ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದ್ದು, ಒಳಜಗಳ ಆರಂಭವಾಗಿದೆ. ಸಂಕ್ರಾಂತಿ ದೂರ ಆಯ್ತು, ಈ ದೀಪಾವಳಿಯೊಳಗೆ ಸರ್ಕಾರ ಢಮಾರ್ ಆಗುತ್ತದೆ ಎಂದು ಭವಿಷ್ಯ ನುಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ
ಹುಬ್ಬಳ್ಳಿ(ಸೆ.10): ದೀಪಾವಳಿಯೊಳಗೆ ಕಾಂಗ್ರೆಸ್ ಸರ್ಕಾರ ಢಮಾರ್ ಆಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೊಸ ಬಾಂಬ್ ಸಿಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದ್ದು, ಒಳಜಗಳ ಆರಂಭವಾಗಿದೆ. ಸಂಕ್ರಾಂತಿ ದೂರ ಆಯ್ತು, ಈ ದೀಪಾವಳಿಯೊಳಗೆ ಸರ್ಕಾರ ಢಮಾರ್ ಆಗುತ್ತದೆ ಎಂದು ಭವಿಷ್ಯ ನುಡಿದರು.
ಹೊಸ ಸಿಎಂ, ಹೊಸ ಸರ್ಕಾರನಾ ಎಂಬ ಪ್ರಶ್ನೆಗೆ ಕಾಲವೇ ನಿರ್ಣಯ ಮಾಡುತ್ತದೆ. ಆದರೆ ಸಿದ್ದರಾಮಯ್ಯ ರಾಜೀನಾಮೆಗೆ ಕಾಂಗ್ರೆಸ್ ಮಹೂರ್ತ ನಿಗದಿ ಮಾಡಿದೆ. ಹೊರಗಡೆ ಸಿದ್ದರಾಮಯ್ಯ ಅವರ ಹಿಂದೆ ಬಂಡೆಯಂತೆ ನಿಂತಿದ್ದೇವೆ ಎಂದು ಹೇಳ್ತಾರೆ. ಆದರೆ ಒಳಗೊಳಗೆ ಬೇರೆನೇ ಇದೆ. ಹೀಗಾಗಿಯೇ ಕಾಂಪಿಟೇಶನ್ ಶುರುವಾಗಿದೆ ಎಂದರು.
undefined
ಕಾಂಗ್ರೆಸ್‌ನವರು ಇನ್ನು ಗಾಳಿಗೂ ತೆರಿಗೆ ಹಾಕ್ತಾರೆ: ಸಿ.ಟಿ. ರವಿ ಟೀಕೆ
ಒಂದು ಡಜನ್‌ಗೆ ಹೆಚ್ಚು ಜನ ಸಿಎಂ ಆಕಾಂಕ್ಷಿಗಳಾಗಿದ್ದಾರೆ. ಸಂಗೊಳ್ಳಿ ರಾಯಣ್ಣ ಪಿತೂರಿಗೆ ಬಲಿಯಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಸಿದ್ದರಾಮಯ್ಯ ಅವರನ್ನು ರಾಯಣ್ಣ ಅಂತ ನಾವೇನೂ ಭಾವಿಸಿಲ್ಲ. ಸರ್ಕಾರದಲ್ಲಿ ಹಗರಣ ನಡೆದಿರುವುದು ಸ್ಪಷ್ಟ. ಬರೀ ಹಗರಣಗಳದ್ದೇ ಸರ್ಕಾರ ಇದು. ವಾಲ್ಮೀಕಿ, ಮುಡಾ, ಅರ್ಕಾವತಿ, ಟೆಂಡರ್ ಹೀಗೆ ಪ್ರತಿಯೊಂದರಲ್ಲೂ ಸುಳ್ಳ ಲೆಕ್ಕ ಕಳ್ಳ ಬಿಲ್ ಎಂಬಂತೆ ಬರೀ ಭ್ರಷ್ಟಾಚಾರವೇ ನಡೆಯುತ್ತಿದೆ ಎಂದರು.
ಕಾಂಗ್ರೆಸ್ ಶಾಸಕರು, ಸಚಿವರು ಮತ್ತು ಮುಖಂಡರು ಸಿದ್ದರಾಮಯ್ಯ ಅವರ ರಾಜೀನಾಮೆಗೆ ಸಿದ್ಧತೆ ನಡೆಸಿದ್ದಾರೆ. ಅದಕ್ಕಾಗಿ ಸಮಯವನ್ನೂ ನಿಗದಿಪಡಿಸಿದ್ದಾರೆ. ಅದಕ್ಕೆ ಪೂರಕವಾಗಿ ಕೆಲವು ಸಚಿವರು ತಾವು ಸಹ ಮುಖ್ಯಮಂತ್ರಿ ಆಕಾಂಕ್ಷಿ ಎಂದು ಹೇಳಿಕೆ ನೀಡುತ್ತಿದ್ದಾರೆ ಎಂದರು.
ಸರ್ಕಾರ ಏನೇ ಮಾಡಿದರೂ ಕಳ್ಳನ ಹೆಂಡತಿ ಡ್ಯಾಶ್ ಡ್ಯಾಶ್ ಎಂದು ವ್ಯಂಗ್ಯವಾಡಿದ ಅವರು, ಏನೇ ಮುಚ್ಚಿಟ್ಟರೂ ಇದು ಭ್ರಷ್ಟಾಚಾರದ ಸರ್ಕಾರ. ಸಿದ್ದರಾಮಯ್ಯ ವಿರುದ್ಧ ಇರುವ ಮುಡಾ ಹಗರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಅಲ್ಲಿ ಮಾತ್ರ ಏನೂ ಮುಚ್ಚಿಡಲು ಸಾಧ್ಯವಿಲ್ಲ. ನ್ಯಾಯಾಲಯದಲ್ಲಿ ಎಲ್ಲವೂ ಸಾಬೀತಾಗುತ್ತದೆ. ಅದಕ್ಕೂ ಮುನ್ನ ಸಿಎಂ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ವಾರ್ತಾ ಇಲಾಖೆ ದುರುಪಯೋಗ ಆರೋಪ; ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ವಾಗ್ದಾಳಿ
ಕೋವಿಡ್ ಸಂದರ್ಭ ಬಿಜೆಪಿ ಭ್ರಷ್ಟಾಚಾರ ನಡೆಸಿದೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ತಮ್ಮ ತಪ್ಪನ್ನು ಮರೆಮಾಚಿ ಜನರ ದಿಕ್ಕು ತಪ್ಪಿಸಲು, ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಹಿಂದುತ್ವ ದುರ್ಬಲಗೊಳಿಸುವ ಷಡ್ಯಂತ್ರ:
ಭಾರತ ಬಿಟ್ಟು ಹಿಂದುತ್ವ ಇಲ್ಲ, ಹಿಂದುತ್ವ ಬಿಟ್ಟು ಭಾರತ ಇಲ್ಲ. ಆದರೆ, ಕೆಲವರು ಹಿಂದುತ್ವವನ್ನು ದುರ್ಬಲಗೊಳಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ. ನಮ್ಮದು ಉದಾತ್ತ ಸಂಸ್ಕೃತಿಯಾಗಿದ್ದು, ಹಿಂದೂಗಳೆಲ್ಲ ಸಂಘಟಿತರಾಗಬೇಕಿದೆ ಎಂದು ಕರೆ ನೀಡಿದರು.