Latest Videos

ಡಿಸಿಎಂ ಕೂಗು ಸುಮ್ಮನೇ ಬರುತ್ತಿರುವ ಕೂಗಲ್ಲ, ಇದರ ಹಿಂದೆ ಕಾಂಗ್ರೆಸ್ ಶಾಸಕರ ಅಸಹನೆ ಇದೆ: ಸಿ.ಟಿ. ರವಿ

By Girish GoudarFirst Published Jun 25, 2024, 12:24 PM IST
Highlights

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಆಂತರಿಕ ಕಲಹದಿಂದ ಸರ್ಕಾರ ಬೀಳಬಹುದು. ಶಾಸಕರ ಅಸಹನೆಯ ಕಟ್ಟೆ ಬೇಗ ಒಡೆದು ಹೋಗುತ್ತೆ ಅನ್ನಿಸುತ್ತಿದೆ. ಸರಕಾರ ಜನರ ಮತ್ತು ಶಾಸಕರ ವಿಶ್ವಾಸ ಕಳೆದುಕೊಂಡಾಗ ನಂಬರ್ ಮುಖ್ಯವಾಗಲ್ಲ ಎಂದ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ  

ಕಲಬುರಗಿ(ಜೂ.25): ಡಿಸಿಎಂ ದಂಗಲ್ ಕಾಂಗ್ರೆಸ್ ಪತನದವರೆಗೂ ಹೋಗಬಹುದು. ಡಿಸಿಎಂ ಕೂಗು ಸುಮ್ಮನೇ ಬರುತ್ತಿರುವ ಕೂಗಲ್ಲ. ಇದರ ಹಿಂದೆ ರಾಜಕಾರಣ ಇದೆ, ಕಾಂಗ್ರೆಸ್ ಶಾಸಕರ ಅಸಹನೆ ಇದೆ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಆಂತರಿಕ ಕಲಹದಿಂದ ಸರ್ಕಾರ ಬೀಳಬಹುದು. ಶಾಸಕರ ಅಸಹನೆಯ ಕಟ್ಟೆ ಬೇಗ ಒಡೆದು ಹೋಗುತ್ತೆ ಅನ್ನಿಸುತ್ತಿದೆ. ಸರಕಾರ ಜನರ ಮತ್ತು ಶಾಸಕರ ವಿಶ್ವಾಸ ಕಳೆದುಕೊಂಡಾಗ ನಂಬರ್ ಮುಖ್ಯವಾಗಲ್ಲ. ಈ ನಂಬರ್ಸ್‌ ಸರಕಾರವನ್ನು ಉಳಿಸುತ್ತೆ ಎನ್ನುವಂತಿಲ್ಲ ಎಂದು ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ಹೇಳಿದ್ದಾರೆ. 

ಇಂದು(ಮಂಗಳವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ಟಿ. ರವಿ ಅವರು, ಕಾಂಗ್ರೆಸ್ ನ ಅತೃಪ್ತ ಶಾಸಕರು ಬರೀ ಸಭೆ ಮಾತ್ರವಲ್ಲ, ಮುಂಬೈ, ದೆಹಲಿ, ಹೈದ್ರಾಬಾದ್‌ಗೆ ಹೋಗಿ ಬಂದಿದ್ದಾರೆ. ಈ ಸರಕಾರ ಬೀಳಿಸಲು ನಾವು ಯೋಚನೆ ಮಾಡ್ತಿಲ್ಲ. ಕಾಂಗ್ರೆಸ್‌ನಲ್ಲಿ ಕೆಲವರಿಗೆ ಮೃಷ್ಟಾನ್ನ ಭೋಜನ, ಕೆಲವರಿಗೆ ಉಪವಾಸ ಎಂಬಂತಾಗಿದೆ ಎಂದು ತಿಳಿಸಿದ್ದಾರೆ. 

