ಕಾಂಗ್ರೆಸ್‌ನ ಹುಟ್ಟುಗುಣ ಸುಟ್ಟರೂ ಹೋಗದು: ಸಿಟಿ ರವಿ

By Kannadaprabha NewsFirst Published Oct 22, 2020, 3:43 PM IST
Highlights

ಬೋಲೋ ಭಾರತ ಮಾತಕೀ ಜೈ ಎನ್ನುವ ಘೋಷಣೆ ಕನಕಪುರಕ್ಕೂ ಕೇಳಿಸಬೇಕು. ಕಾರ್ಯಕರ್ತರು ಘೋಷಣೆಗೆ ಬಂಡೆ ಒಡೆದು ಹೋಗಬೇಕು| ಜೆಡಿಎಸ್‌ನಲ್ಲಿ ದೊಡ್ಡಗೌಡ್ರು, ಸಣ್ಣಗೌಡ್ರು, ಇದೀಗ ಮರಿಗೌಡ್ರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ| 
 

ಬಳ್ಳಾರಿ(ಅ.22): ಮಕ್ಕಳ ಪ್ರವಾಸದಲ್ಲೂ ಜಾತಿಯ ವಿಷ ಬೀಜ ಬಿತ್ತುವ, ನಿರ್ದಿಷ್ಟಕೋಮಿಗೆ ಮಾತ್ರ ಶಾದಿಭಾಗ್ಯ ಯೋಜನೆ ತಂದು ಮತಬ್ಯಾಂಕ್‌ ರಾಜಕಾರಣ ಮಾಡುವ ಕಾಂಗ್ರೆಸ್‌ನದು ಹುಟ್ಟುಗುಣ. ಅದು ಸುಟ್ಟರೂ ಹೋಗದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟೀಕಿಸಿದ್ದಾರೆ. 

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನಗರದ ಗೋವಿಂದಪ್ಪ ಕಲ್ಯಾಣ ಮಂಟಪದಲ್ಲಿ ಬುಧವಾರ ಸಂಜೆ ಜರುಗಿದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾಂಗ್ರೆಸ್‌ ಜಾತಿ ವಿಷಬೀಜ ಬಿತ್ತುವ ಪಕ್ಷ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಕುಟುಂಬ ರಾಜಕಾರಣಕ್ಕೆ ಮತ್ತೊಂದು ಹೆಸರು ಅದು ಕಾಂಗ್ರೆಸ್‌ ಎಂದು ಜನರೇ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರ ನಂತರ ಇನ್ಯಾರು? ಎಂಬ ಪ್ರಶ್ನೆಗೆ, ಮತ್ತದೇ ಕುಟುಂಬದ ಪ್ರಿಯಾಂಕಾ ಗಾಂಧಿ ಎಂಬ ಮಾತು ಹೊರ ಬೀಳುತ್ತದೆ. ಇನ್ನು ಜೆಡಿಎಸ್‌ನಲ್ಲಿ ದೊಡ್ಡಗೌಡ್ರು, ಸಣ್ಣಗೌಡ್ರು, ಇದೀಗ ಮರಿಗೌಡ್ರು ರಾಜಕಾರಣ ಶುರು ಮಾಡಿದ್ದಾರೆ. ಬಿಜೆಪಿಯಲ್ಲಿ ಚಹಾ ಮಾರುವ ವ್ಯಕ್ತಿ ಪ್ರಧಾನಿಯಾದರು. ಸಾಮಾನ್ಯ ರೈತನ ಮಗ ಈ ನಾಡಿನ ಮುಖ್ಯಮಂತ್ರಿಯಾದರು. ಇದು ಕಾಂಗ್ರೆಸ್‌ನಲ್ಲಿ ಸಾಧ್ಯವೇ? ಜೆಡಿಎಸ್‌ನಲ್ಲಿ ಸಾಧ್ಯವೇ? ಎಂದು ಸಿಟಿ ರವಿ ಕೇಳಿದರು.

ನಾನು ಪಕ್ಷದ ಬಾವುಟ ಕಟ್ಟುತ್ತಿದ್ದ ಸಾಮಾನ್ಯ ಕಾರ್ಯಕರ್ತನಾಗಿದ್ದೆ. ಪೋಸ್ಟರ್‌ ಅಂಟಿಸುತ್ತಿದ್ದೆ. ಮೈಕ್‌ನಲ್ಲಿ ಅನೌನ್ಸ್‌ ಮಾಡುತ್ತಿದ್ದೆ. ಬಿಜೆಪಿ ನನ್ನನ್ನು ಶಾಸಕರನ್ನಾಗಿಸಿತು. ಮಂತ್ರಿಯನ್ನಾಗಿ ಮಾಡಿತು. ಇದೀಗ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದೆ. ಇದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ಸಾಧ್ಯವೇ ಎಂದು ಸಿಟಿ ರವಿ ಪ್ರಶ್ನಿಸಿದರು.

