
ಬೆಂಗಳೂರು (ಮೇ.28): ‘ಬಿಜೆಪಿಗರು ಅವರ ಕೆಲಸ ಆಗುವವರೆಗೂ ಜಾಮೂನು ಕೊಡುತ್ತಾರೆ. ಕೆಲಸ ಮುಗಿದ ಬಳಿಕ ಪಾಯಿಸನ್ (ವಿಷ) ಕೊಡುತ್ತಾರೆ’ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಉಚ್ಚಾಟಿತ ಶಾಸಕ ಎಸ್.ಟಿ.ಸೋಮಶೇಖರ್ ತೀಕ್ಷ್ಣವಾಗಿ ಹೇಳಿದ್ದಾರೆ. ಬಿಜೆಪಿ ಹೈಕಮಾಂಡ್ ತೀರ್ಮಾನವನ್ನು ನಾನು ಬಹಳ ಸಂತೋಷದಿಂದ ಸ್ವಾಗತಿಸುತ್ತೇನೆ ಎಂದೂ ಅವರು ತಿಳಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಹೈಕಮಾಂಡ್ ಮತ್ತು ರಾಜ್ಯದ ನಾಯಕರು ಒಳ್ಳೆಯ ತೀರ್ಮಾನ ಮಾಡಿದ್ದಾರೆ. ನಿರೀಕ್ಷೆಯಂತೆ ನನ್ನನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ನನ್ನನ್ನು ಬೆಂಗಳೂರಿನಿಂದ ಹೊರ ಹಾಕಬೇಕೆನ್ನುವ ಮನದಾಳವನ್ನು ಹೈಕಮಾಂಡ್‌ಗೆ ಹೇಳಿ ಪಕ್ಷದಿಂದ ಉಚ್ಚಾಟನೆ ಮಾಡಿಸುವ ಕೆಲಸ ಮಾಡಿದ್ದಾರೆ. ಅವರು ಆ ವಿಷಯದಲ್ಲಿ ಯಶಸ್ವಿಯೂ ಆಗಿದ್ದಾರೆ. ಆ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಎಂದರು.
ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ: ಪಕ್ಷ ವಿರೋಧಿ ಚಟುವಟಿಕೆ ಎಂದು ನೋಟಿಸ್ ನೀಡಿದ್ದರು. ನಾನು ಒಂದೇ ಒಂದು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಯಾವುದಾದರೂ ನಿರ್ದಿಷ್ಟ ಪಕ್ಷ ವಿರೋಧಿ ಚಟುವಟಿಕೆ ಇದ್ದರೆ ತಿಳಿಸಿ. ಪಕ್ಷಕ್ಕೆ ಮುಜುಗರ ಆಗುವ ಕೆಲಸ ಮಾಡಿಲ್ಲ. ವಿಧಾನಸಭೆ ಹಾಗೂ ಹೊರಗೆ ನೇರಾನೇರ ಮಾತನಾಡುತ್ತೇನೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಬಸನಗೌಡ ಯತ್ನಾಳ್ ವಿಧಾನಸಭೆಯಲ್ಲೇ ಪಕ್ಷದ ವಿರುದ್ಧ ಮಾತನಾಡುತ್ತಿದ್ದರು. ಆಗ ಯತ್ನಾಳ್‌ರನ್ನು ಅಮಾನತು ಮಾಡಿದ್ದರಾ? ಆ ಮಟ್ಟಕ್ಕೆ ನಾನು ಯಾವತ್ತೂ ಮಾತನಾಡಿಲ್ಲ.
ರೇಣುಕಾಚಾರ್ಯ ಮಾತನಾಡಿದಷ್ಟೂ ನಾನು ಮಾತನಾಡಿಲ್ಲ ಎಂದು ಪ್ರತಿಪಾದಿಸಿದರು. ರಾಜ್ಯಸಭಾ ಚುನಾವಣೆಯಲ್ಲಿ ಯಾರಿಗೂ ಬೇಕಾದರೂ ಮತ ಹಾಕಬಹುದು ಎಂದು ಕಾನೂನು ಹೇಳುತ್ತದೆ. ಇಲ್ಲಿ ವಿಪ್ ಉಲ್ಲಂಘನೆ ಆಗಿದ್ದರೆ ಅವತ್ತೇ ಕ್ರಮ ತೆಗೆದುಕೊಳ್ಳುತ್ತಿದ್ದರು. ಬಿಜೆಪಿಗೆ ವಿಪ್ ತೋರಿಸಿಯೇ ಮತ ಹಾಕಿದ್ದೇನೆ. ನನ್ನ ಮೇಲೆ ಕ್ರಮ ತೆಗೆದುಕೊಂಡರೆ ತೆಗೆದುಕೊಳ್ಳಿ ಎಂದು ಹೇಳಿದ್ದೇನೆ. ಹೀಗಾಗಿ ಇಂದು ಬಹಳ ಸಂತೋಷದಿಂದ ಇದ್ದೇನೆ. ಪಕ್ಷದ ಯಾವ ಕಟ್ಟುಪಾಡೂ ನನಗೆ ಇಲ್ಲ. ಸ್ವತಂತ್ರವಾಗಿ ಇದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಎಸ್.ಟಿ.ಸೋಮಶೇಖರ್ ಪ್ರತಿಕ್ರಿಯಿಸಿದರು.
