
ಬೇಲೂರು (ಸೆ.22): ಪಟ್ಟಣದ ಪುರಸಭೆ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿದ್ದು, ಈ ಪ್ರಕರಣ ಖಂಡಿಸಿ ಆರೋಪಿಯನ್ನು ಸ್ಥಳಕ್ಕೆ ಕರೆತರುವಂತೆ ಆಗ್ರಹಿಸಿ ಚನ್ನಕೇಶವ ದೇವಾಲಯದ ಮುಂಭಾಗ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಶಾಸಕ ಎಚ್. ಕೆ. ಸುರೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಎಂಎಲ್‌ಸಿ ಸಿ.ಟಿ.ರವಿ ಮಾತನಾಡಿ, ಚಪ್ಪಲಿ ಹಾರ ಹಾಕಿರುವ ಪ್ರಕರಣ ಬರೀ ಗಣಪತಿಗೆ ಆಗಿರುವ ಅವಮಾನವಲ್ಲ, ಇಡೀ ಹಿಂದೂ ಸಮಾಜಕ್ಕೆ ಆಗಿರುವ ಅನ್ಯಾಯವಾಗಿದೆ.
ಕೂಡಲೇ ಆರೋಪಿಯನ್ನು ಬಂಧಿಸಿ ಸರಿಯಾದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ನಾವು ಕಾನೂನು ಪಾಲಿಸುವವರು, ಆದ್ದರಿಂದ ತಾಳ್ಮೆಯಿಂದ ಇದ್ದೇವೆ. ಸಂಜೆಯೊಳಗೆ ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು. ಅವರ ಹಿಂದೆ ಯಾರಿದ್ದಾರೋ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಯಾರು ತಪ್ಪು ಮಾಡುತ್ತಾರೋ ಅವರಿಗೆ ಬುಲ್ಡೋಜರ್ ರೆಡಿ ಇದೆ ಎಂದು ಸರ್ಕಾರ ನೇರವಾಗಿ ಹೇಳಬೇಕು. ಇನ್ನು ಮುಂದೆ ಇಂತಹ ಕೃತ್ಯವನ್ನು ಹಿಂದೂ ಸಮಾಜ ಸಹಿಸಿಕೊಳ್ಳುವುದಿಲ್ಲ. ಸೋಮವಾರ ಬೇಲೂರು ಬಂದ್ ಗೆ ಕರೆ ಕೊಟ್ಟಿದ್ದೇವೆ. ಚಿಕ್ಕಮಗಳೂರು ಜಿಲ್ಲೆಯಿಂದಲೂ ಬೆಂಬಲ ಕೊಡುತ್ತೇವೆ ಎಂದರು.
ಗಣಪತಿ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಮಹಿಳೆ ಒಬ್ಬಳು ಕಂಡುಬಂದಿದ್ದು, ಈಗ ಅವಳನ್ನು ಮಾನಸಿಕ ಅಸ್ವಸ್ಥೆ ಎಂದು ಬಿಂಬಿಸಲಾಗುತ್ತಿದೆ. ಆರೋಪಿಯನ್ನು ಬಂಧಿಸದೇ ಮಾನಸಿಕ ಅಸ್ವಸ್ಥೆ ಎಂದು ಹೇಗೆ ಹೇಳುತ್ತೀರಿ. ಮಾನಸಿಕ ಅಸ್ವಸ್ಥೆಗೆ ಗಣಪತಿ ‘ದೇವರು’ ಎಂದು ಗೊತ್ತಾಗುತ್ತದಾ? ಅಲ್ಲದೇ ಮಾನಸಿಕ ಅಸ್ವಸ್ಥೆ ತನ್ನ ಮುಖ ಕಾಣಬಾರದು ಎಂದು ವೇಲ್ ನಿಂದ ಮುಚ್ಚಿಕೊಳ್ಳುವ ಬುದ್ದಿವಂತಿಕೆ ತೋರಿಸುತ್ತಾಳಾ? ಈ ಹಿಂದೆ ಹಸುವಿನ ಕೆಚ್ಚಲು ಕುಯ್ದ ಪ್ರಕರಣದಲ್ಲಿ ಮಾನಸಿಕ ಅಸ್ವಸ್ಥನಿಂದ ಘಟನೆ ನಡೆದಿದೆ ಎಂದು ಸರ್ಕಾರ ಹೇಳಿತ್ತು.
ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದಾಗ ಯಾರೋ ಕಿಡಿಗೇಡಿಗಳು ಎಸೆದಿದ್ದಾರೆ ಅಂದರು. ಇಂತಹ ಘಟನೆಗಳ ಹಿಂದೆ ದೊಡ್ಡ ಷಡ್ಯಂತ್ರವಿದೆ. ದೇಶ, ಹೊರ ದೇಶದವರ ಕೈವಾಡವಿದೆ. ಹಿಂದೂಗಳ ಭಾವನೆಗಳನ್ನು ಕೆರಳಿಸಬೇಡಿ. ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ಪೊಲೀಸರು ಮಾನಸಿಕ ಅಸ್ವಸ್ಥೆ ಎಂದು ಹೇಳುವ ಬದಲು ಸಮಗ್ರ ತನಿಖೆ ಮಾಡಲಿ ಎಂದು ಆಕ್ರೋಶ ಹೊರ ಹಾಕಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.