ಶಾಸಕರು ಅವರಾಗೇ ಬಂದಾಗ ಸುಮ್ಮನಿರಲು ಬಿಜೆಪಿ ಸನ್ಯಾಸಿ ಅಲ್ಲ: ಸಚಿವ ಮುರುಗೇಶ್‌ ನಿರಾಣಿ

By Govindaraj SFirst Published Jun 26, 2022, 5:20 AM IST
Highlights

ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳ ಹಿಂದೆ ಬಿಜೆಪಿ ಕೈವಾಡ ಇಲ್ಲ. ಅಲ್ಲಿ ಬಂಡೆದ್ದಿರುವ ಶಾಸಕರು ಅವರಾಗಿಯೇ ನಮ್ಮ ಬಳಿ ಬಂದರೆ ಸುಮ್ಮನೆ ಕೂಡಲು ಬಿಜೆಪಿಯೇನು ಸನ್ಯಾಸಿಗಳ ಪಕ್ಷ ಅಲ್ಲ ಎಂದು ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ತಿಳಿಸಿದ್ದಾರೆ. 

ಕಲಬುರಗಿ (ಜೂ.26): ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳ ಹಿಂದೆ ಬಿಜೆಪಿ ಕೈವಾಡ ಇಲ್ಲ. ಅಲ್ಲಿ ಬಂಡೆದ್ದಿರುವ ಶಾಸಕರು ಅವರಾಗಿಯೇ ನಮ್ಮ ಬಳಿ ಬಂದರೆ ಸುಮ್ಮನೆ ಕೂಡಲು ಬಿಜೆಪಿಯೇನು ಸನ್ಯಾಸಿಗಳ ಪಕ್ಷ ಅಲ್ಲ ಎಂದು ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ತಿಳಿಸಿದ್ದಾರೆ. ಜತೆಗೆ, ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್‌, ಎನ್‌ಸಿಪಿ, ಶಿವಸೇನೆ ಮೂರೂ ಪಕ್ಷಗಳು ಸೇರಿ ಅನೈತಿಕ ಸರ್ಕಾರ ರಚಿಸಿವೆ. ಶಿವಸೇನೆ ಜೊತೆ ನಮ್ಮದು ಹಳೇ ಸಂಬಂಧ. 25 ವರ್ಷಗಳಿಂದ ನಾವು ಜತೆಗಿದ್ದೆವು. 

ಮಹಾರಾಷ್ಟ್ರದಲ್ಲಿ ಒಬ್ಬರ ಕಡೆ ಬ್ರೇಕ್‌, ಮತ್ತೊಬ್ಬರ ಕಡೆ ಸ್ಟೇರಿಂಗ್‌ ಹಾಗೂ ಇನ್ನೊಬ್ಬರ ಕಡೆ ಎಕ್ಸಿಲೇಟರ್‌ ಇಟ್ಟುಕೊಂಡ ಕಾರಣ ಗಾಡಿ ಸುಸೂತ್ರವಾಗಿ ನಡೆಯುತ್ತಿಲ್ಲ. ಈಗಾಗಲೇ ಶಿವಸೇನೆಯ ಹೆಚ್ಚಿನ ಶಾಸಕರು ಸರ್ಕಾರದಿಂದ ಹೊರಗಡೆ ಬಂದಿದ್ದಾರೆ. ಇವರೆಲ್ಲ ಬಿಜೆಪಿ ಕಡೆ ಬರಲಿದ್ದಾರೆ ಎನ್ನುವ ವಿಶ್ವಾಸ ಇದೆ. ನಿಶ್ಚಿತವಾಗಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದರಲ್ಲಿ ಸಂದೇಹವಿಲ್ಲ ಎಂದರು. ಅಘಾಡಿ ಸರ್ಕಾರ ಬಂದ ನಂತರ ಮಹಾರಾಷ್ಟ್ರದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ. ಎಲ್ಲರೂ ಬಿಜೆಪಿ ನೇತೃತ್ವದ ಸರ್ಕಾರದೇ ಸೂಕ್ತ ಎಂದು ಹೇಳುತ್ತಿದ್ದಾರೆ. 

