಗ ಸದನವನ್ನು ಮಧ್ಯಾಹ್ನ 3 ಗಂಟೆವರೆಗೆ ಮುಂದೂಡಿದರು. ಸದನ ಪುನಃ ಆರಂಭವಾದ ಮೇಲೂ ಧರಣಿ ಮುಂದುವರೆದಾಗ ಪುನಃ 15 ನಿಮಿಷ ಸದನ ಮುಂದೂಡಿದರು. ನಂತರ ಮತ್ತೆ ಸದನ ಸೇರುತ್ತಿದ್ದಂತೆ ಧರಣಿ ಮುಂದುವರೆಯಿತು. ಘೋಷಣೆಗಳ ಮಧ್ಯ ಸಭಾಪತಿ ಬಸವರಾಜ ಹೊರಟ್ಟಿಅವರು, ಕಾಗದ ಪತ್ರಗಳ ಮಂಡನೆ, ಪ್ರಶ್ನೋತ್ತರಗಳ ಮಂಡನೆ ಮಾಡಿ ಸದನವನ್ನು ಬುಧವಾರಕ್ಕೆ ಮುಂದೂಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!
ವಿಧಾನಸಭೆಯಲ್ಲಿ 'ಉತ್ತರ ಕರ್ನಾಟಕ' ವಿವಾದ: ಶಿವಲಿಂಗೇಗೌಡರ ಮಾತುಗಳಿಗೆ ಗರಂ ಆದ ಯತ್ನಾಳ್, ಗ್ಯಾರಂಟಿ, ಗುಂಡಿ ವಿಚಾರಕ್ಕೆ ಜಟಾಪಟಿ!