ಕೊಪ್ಪಳ ಏತ ನೀರಾವರಿ ವಿಷಯದಲ್ಲಿ ಮಾಜಿ ಸಿಎಂ ಸಿದ್ರಾಮಯ್ಯ ಸುಳ್ಳು ಹೇಳುವುದರ ಮೂಲಕ ಬುರುಡೆ ಬಿಡುವ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದರು.
ಕುಷ್ಟಗಿ (ಮಾ.13): ಕೊಪ್ಪಳ ಏತ ನೀರಾವರಿ ವಿಷಯದಲ್ಲಿ ಮಾಜಿ ಸಿಎಂ ಸಿದ್ರಾಮಯ್ಯ ಸುಳ್ಳು ಹೇಳುವುದರ ಮೂಲಕ ಬುರುಡೆ ಬಿಡುವ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದರು. ಪಟ್ಟಣದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೊಪ್ಪಳ ಏತ ನೀರಾವರಿ ಯೋಜನೆಗೆ ನಾವು ದುಡ್ಡು ಕೊಟ್ಟಿದ್ದೇವೆ ಎಂದು ಮಾಜಿ ಸಿಎಂ ಸಿದ್ರಾಮಯ್ಯ ಬುರುಡೆ ಬಿಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಸಚಿವರು, ಸಂಸದರು ಹಾಗೂ ಬಿಜೆಪಿ ನಾಯಕರ ಶ್ರಮದಿಂದ ಇಂದು ಕೊಪ್ಪಳ ಏತ ನೀರಾವರಿಗೆ ಬಿಜೆಪಿ ಸರ್ಕಾರ ದುಡ್ಡು ಕೊಟ್ಟಿದೆ. ಅವರ ಮಾತನ್ನು ಯಾರೂ ನಂಬಬಾರದು ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಜನಧನ ಖಾತೆ, ಶೌಚಾಲಯ ನಿರ್ಮಾಣ, ಗ್ಯಾಸ್ ವಿತರಣೆಗೆ ಯಾವ ಜಾತಿ ಎಂದು ಕೇಳಲಿಲ್ಲ, ಆದ ಕಾರಣ ಜನರು ವಿಧಾನಸಭಾ ಚುನಾವಣೆಯಲ್ಲಿ ಜಾತಿ ನೋಡದೆ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಬೇಕು. ಜಾತಿಯ ಆಧಾರದ ಮೇಲೆ ಮತದಾನ ಮಾಡಿದರೆ ಅದು ಪ್ರಜಾಪ್ರಭುತ್ವಕ್ಕೆ ಮಾಡಿದ ದ್ರೋಹ ಆಗುತ್ತದೆ ಎಂದರು. ಕಾಂಗ್ರೆಸ್ ಜಾತಿಗಳ ಮಧ್ಯೆ ಹೊಡೆದಾಡಿಸುವ ರಾಜಕಾರಣ ಮಾಡುತ್ತದೆ. ಆದರೆ ನಾವು ಜಾತ್ಯತೀತ ರಾಜಕಾರಣ ಮಾಡುತ್ತಿದ್ದು, ಅನುಭವ ಮಂಟಪದ ಪುನರುತ್ಥಾನಕ್ಕೆ .12ನೂರು ಕೋಟಿ ಅನುದಾನ ಕೊಟ್ಟಿದ್ದೇವೆ. ಇದರಲ್ಲಿ ಹಡಪದ ಅಪ್ಪಣ್ಣ, ಮಡಿವಾಳ ಮಾಚಿದೇವ ಸಮಾಜದವರು ಸೇರಿದಂತೆ ಎಲ್ಲ ಜಾತಿಯ ಜನರು ಮುಕ್ತವಾಗಿ ಚರ್ಚೆ ಮಾಡಬಹುದಾಗಿದೆ ಎಂದರು.