ಕರ್ನಾಟಕದಲ್ಲಿ ಕೈಗಾರಿಕೆಗಳ ಬೆಳವಣಿಗೆ 2,689 ಕೋಟಿ ಹೂಡಿಕೆ: ಮುರುಗೇಶ್‌ ನಿರಾಣಿ

ಮಹಾರಾಷ್ಟ್ರದಲ್ಲಿ ಸದ್ಯಕ್ಕೆ ನಡೆಯುತ್ತಿರುವ ಬಿಕ್ಕಟ್ಟಿನಲ್ಲಿ ಬಿಜೆಪಿ ಕೈವಾಡ ಇಲ್ಲ. ಆಂತರಿಕ ಕಚ್ಚಾಟದಲ್ಲಿ ಶಿವಸೇನೆ ಶಾಸಕರು ನಮ್ಮ ಕಡೆ ಬರುತ್ತಿದ್ದಾರೆ ಎಂದರು. ಅವರಾಗೇ ನಮ್ಮತ್ರ ಬಂದು ಸರ್ಕಾರ ಮಾಡಿ ಎಂದಾಗ ನಾವು ಸುಮ್ಮನೆ ಕೂಡಲು ಸನ್ಯಾಸಿಗಳ ಪಾರ್ಟಿ ಅಲ್ಲ. ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಮಹಾರಾಷ್ಟ್ರದಲ್ಲೂ ಒಳ್ಳೆಯ ಆಡಳಿತ ನೀಡುವ ಬಿಜೆಪಿ ಸರ್ಕಾರ ತರುತ್ತೇವೆ. ನಾವೇನಾದರೂ ಅವರನ್ನು ಆಪರೇಷನ್‌ ಮಾಡಿ, ಕಿಡ್ನಾಪ್‌ ಮಾಡಿದ್ದೇವಾ? ಅವರೇನು ಚಿಕ್ಕಮಕ್ಕಳಾ? ಅವರೇ ಒಟ್ಟಾಗಿ ಹೋಗಿರುವಾಗ ನಮ್ಮ ಮೇಲೆ ಬ್ಲೇಮ್‌ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಟೆಕ್ಸ್‌ಟೈಲ್‌ ಪಾರ್ಕ್ ಕನಸು ಬಿತ್ತಿದ ಸಚಿವ ನಿರಾಣಿ: ಜಿಲ್ಲೆಯ ಹೊನ್ನಕಿರಣಗಿ ಬಳಿ ಸೋಲಾರ್‌ ಪಾರ್ಕ್ಗೆ ಮಂಜೂರಾಗಿದ್ದ 1500 ಎಕರೆ ಜಮೀನನ್ನು ಉದ್ದೇಶಿತ ಮೆಗಾ ಜವಳಿ ಪಾರ್ಕ್ ನಿರ್ಮಾಣಕ್ಕಾಗಿ ಕರ್ನಾಟಕ ಪವರ್‌ ಕಾಪೋರೇಷನ್‌ ಸಂಸ್ಥೆಯಿಂದ ಜವಳಿ ಇಲಾಖೆಯ ಹೆಸರಿಗೆ ವರ್ಗಾಯಿಸಲಾಗಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ ನಿರಾಣಿ ತಿಳಿಸಿದರು. ಕಲಬುರಗಿ ಐವಾನ್‌-ಎ-ಶಾಹಿ ಅತಿಥಿಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಯಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು ಈಗಾಗಲೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 

ಮಾರುಕಟ್ಟೆ ದರದಲ್ಲಿ ಜಮೀನು ಖರೀದಿಸಲು ಒತ್ತಾಯ, ರೈತರ ಮನವಿಗೆ ಸ್ಪಂದಿಸಿದ ಸಚಿವ ನಿರಾಣಿ

ರಾಯಚೂರು, ಕಲಬುರಗಿ, ಬಳ್ಳಾರಿ, ಯಾದಗಿರಿಯಲ್ಲಿ ಹೆಚ್ಚಿನ ಹತ್ತಿ ಬೆಳೆಯಲಾಗುತ್ತಿರುವುದರಿಂದ ಜವಳಿ ಪಾರ್ಕ್ ನಿರ್ಮಾಣಕ್ಕೆ ನಮ್ಮ ಮೊದಲ ಆದ್ಯತೆ ಕಲಬುರಗಿ ಆಗಲಿದೆ ಎಂದರು. ಜವಳಿ ಉದ್ಯಮಕ್ಕೆ ಹೆಚ್ಚಿನ ಕಾರ್ಮಿಕರ ಅವಶ್ಯಕತೆವಿರುತ್ತದೆ. ಪ್ರತಿನಿತ್ಯ ಕಾರ್ಮಿಕರ ಓಡಾಟ ಇರುವ ಕಾರಣ ಮತ್ತು ಯೋಜನೆಗೆ ಪೂರಕವಾದ ಜಮೀನು ಪ್ರಸ್ತುತ ಬೇರೆಡೆ ಲಭ್ಯವಿಲ್ಲದ ಕಾರಣ ಉತ್ತಮ ರಸ್ತೆ ಸಂಪರ್ಕ ಹೊಂದಿರುವ ಸೋಲಾರ್‌ ಪಾರ್ಕ್ಗೆ ಮೀಸಲಾದ ಹೊನ್ನಕಿರಣಗಿ ಜಮೀನು ಪಡೆಯಲಾಗಿದೆ. ಸೋಲಾರ್‌ ಪಾರ್ಕ್ಗೆ ಪ್ರತ್ಯೇಕ ಜಮೀನು ನೀಡಲಾಗುವುದು ಎಂದು ಸಚಿವರು ಹೇಳಿದರು.

click me!