* ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಹೋಗು ಬಗ್ಗೆ ಚರ್ಚೆ
* ಈ ವಿಚಾರಕ್ಕೆ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ವಿಶ್ವನಾಥ್
* ಸಿದ್ದರಾಮಯ್ಯನಿಗೆ ರಾಜಕೀಯ ಪುಕ್ಕಲುತನ ಇದೆ ಎಂದ ಹಳ್ಳಿಹಕ್ಕಿ
ಮೈಸೂರು, (ಅ.11): ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ತೆರಳಲು ಹಿಂದೇಟು ಹಾಕಿದ್ದಾರೆ. ಸಿದ್ದರಾಮಯ್ಯಗೆ ರಾಜಕೀಯ ಪುಕ್ಕಲುತನವಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ (H Vishwanath) ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ(sonia gandhi) ಅವರು ಮಾಜಿ ಸಿಎಂ ಸಿದ್ದರಾಮಯ್ಯ(siddaramaiah) ಅವರಿಗೆ ರಾಷ್ಟ್ರರಾಜಕಾರಣಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಅದನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ನಿರಾಕರಿಸಿದ್ದಾರೆ ಎನ್ನುವ ಮಾತುಗಳು ಚರ್ಚೆಯಾಗುತ್ತಿವೆ.
ರಾಷ್ಟ್ರ ರಾಜಕಾರಣಕ್ಕೆ ಹೋಗ್ತಾರಾ? ಸೋನಿಯಾ ಭೇಟಿ ಬಳಿಕ ಸ್ಪಷ್ಟನೆ ಕೊಟ್ಟ ಸಿದ್ದು
ಇನ್ನು ಈ ಬಗ್ಗೆ ಮೈಸೂರಿನಲ್ಲಿ (Mysuru) ಇಂದು (ಅ.11) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್, ಮುಖ್ಯಮಂತ್ರಿ ಆಗಿದ್ದ ಎಚ್.ಡಿ. ದೇವೇಗೌಡ (HD Devegowda) ಈ ದೇಶದ ಪ್ರಧಾನಿಯಾದರು. ಪ್ರಧಾನಿಯಾಗುವ ಅವಕಾಶ ಸಿಕ್ಕಾಗ ಒಪ್ಪಿಕೊಳ್ಳುವ ಧೈರ್ಯ ತೋರಿದರು. ದೇವೇಗೌಡರಿಗೆ ಹೋಲಿಸಿದರೆ ಸಿದ್ದರಾಮಯ್ಯಗೆ ಧೈರ್ಯ ಇಲ್ಲ. 3ನೇ ಬಾರಿ ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ (Narendra Modi) ಕಳೆದ 7 ವರ್ಷದಿಂದ ಪ್ರಧಾನಿಯಾಗಿದ್ದಾರೆ ಎಂದರು.
ಪ್ರಧಾನಿ ಹುದ್ದೆ ದೇಶದ ಪರಮೋಚ್ಚ ಸ್ಥಾನವಾಗಿದೆ. ನನಗೂ ಪ್ರಧಾನಿ ಹುದ್ದೆ ಕೊಟ್ಟರೆ ರಾಷ್ಟ್ರ ರಾಜಕಾರಣಕ್ಕೆ ಬರುತ್ತೇನೆ ಅಂತ ಸೋನಿಯಾ ಗಾಂಧಿಗೆ ಸಿದ್ದರಾಮಯ್ಯ ಹೇಳಬೇಕಿತ್ತು. ಅಲ್ಲಿಗೆ ಹೋಗದೆ ಇಲ್ಲಿಯೇ ಸಿದ್ದರಾಮಯ್ಯ ಏಕೆ ಮೋದಿ ವಿರುದ್ಧ ಗುಡುಗಬೇಕು ಎಂದು ಪ್ರಶ್ನಿಸಿದರು.
ಯಡಿಯೂರಪ್ಪ (BS Yediyurappa) ಅವರು ಅಧಿಕಾರದಲ್ಲಿದ್ದಾಗ ಅಪ್ಪ- ಮಗ ಅಂತ ಏನೆಲ್ಲ ಮಾತನಾಡಿದ್ದೀರಿ ನೆನಪು ಮಾಡಿಕೊಳ್ಳಿ. ಯಡಿಯೂರಪ್ಪ ಅವರನ್ನು ವಾಚಾಮಗೋಚರವಾಗಿ ತೆಗಳಿದವರು ಈಗ ಹುಸಿ ಪ್ರೇಮ ತೋರಿಸುತ್ತಿದ್ದಾರೆ. ಇಂತಹ ಹೇಳಿಕೆಯಿಂದ ಯಾರಿಗೂ ಲಾಭವಿಲ್ಲ. ಕಾಂಗ್ರೆಸ್, ಜೆಡಿಎಸ್‌ಗೆ ಲಾಭವೂ ಇಲ್ಲ. ಬಿಜೆಪಿಗೆ ನಷ್ಟವೂ ಇಲ್ಲ ಎಂದು ಸಿದ್ದರಾಮಯ್ಯ, ಕುಮಾರಸ್ವಾಮಿಗೆ (HD Kumaraswamy) ತಿರುಗೇಟು ನೀಡದರು.
ಯಡಿಯೂರಪ್ಪ ಅವರ ಓಲೈಕೆಯಿಂದ ಲಿಂಗಾಯತ ಸಮುದಾಯದ ಮತ ಬರಲ್ಲ. ಯಡಿಯೂರಪ್ಪ ಅವರೇ ಸ್ವಾಗತ ಮಾಡಿರುವಾಗ ನಿಮ್ಮದೇನು ಕೊಸರು.? ಇಂತಹ ಬೂಟಾಟಿಕೆ ಮಾತನಾಡುವುದು ಶೋಭಾಯಮಾನ ಅಲ್ಲ. ಸಿಬಿಐ, ಸಿಐಡಿ, ಐಟಿ, ಇಡಿ ಮುಂತಾದವು ಸಾಂವಿಧಾನಿಕ ಸಂಸ್ಥೆಗಳು. ಭ್ರಷ್ಟಾಚಾರದ ಮೇಲೆ ದಾಳಿ ಮಾಡುವಾಗ ನಿಮ್ಮದೇನು ತಕರಾರು? ನೀವು ಭ್ರಷ್ಟಾಚಾರದ ಪರವೋ, ವಿರುದ್ಧವೋ ಎಂದು ಪ್ರಶ್ನಿಸಿದರು.