ಇದು ಜನವಿರೋಧಿ, ಸತ್ತು ಹೋಗಿರೋ ಸರ್ಕಾರ, ಜನರೇ ದಫನ್ ಮಾಡೋ ದಿನ ಬರುತ್ತೆ: ಸಿಟಿ ರವಿ

ಗ್ಯಾರೆಂಟಿಯಿಂದಾಗಿ ಹಣ ಇಲ್ಲ ಅಂತ ನಮಗೆ ಹೇಳ್ತಿರಿ ಕೆಲವರು ಮಾತ್ರ ಲೂಟಿ ಮಾಡ್ತಾನೆ ಇದರಿ ಅಂತ ಅವರ ಶಾಸಕರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ಹಗರಣದ ಹಣ ಕಾಂಗ್ರೆಸ್ ಚುನಾವಣೆಗೆ ಬಳಕೆಯಾಗಿರೋ ಶಂಕೆಯಿದೆ. ಇದು ಪರಿಶಿಷ್ಠ ಜಾತಿ ಪರಿಶಿಷ್ಟ ವರ್ಗಕ್ಕೆ ಮಾಡಿರುವ ಅನ್ಯಾಯವಾಗಿದೆ. ಈ ಬಗ್ಗೆ ವಿಧಾನಸೌಧ ಒಳಗೂ ಹೊರಗೂ ನಾವು ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.  

ನಿನ್ನೆ ಸಿಎಂ ಸಿದ್ರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ವಿಚಾರದ ಬಗ್ಗೆ ಮಾತನಾಡಿದ ಸಿ.ಟಿ.ರವಿ, ಸಿದ್ರಾಮುಲ್ಲಾ ಖಾನ್ ಅಂತ ನಾನು ಅವರನ್ನು ಕರೆದಿದ್ದು ಅವರ ಓಲೈಕೆಯ ನೀತಿಯನ್ನ ಪ್ರತಿಬಿಂಬಿಸಿ. ನಾನು ನಿನ್ನೆ ಅವರ ಕಾಲಿಗೆ ನಮಸ್ಕಾರ ಮಾಡಿದ್ದು ನನ್ನ ಸಂಸ್ಕಾರದ ಕಾರಣದಿಂದ. ಹಿರಿಯರಿಗೆ ನಮಸ್ಕಾರ ಮಾಡೋದು ನಮ್ಮ ಮನೆಯಿಂದ ಕಲಿತಿರುವ ಸಂಸ್ಕಾರವಾಗಿದೆ ಎಂದಿದ್ದಾರೆ. 

ಅರ್ಜುನ್ ಕುರುಕ್ಷೇತ್ರ ಯುದ್ಧಕ್ಕೆ ಮುನ್ನ ಭಿಷ್ಮ ಮತ್ತು ದ್ರೋಣಾಚಾರ್ಯರ ಆಶಿರ್ವಾದ ಪಡೆಯುತ್ತಾನೆ. ಮುಂಬರುವ ಕುರುಕ್ಷೇತ್ರ ಯುದ್ಧಕ್ಕೆ ಅರ್ಜುನನ ರೀತಿಯಲ್ಲಿ ನಾನೂ ಕೂಡ ಆಶಿರ್ವಾದ ಪಡೆದುಕೊಂಡಿದ್ದೇನೆ. ಇದರಲ್ಲಿ ಸಿದ್ರಾಮಯ್ಯ ಅವರ ಪಾತ್ರ ಯಾವುದು ಎನ್ನುವುದು ನಿಮಗೆ ಬಿಟ್ಟಿದ್ದು. ಕೆಲವರು ಧೃತರಾಷ್ಟ್ರರು, ಇನ್ನು ಕೆಲವರು ಭಿಷ್ಮರು, ದ್ರೋಣಾಚಾರ್ಯರು, ಶಕುನಿ, ಶಲ್ಯನಂತಹ ಮಾವಂದಿರು ಸಹ ಇದ್ದಾರೆ. ಹಿರಿಯರಿಗೆ ನಮಸ್ಕಾರ ಮಾಡೋದು ನಮಗೆ ಕಲಿಸಿರುವ ಸಂಸ್ಕಾರ ಹಾಗಾಗಿ ಮಾಡಿದ್ದೇನಷ್ಟೆ ಎಂದು ತಿಳಿಸಿದ್ದಾರೆ. 

click me!