ನಳಿನ್‌ ಒಬ್ಬ ಕಾಡು ಮನುಷ್ಯ, ಅರಣ್ಯಕ್ಕೆ ಬಿಡಿ: ಸಿದ್ದು ವಾಗ್ದಾಳಿಗೆ ಉತ್ತರಿಸಲು ಕಟೀಲ್‌ ಹಿಂದೇಟು

ಶಿಕ್ಷಕರ ಕ್ಷೇತ್ರದ ಚುನಾವಣೆ ಮಾಸ್‌ ಅಲ್ಲ, ಕ್ಲಾಸ್‌ ಚುನಾವಣೆಯಾಗಿದ್ದು ನಮ್ಮ ಪಕ್ಷದ ಅಭ್ಯರ್ಥಿ ಶಶಿಲ್‌ ನಮೋಶಿ ಗೆಲ್ಲುವುದು ಖಚಿತ. ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಿ. ಪಕ್ಷದ ಅಭ್ಯರ್ಥಿಯನ್ನು ಬಹುಮತದಿಂದ ಚುನಾಯಿತಗೊಳ್ಳಲು ಶ್ರಮಿಸಿ ಎಂದು ಕರೆ ನೀಡಿದರು.

ಸುಳ್ಳು ಹೇಳುವುದರಲ್ಲಿ ನಿಸ್ಸೀಮರು...

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಮಾತನಾಡಿ, ಕಾಂಗ್ರೆಸ್‌ನ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಪ್ರವಾಹಪೀಡಿತ ಪ್ರದೇಶಗಳಿಗೆ ಬಿಜೆಪಿಯವರು ಭೇಟಿ ನೀಡಿಲ್ಲ ಎಂದು ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಸೇರಿದಂತೆ ಪಕ್ಷದ ನಾಯಕರು ಎಲ್ಲ ಕಡೆ ಸುತ್ತಾಡಿ ಜನರ ಸಂಕಷ್ಟಗಳನ್ನು ಆಲಿಸುತ್ತಿದ್ದಾರೆ. ಇದು ಕಣ್ಣಿಗೆ ಕಾಣುವುದಿಲ್ಲವೇ? ಎಂದು ಈಶ್ವರಪ್ಪ ಕೇಳಿದರು.

ಉಪ ಚುನಾವಣೆ ದಿಕ್ಸೂಚಿ...

ರಾಜರಾಜೇಶ್ವರಿ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ನಾನು ಸಹ ಹೇಳುತ್ತಿದ್ದೇನೆ. ಈ ಚುನಾವಣೆ ದಿಕ್ಸೂಚಿ. ಎರಡು ಉಪ ಚುನಾವಣೆ ಸೇರಿದಂತೆ ಆರು ಕಡೆ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ಕಾಂಗ್ರೆಸ್‌ನ ದಿಕ್ಸೂಚಿಯೇ ಬದಲಾಗುತ್ತದೆ ಎಂದ ಈಶ್ವರಪ್ಪ, ಈಗಾಗಲೇ ಶಿಥಿಲಗೊಂಡಿರುವ ಕಾಂಗ್ರೆಸ್‌, ಎರಡು ಕ್ಷೇತ್ರದಲ್ಲಿ ಗೆದ್ದರೆ ಮಾತ್ರ ಅದರ ಉಸಿರಾಟ ಮುಂದು​ವ​ರಿಯು​ತ್ತ​ದೆ ಎಂದು ವ್ಯಂಗ್ಯವಾಡಿದರು.

ಪಕ್ಷದ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ್‌, ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ಹರಪನಹಳ್ಳಿ ಶಾಸಕ ಜಿ. ಕರುಣಾಕರ ರೆಡ್ಡಿ, ಮಾಜಿ ಶಾಸಕ ನೇಮಿರಾಜ ನಾಯ್ಕ, ಚಂದ್ರನಾಯ್ಕ, ಪಕ್ಷದ ಹಿರಿಯ ಮುಖಂಡ ಕೆ.ಎ. ರಾಮಲಿಂಗಪ್ಪ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್‌, ಮಹಿಳಾ ಮೋರ್ಚಾದ ಡಾ. ಅರುಣಾ ಕಾಮಿನೇನಿ, ಡಾ. ಮಹಿಪಾಲ್‌, ಎಸ್‌. ಗುರುಲಿಂಗನಗೌಡ, ಸಾಧನಾ ಹಿರೇಮಠ, ಗಣಪಾಲ್‌ ಐನಾಥ ರೆಡ್ಡಿ ಮತ್ತಿತರರಿದ್ದರು. ಅನಿಲ್‌ನಾಯ್ಡು ಮೋಕಾ ಕಾರ್ಯಕ್ರಮ ನಿರ್ವಹಿಸಿದರು.

ಘೋಷಣೆ ಹಾಕಿದ್ರೆ ಬಂಡೆ ಒಡೆಯಬೇಕು...

ಬೋಲೋ ಭಾರತ ಮಾತಕೀ ಜೈ ಎನ್ನುವ ಘೋಷಣೆ ಅಲ್ಲಿಗೂ ಕೇಳಿಸಬೇಕು. ಕಾರ್ಯಕರ್ತರು ಘೋಷಣೆಗೆ ಬಂಡೆ ಒಡೆದು ಹೋಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಾರ್ಯಕರ್ತರಿಗೆ ಹುರಿದುಂಬಿಸಿದರು. ತಮ್ಮ ಭಾಷಣ ಮುಗಿದ ಬಳಿಕ ಭಾರತ ಮಾತಾಕೀ ಜೈ ಎಂದು ಘೋಷಣೆ ಹಾಕಿಸಿದ ಸಿಟಿ ರವಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಉದ್ದೇಶಿಸಿ ಬಂಡೆ ಒಡೆಯುವಂತೆ ಘೋಷಣೆ ಹಾಕಿ ಎಂದರು.
 

click me!