undefined
ವಿದೇಶಿಗರಿಂದ ಸಹಾಯ ಕೇಳುವ ಸ್ಥಿತಿ ದೇಶಕ್ಕೆ ಬಂದಿಲ್ಲ: ಸಿ.ಟಿ.ರವಿ
ನಮ್ಮನ್ನು ಮುಸ್ಲೀಂ ವಿರೋಧಿ ಎಂದು ಬಿಂಬಿಸುವ ರೀತಿಯಲ್ಲಿ ಕಾಂಗ್ರೆಸ್ ಮಾಡುತ್ತಿದೆ. ಆದರೆ ಎಪಿಜೆ ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ ಸರ್ಕಾರ ಎನ್ನುವುದನ್ನು ಮರೆಯಬಾರದು. ಕಾಂಗ್ರೆಸ್ಸಿಗೆ ದಾವೂದ್ ಇಬ್ರಾಹಿಂ ಅವರ ತತ್ವ, ನಮಗೆ ಎಪಿಜೆ ಅಬ್ದುಲ್ ಕಲಾಂ, ಅಟಲ್ ಬಿಹಾರಿ ವಾಜಪೇಯಿ ಹಾಗೂ ಸಂತ ಶಿಶುನಾಳ ಷರೀಪ ಅವರ ತತ್ವ ಪಾಲನೆ ಮುಖ್ಯ. ಕಾಂಗ್ರೆಸ್ ಬಿನ್ ಲಾಡೆನ್ ಅವರ ಹೆಸರಿನಲ್ಲಿ ವೋಟ್ ಕೇಳಿದರೆ ನಾವು ರಾಷ್ಟ್ರಭಕ್ತರ ಹೆಸರಿನಲ್ಲಿ ಮತ ಕೇಳುತ್ತೆವೆ ಎಂದರು. ಜಗತ್ತೇ ನರೇಂದ್ರ ಮೋದಿಯವರನ್ನು ಒಪ್ಪಿಕೊಂಡಿದ್ದರೂ ಕಾಂಗ್ರೆಸ್ ಮಾತ್ರ ಮೋದಿ ವಿರುದ್ಧ ಮಾತನಾಡುತ್ತಿದೆ. ನಮ್ಮ ದೇಶ ಅಲ್ಲದೇ ಪಾಕಿಸ್ತಾನವು ಸಹ ನಮಗೆ ಇಮ್ರಾನ್‌ಖಾನ್ ಬೇಡ ಮೋದಿ ಬೇಕು ಎಂದು ಕೇಳುತ್ತಿದೆ. ಕಾಂಗ್ರೆಸ್ ನಾಯಕರು ಪಾಕಿಸ್ತಾನ ಜಪ ಮಾಡುತ್ತಿದ್ದು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ ನೀಡಿ ಕಾಂಗ್ರೆಸ್‌ಗೆ ಪಾಕಿಸ್ತಾನಕ್ಕೆ ಕಳುಹಿಸೋಣ ಎಂದರು.
ಸಾರಿಗೆ ಸಚಿವ ಬಿ. ಶ್ರೀರಾಮುಲು ಮಾತನಾಡಿ, ಕುಷ್ಟಗಿ ಮಾಜಿ ಶಾಸಕ ದೊಡ್ಡನಗೌಡರ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದ್ದು. ಈಗಾಗಲೇ ಎರಡು ಸಲ ಗೆಲವು ಸಾಧಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಮುಂಬರುವ ಡಬಲ್ ಇಂಜಿನ್ ಸರಕಾರದಲ್ಲಿ ದೊಡ್ಡನಗೌಡರು ಶಾಸಕರನ್ನಾಗಿ ಮಾಡುವ ಸಂಕಲ್ಪ ಮಾಡಬೇಕು. ಇಲ್ಲಿಯ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಕೇವಲ ದುಡ್ಡಿನಿಂದ ಚುನಾವಣೆ ಗೆಲ್ಲಬಹುದು ಅಂತ ಅಂದುಕೊಂಡಿದ್ದಾರೆ. ಈ ಸಲ ಅದು ಸುಳ್ಳಾಗುತ್ತದೆ. ಕುಷ್ಟಗಿಯ ಜನರು ದೊಡ್ಡನಗೌಡ ಪಾಟೀಲರ ಗೆಲ್ಲಿಸಲು ಸಂಕಲ್ಪ ಮಾಡಬೇಕು ಎಂದರು.
ಸಿಂಧೂರ ಇಡುವವರು ಕಾಂಗ್ರೆಸ್‌ಗೆ ಮತ ನೀಡಬೇಡಿ: ಸಿದ್ದು ವಿರುದ್ಧ ಹರಿಹಾಯ್ದ ಸಿ.ಟಿ.ರವಿ
ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ ಮಾತನಾಡಿ, ನಮ್ಮ ಪ್ರಧಾನಿಗಳ ಸಾಧನೆ ಇಡೀ ಜಗತ್ತೆ ಮೆಚ್ಚಿಕೊಂಡಿದೆ. ವಿಧಾನಸಭಾ ಕ್ಷೇತ್ರದ ಜನರು ಬಿಜೆಪಿಯ ತತ್ವ ಸಿದ್ಧಾಂತ ಮೆಚ್ಚಿಕೊಂಡು ಅನೇಕ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಬರುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಸಚಿವರಾದ ಹಾಲಪ್ಪ ಆಚಾರ್, ಆನಂದ ಸಿಂಗ್, ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಕೆ ಶರಣಪ್ಪ, ಬಸವರಾಜ ಹಳ್ಳೂರು, ಕೆ.ಮಹೇಶ್, ಶರಣು ತಳ್ಳಿಕೇರಿ, ಗಂಗಾಧರಯ್ಯ ಹಿರೇಮಠ, ಜೆ.ಜೆ.ಆಚಾರ, ಬಸವರಾಜ ಬುಡಕಟ್ಟಿ, ಚಂದ್ರಕಾಂತ ವಡಗೇರಿ, ಮಲ್ಲಣ್ಣ ಪಲ್ಲೇದ ಸೇರಿದಂತೆ ಇನ್ನಿತರ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದರು.