ಬಿಜೆಪಿ ಪಕ್ಷದ ಶಿಸ್ತು, ಸಿದ್ದಾಂತಕ್ಕೆ ಬದ್ಧತೆ ಮುಖ್ಯ: ಯಡಿಯೂರಪ್ಪ

Kannadaprabha News   | Kannada Prabha
Published : May 28, 2025, 09:02 AM IST
BS Yediyurappa

ಸಾರಾಂಶ

‘ಪಕ್ಷದ ಶಿಸ್ತು, ತತ್ವ, ಸಿದ್ಧಾಂತ ಮತ್ತು ನಾಯಕತ್ವಕ್ಕೆ ಎಲ್ಲರೂ ಬದ್ಧರಾಗಿರಲೇಬೇಕು. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ’ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತೀಕ್ಷ್ಣವಾಗಿ ಹೇಳಿದ್ದಾರೆ.

ಬೆಂಗಳೂರು (ಮೇ.28): ‘ಪಕ್ಷದ ಶಿಸ್ತು, ತತ್ವ, ಸಿದ್ಧಾಂತ ಮತ್ತು ನಾಯಕತ್ವಕ್ಕೆ ಎಲ್ಲರೂ ಬದ್ಧರಾಗಿರಲೇಬೇಕು. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ’ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತೀಕ್ಷ್ಣವಾಗಿ ಹೇಳಿದ್ದಾರೆ. ಬಿಜೆಪಿಯ ನಿಜವಾದ ಶಕ್ತಿಯೇ ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಹಲವು ಬಾರಿ ಎಚ್ಚರಿಕೆ ನೀಡಲಾಗಿದ್ದರೂ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮುಂದುವರೆಸಿದ್ದ ಎಸ್‌.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸುವ ನಿರ್ಧಾರವನ್ನು ಕೇಂದ್ರ ಶಿಸ್ತು ಸಮಿತಿ ಕೈಗೊಂಡಿದೆ. ಪಕ್ಷದ ಎಲ್ಲ ನಮ್ಮ ನಿಷ್ಠಾವಂತ ನಾಯಕರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇಂಥ ಯಾವುದೇ ಬೆ‍ಳವಣಿಗೆಗಳಿಂದ ವಿಚಲಿತರಾಗದೆ ಪಕ್ಷ ಸಂಘಟನೆಯ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಸಮಾಜಕ್ಕೆ ಮಠಗಳು ನೀಡಿರುವ ಸೇವೆ ಅನನ್ಯ: ನಾಡಿನಲ್ಲಿರುವ ಮಠಮಾನ್ಯಗಳು ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬರುತ್ತಿವೆ. ಸಿದ್ದಗಂಗಾ ಮಠ, ಸುತ್ತೂರು ಮಠ, ಸಿರಿಗೆರೆಯಂತಹ ನಮ್ಮ ಸಮಾಜದ ಮಠಗಳು ನೀಡಿರುವ ಸೇವೆ ಅನನ್ಯವಾದುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಶಿವಗಂಗೆಯ ಹೊನ್ನಮ್ಮಗವಿ ಮಠದಲ್ಲಿ ಹಮ್ಮಿಕೊಂಡಿದ್ದ ಹೊನ್ನಾದೇವಿ ದಶಮಾನೋತ್ಸವ, ಧಾರ್ಮಿಕ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ದಕ್ಷಿಣಕಾಶಿ ಶಿವಗಂಗೆಯಲ್ಲಿರುವ ಹೊನ್ನಮ್ಮಗವಿ ಮಠವೂ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಾಣಿಕ ಮಠಗಳಲ್ಲಿ ಒಂದಾಗಿದ್ದು ತನ್ನದೇ ಆದ ಮಹತ್ತರವಾದ ಇತಿಹಾಸವನ್ನು ಹೊಂದಿದೆ.

ಈ ಮಠವು ಉಜ್ಜಯಿನಿ ಜಗದ್ಗುರುಗಳಾಗಿದ್ದ ಶ್ರೀ ಮರುಳಸಿದ್ದೇಶ್ವರ ಮಹಾಸ್ವಾಮಿಗಳಿಂದಾಗಿ 10ನೇ ಶತಮಾನದಲ್ಲಿಯೇ ಸ್ಥಾಪಿತವಾಗಿದ್ದು, ದಕ್ಷಿಣಕಾಶಿಯಂದೇ ಪ್ರಸಿದ್ದವಾಗಿರುವ ಶಿವಗಂಗಾ ಕ್ಷೇತ್ರವನ್ನು ಶಿಕ್ಷಣಕಾಶಿಯಾಗಿಸಿದ ಕೀರ್ತಿ ಪೂಜ್ಯ ಶ್ರೀಗಳಿಗೆ ಸಲ್ಲುತ್ತದೆ. ನಮ್ಮ ಭಾರತೀಯ ಪರಂಪರೆಯಲ್ಲಿ ಮಠಗಳಿಗೆ ವಿಶೇಷ ಸ್ಥಾನಮಾನ ನೀಡಿದ್ದು ಅದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ನಮ್ಮ ಮುಂದಿನ ಪೀಳಿಗೆಯವರದ್ದಾಗಿದೆ ಎಂದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಸರ್ಕಾರಕ್ಕೆ ಶಿಕ್ಷಣ, ವಸತಿ, ದಾಸೋಹದ ದಿಕ್ಸೂಚಿ ನೀಡಿದ್ದೇ ನಮ್ಮ ವೀರಶೈವ ಲಿಂಗಾಯತ ಮಠಗಳು, ಮಠಗಳು ಇಲ್ಲದಿದ್ದರೆ ಇವತ್ತು ಎಷ್ಟೋ ಜನ ಬೀದಿಪಾಲಾಗುತ್ತಿದ್ದರು.

