ರಾಜ್ಯದ ಜನರ ಹಿತ ಕಾಯದೇ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಮೂಲಕ ರಾಜ್ಯ ಸರ್ಕಾರ ಅಕ್ಷಮ್ಯ ಅಪರಾಧ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಕಿಡಿಕಾರಿದರು.
ಚನ್ನಪಟ್ಟಣ (ಸೆ.30): ರಾಜ್ಯದ ಜನರ ಹಿತ ಕಾಯದೇ ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಮೂಲಕ ರಾಜ್ಯ ಸರ್ಕಾರ ಅಕ್ಷಮ್ಯ ಅಪರಾಧ ಮಾಡಿದೆ. ರಾಜ್ಯ ಸರ್ಕಾರದ ಈ ಕ್ರಮದ ವಿರುದ್ಧ ಜನ ಸಿಡಿದೆದ್ದು ನಿಂತಿದ್ದು, ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಆಗ್ರಹಿಸಿದರು.
ನಗರದ ಗಾಂಧಿ ಸ್ಮಾರಕ ಭವನದ ಮುಂದೆ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಉತ್ತರ ಕರ್ನಾಟಕದವರೋ ಉತ್ತರ ಕರ್ನಾಟಕದವರೋ, ರಾಜ್ಯದ ಬೇರೆ ಭಾಗದ ಜನರೋ ವಾಸ್ತವ ಪರಿಸ್ಥಿತಿ ಅರಿಯದೆ ನೀರು ಬಿಟ್ಟಿದ್ದರೆ ಅವರಿಗೆ ಈ ಭಾಗದ ಜನರ ಕಷ್ಟದ ಅರಿವಿಲ್ಲ ಎನ್ನಬಹುದಿತ್ತು. ಆದರೆ, ಸಿಎಂ ಡಿಸಿಎಂ ಇಬ್ಬರೂ ಈ ಭಾಗದವರೆ ಆಗಿದ್ದರೂ ಅವರಿಗೆ ಜನರ ಸಂಕಷ್ಟದ ಅರಿವಾಗದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ರಾಜಕೀಯ ಹಿತಕ್ಕಾಗಿ ತಮಿಳುನಾಡಿಗೆ ನೀರು, ಈಗ ಪ್ರಧಾನಿ ಮಧ್ಯ ಪ್ರವೇಶಿಸಲಿ ಎನ್ನುವುದು ಎಷ್ಟು ಸರಿ: ಚಕ್ರವತಿ ಸೂಲಿಬೆಲೆ
ಜನರ ವಿಶ್ವಾಸಕ್ಕೆ ದ್ರೋಹ: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಇಬ್ಬರು ಕಾವೇರಿ ನೀರನ್ನೆ ಕುಡಿದು ಬೆಳೆದಿದ್ದು, ಈ ಭಾಗದ ಜನರ ಬೆಂಬಲದಿಂದಲೇ ಆರಿಸಿ ಬಂದಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇವರ ಮೇಲೆ ವಿಶ್ವಾಸವಿಟ್ಟು ಜನ ಇವರನ್ನು ಆರಿಸಿದರು. ಆದರೆ ನಿರಂತರವಾಗಿ 3 ತಿಂಗಳ ಕಾಲ ತಮಿಳುನಾಡಿಗೆ ನೀರು ಹರಿಸುವ ಮುಖಾಂತರ ಜನರ ವಿಶ್ವಾಸಕ್ಕೆ ಇವರಿಬ್ಬರು ದ್ರೋಹ ಬಗೆದಿದ್ದಾರೆ. ಆದ್ದರಿಂದ ಈ ಕೂಡಲೇ ನಿಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಕಾವೇರಿ ನದಿಯ ಗೇಟ್ ಅನ್ನು ಬಂದ್ ಮಾಡಿ ರಾಜ್ಯದ ಜನರ ಹಿತ ಕಾಪಾಡುವವರಿಗೆ ಅಧಿಕಾರ ನೀಡಿ ಎಂದು ಆಗ್ರಹಿಸಿದರು.