ಕಾಂಗ್ರೆಸ್‌ನಲ್ಲಿ ಬೆಳೆದಿರುವೆ: ಕಾಂಗ್ರೆಸ್‌ಗೆ ಸೇರ್ಪಡೆಯಾಗುವಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಮೂಲದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ಕಾಂಗ್ರೆಸ್ ಪಕ್ಷದಲ್ಲೇ ಇದ್ದವನು. ಎಚ್.ಡಿ.ಕುಮಾರಸ್ವಾಮಿ ಜೊತೆಗಿನ ಸಮ್ಮಿಶ್ರ ಸರ್ಕಾರ ಸರಿ ಬರಲಿಲ್ಲ. ಮೈತ್ರಿ ಸರ್ಕಾರ ಧಿಕ್ಕರಿಸಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದೆವು. ಬಿಜೆಪಿ ಸೇರಿದ 17 ಜನರಲ್ಲಿ ನನ್ನದೂ ಒಂದು ಅಳಿಲು ಸೇವೆ ಇದೆ. ಮೂರು ವರ್ಷದ ಸಹಕಾರಿ ಸಚಿವನಾಗಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಈ ಅವಧಿಯಲ್ಲಿ ಒಬ್ಬರೂ ಒಂದು ಮಾತನಾಡಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ನಾನು ಬೆಳೆದಿದ್ದೇನೆ. ಸಿದ್ದರಾಮಯ್ಯ ಯಥೇಚ್ಛವಾಗಿ ಅನುದಾನ ನೀಡಿದ್ದರು. ನನ್ನ ಬೆಳವಣಿಗೆಗೆ ಸಹಕಾರಿ ಆಗಿದ್ದರು ಎಂದರು.
ಬಿಜೆಪಿ ಜತೆಗಿನ ಋಣಾನುಬಂಧ ಮುಗಿದಿದೆ: ಕ್ಷೇತ್ರಕ್ಕೆ ಅನುದಾನ ತರುವ ಉದ್ದೇಶದಿಂದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರನ್ನು ಭೇಟಿಯಾಗಿದ್ದೇನೆ. ಈ ಎರಡು ವರ್ಷದಲ್ಲಿ ಕಾಂಗ್ರೆಸ್ ಪಕ್ಷ ಅವರ ಶಾಸಕರಿಗೆ ಏನು ಸಹಾಯ ಮಾಡಿದೆಯೋ ಅದನ್ನು ನನಗೂ ಮಾಡಿದೆ. ಬಿಜೆಪಿಯಲ್ಲಿ ನನ್ನನ್ನು ನೂರಕ್ಕೆ ನೂರು ಉಚ್ಚಾಟನೆ ಮಾಡಿ ಎಂದು ಹೇಳಿದವರೇ ಹೆಚ್ಚು ಎಂದು ಕಾಣುತ್ತದೆ. ನನ್ನ ಬಳಿ ಒಂದು, ಹೈಕಮಾಂಡ್ ಬಳಿ ಮತ್ತೊಂದು ಹೇಳಿರುತ್ತಾರೆ. ಬಿಜೆಪಿಗೂ ನನಗೂ ಋಣಾನುಬಂಧ ಮುಗಿದೆ. ಈಗ ಆ ಪಕ್ಷ ಹಾಗೂ ಪಕ್ಷದ ನಾಯಕರ ವಿರುದ್ಧ ಮಾತನಾಡುವುದಿಲ್ಲ ಎಂದು ಹೇಳಿದರು.
ಬೆಳವಣಿಗೆ ಸಹಿಸಲಿಲ್ಲ: ಬಿಜೆಪಿಯಲ್ಲಿ ವಿಪರೀತ ಗುಂಪುಗಾರಿಕೆ ಇದೆ. ಅಲ್ಲಿ ಬೆಳವಣಿಗೆ ಸಹಿಸುವುದಿಲ್ಲ. ಆದರೂ ನಾನು ನನ್ನ ಮಿತಿಯಲ್ಲೇ ಇದ್ದೆ. ಸಹಕಾರ ಸಚಿವ ಅಮಿತ್ ಶಾ ಅವರು ಹೆಸರು ಹಿಡಿದು ಕರೆದು ಮಾತನಾಡುವಷ್ಟರ ಮಟ್ಟಕ್ಕೆ ಗುರುತಿಸಿಕೊಂಡಿದ್ದೆ. ಇದನ್ನು ಕೆಲವರಿಗೆ ಸಹಿಸಲು ಆಗಿಲ್ಲ. ಕಾಂಗ್ರೆಸ್‌ನಿಂದ ಬಂದವನು ಅಮಿತ್ ಶಾ ಗುರುತಿಸುವ ಮಟ್ಟಕ್ಕೆ ಬೆಳೆದನಲ್ಲ ಎಂದು ತಳಮಳಗೊಂಡಿದ್ದರು. ಏನೇ ಇರಲಿ, ಪಕ್ಷದ ಹೈಕಮಾಂಡ್ ತೀರ್ಮಾನ ಸ್ವಾಗತಿಸುವೆ ಎಂದು ಸೋಮಶೇಖರ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.