ನಮ್ಮ ಸಂಸ್ಕೃತಿಯಲ್ಲಿ ಮಠಾಧೀಶರಿಗೆ ವಿಶಿಷ್ಟ ಸ್ಥಾನಮಾನವಿದೆ. ನಾನು ಧರ್ಮದಿಂದ ರಾಜಕಾರಣ ಮಾಡಿದ್ದೇನೆ. ವೀರಶೈವ ಲಿಂಗಾಯತ ಧರ್ಮದ ಹೆಣ್ಣು ಮಗಳಾದ ನಾನು ಸಂಘರ್ಷದಿಂದ, ಕಲ್ಲು ಮುಳ್ಳುಗಳ ಹಾದಿಯಲ್ಲಿ ನಡೆದುಕೊಂಡು ಬಂದು ಇವತ್ತು ಈ ಮಟ್ಟಕ್ಕೆ ಬೆಳೆದಿದ್ದೇನೆ. ಮಠಗಳು ಜಾತಿ ಭೇದವಿಲ್ಲದೆ ಬಸವಣ್ಣನವರ ವಚನದಂತೆ ಎಲ್ಲ ಸಮಾಜದವರನ್ನು ಮನೆಯ ಮಗನಾಗಿ ಕಾಣುತ್ತೇವೆ ಎಂದರು.ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ನಾನು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಠಗಳ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ. ವೀರಶೈವ ಲಿಂಗಾಯತ ಸಮಾಜದ ಮಠಗಳು, ಮುಖಂಡರು, ಜನತೆ ನನ್ನ ಬಗ್ಗೆ ವಿಶೇಷವಾದ ಅಭಿಮಾನವಿಟ್ಟು ಗೌರವಿಸುತ್ತಿರುವುದಕ್ಕೆ ಸಮಾಜಕ್ಕೆ ಋಣಿಯಾಗಿದ್ದೇನೆ ಎಂದರು.

ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ, ವಿವೇಕಾನಂದಶ್ರಮದ ಶ್ರೀ ವೀರೇಶಾನಂದ ಸ್ವಾಮೀಜಿ, ಮೇಲಣಗವಿ ಮಠದ ಡಾ.ಶ್ರೀ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಬಸವಣ್ಣದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಕಂಬಾಳು ಮಠದ ಶ್ರೀ ಚನ್ನವೀರಶಿವಾಚಾರ್ಯ ಸ್ವಾಮೀಜಿ, ಪಾಲನಹಳ್ಳಿ ಮಠದ ಡಾ.ಸಿದ್ದರಾಜು ಸ್ವಾಮೀಜಿ, ವನಕಲ್ಲು ಮಠದ ಶ್ರೀ ಬಸವರಮಾನಂದ ಸ್ವಾಮೀಜಿ, ಮಾಜಿ ಎಂಎಲ್ ಸಿ ಕಾಂತರಾಜು, ಕೆಐಆರ್ ಡಿ ಎಲ್ ಮಾಜಿ ಅಧ್ಯಕ್ಷ ಎಂ.ರುದ್ರೇಶ್, ಜಿ.ಪಂ.ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ, ಮಾಜಿ ಉಪಮೇಯರ್ ಪುಟ್ಟರಾಜು, ಮುಖಂಡರಾದ ಸಪ್ತಗಿರಿ ಶಂಕರ್ ನಾಯಕ್, ಅಗಳಕುಪ್ಪೆ ಗೋವಿಂದರಾಜು, ಅಂಚೆಮನೆ ಪ್ರಕಾಶ್, ಬೃಂಗೇಶ್, ಪ್ರದೀಪ್, ತಟ್ಟೆಕೆರೆ ಬಾಬು, ರೇವಣಸಿದ್ದಯ್ಯ, ಪ್ರಭುದೇವ್, ಶಾಂತಕುಮಾರ್, ಪುಟ್ಟಣ್ಣ, ನಾರಾಯಣಸ್ವಾಮಿ, ದಿನೇಶ್ ನಾಯಕ್, ಮನುಪ್ರಸಾದ್, ರಾಜಮ್ಮ, ವೇದಾವತಿ, ಪೂರ್ಣಿಮಾ ಮತ್ತಿತರರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನ್ಯಾಷನಲ್ ಹೆರಾಲ್ಡ್ ಪ್ರಕರಣ ರೀತಿ RSS ವಿರುದ್ಧ ಯಾಕೆ ಕೇಸ್ ಇಲ್ಲ? ಕೇಂದ್ರದ ವಿರುದ್ಧ ಪ್ರಿಯಾಂಕ್ ಪ್ರಶ್ನೆಗಳ ಸುರಿಮಳೆ!
ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್