ಮೈತ್ರಿ ಸರ್ಕಾರದಲ್ಲಿ ಮಂತ್ರಿ ಬಿಟ್ಟುಬಂದು ಬಿಜೆಪಿ ಸೇರಿರುವ ಎಂಟಿಬಿ ನಾಗರಾಜ್ ಇದೀಗ ಸಚಿವ ಸ್ಥಾನದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರು,(ನ.28): ನನ್ನ ಹಣೆಬರಹ ಸರಿಯಿಲ್ಲ. ಹಾಗಾಗಿ ನಾನು ಮಂತ್ರಿಯಾಗಿಲ್ಲ ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಂತ್ರಿಯಾಗಿ ಈಗ ಮಾಜಿ ಆಗಿದ್ದೇನೆ. ವಿಧಾನಪರಿಷತ್ ಸದಸ್ಯರಾಗಿ 5 ತಿಂಗಳಾಯಿತು. ನನಗೆ ಮಂತ್ರಿಯಾಗುವ ಅದೃಷ್ಟ ಕೂಡಿಬಂದಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಸಚಿವ ಸ್ಥಾನ ಸಿಕ್ತು, ಈಗ ಹೊಸ ಬೇಡಿಕೆ ಇಟ್ಟ ವಲಸಿಗ ಬಿಜೆಪಿ ನಾಯರು..!
ಯಾವಾಗ ಅದೃಷ್ಟ ಕೂಡಿಬರುತ್ತದೆಯೋ ಗೊತ್ತಿಲ್ಲ. ನನ್ನ ಹಣೆಬರಹ ಸರಿ ಇಲ್ಲದಿದ್ದಾಗ ಯಾರೂ ಏನು ಮಾಡಲು ಸಾಧ್ಯವಿಲ್ಲ. ಏನೇನಾಗುತ್ತದೆಯೋ ಆಗಲಿ ನಿರಾಸೆಯಾಗಿ ಹೇಳಿದರು.
ದೆಹಲಿಗೆ ಹೋಗೋಣ ಎಂದು ಮುಖ್ಯಮಂತ್ರಿಗೆ ನಾನೇ ಹೇಳಿದ್ದೇನೆ. ಅವರು ಬಿಡುವು ಮಾಡಿಕೊಂಡು ಹೋಗೋಣ ಎಂದು ಹೇಳಿದ್ದಾರೆ. ಸಮಯ ಯಾವಾಗ ಕೂಡಿಬರುತ್ತದೆಯೋ ಗೊತ್ತಿಲ್ಲ. ಅಲ್ಲಿಯ ತನಕ ಕಾಯಲೇಬೇಕಲ್ಲವೆ ಎಂದರು.
ಕೆಲವರ ಹಣೆಬರಹ ಚೆನ್ನಾಗಿದೆ. ಹಾಗಾಗಿ ಬೇಗ ಸಚಿವರಾಗಿದ್ದಾರೆ. ನನ್ನ ಹಣೆಬರಹ ಚೆನ್ನಾಗಿಲ್ಲದ ಕಾರಣ ನನಗೆ ಸಚಿವನಾಗುವ ಅದೃಷ್ಟ ಕೂಡಿಬಂದಿಲ್ಲ. ನಿನ್ನೆ ರಾತ್ರಿ ಸಭೆ ನಡೆದಿರುವುದಕ್ಕೆ ಯಾವ ವಿಶೇಷತೆಯೂ ಇಲ್ಲ. ಆಗಾಗ್ಗೆ ನಾವು ಭೇಟಿಯಾಗುವುದರಲ್ಲಿ ತಪ್ಪೇನಿದೆ ಎಂದು ಸಮರ್ಥಿಸಿಕೊಂಡರು.