ಡಿಕೆಶಿ ವಿರುದ್ಧ ವಾಗ್ದಾಳಿ: ಡಿ.ಕೆ.ಶಿವಕುಮಾರ್ ತಾವೂ ಜಲಸಂಪನ್ಮೂಲ ಸಚಿವರು ಎಂಬುದನ್ನು ಮರೆತುಬಿಟ್ಟಿದ್ದಾರೆ. ಬೆಂಗಳೂರು ಅಭಿವೃದ್ಧಿ ಹಾಗೂ ಪಕ್ಷ ಸಂಘಟನೆಯ ಜವಾಬ್ದಾರಿ ತೆಗೆದುಕೊಂಡು ಅವರು ರಾಜಧಾನಿಯಲ್ಲೇ ಕುಳಿತುಬಿಟ್ಟಿದ್ದಾರೆ. ಅವರು ನೀರಾವರಿ ಇಲಾಖೆ ಕುರಿತು ಸ್ವಲ್ಪವಾದರೂ ಕಾಳಜಿ ವಹಿಸಿದ್ದರೆ ಇಂತಹ ಪರಿಸ್ಥಿತಿ ಎದುರಿಸಲು ಪ್ರಮೇಯ ಬರುತ್ತಿರಲಿಲ್ಲ. ಲಕ್ಷಾಂತರ ಜನ ಬೀದಿಗೆ ಬಂದ ಪ್ರತಿಭಟನೆ ನಡೆಸುವ ಅವಶ್ಯಕತೆ ಇರಲಿಲ್ಲ ಎಂದು ವಾಗ್ದಾಳಿ ಮಾಡಿದರು.
ವಿಧಾನಸಭೆ ಚುನಾವಣೆಗೂ ಪೂರ್ವದಲ್ಲಿ ಡಿ.ಕೆ.ಶಿವಕುಮಾರ್ ಮೇಕೆದಾಟು ಯೋಜನೆ ವಿಚಾರವನ್ನಿಟ್ಟುಕೊಂಡು ಪಾದಯಾತ್ರೆ ಮಾಡಿದ್ದರು. ಅಧಿಕಾರಕ್ಕೆ ಬಂದರೆ ಅಲ್ಲಿ ಬ್ಯಾಲೆನ್ಸಿಂಗ್ ರಿಸರ್ವಯರ್ ನಿರ್ಮಿಸುತ್ತೇವೆ. ಆ ಮೂಲಕ ತಮಿಳುನಾಡು ಹಾಗೂ ಕರ್ನಾಟಕದ ಮಧ್ಯೆ ತಲೆದೋರುವ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುತ್ತೇವೆ ಎಂದು ಆಶ್ವಾಸನೆ ನೀಡಿದರು. ಈ ವಿಚಾರವನ್ನಿಟ್ಟುಕೊಂಡು ಕಾವೇರಿ ನೀರಿನಲ್ಲಿ ತೆಪ್ಪದಲ್ಲಿ ಹೋಗಿ ಪ್ರಚಾರ ಪಡೆದುಕೊಂಡರು ಎಂದು ದೂರಿದರು.
ತತ್ವಜ್ಞಾನಿಯಂತೆ ಉತ್ತರಿಸುತ್ತಾರೆ: ಇವರ ಮೇಲೆ ವಿಶ್ವಾಸವಿಟ್ಟ ಜನ ಇವರಿಗೆ ಮತ ನೀಡಿ ಗೆಲ್ಲಿಸಿದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಅವರಲ್ಲಿ ಮೊದಲಿನ ಉತ್ಸಾಹ ಉಳಿದಿಲ್ಲ. ಮಾತಿನ ವೈಖರಿ ಸಂಪೂರ್ಣ ಬದಲಾಗಿದೆ. ಯಾರಾದರೂ ಏನಾದರೂ ಮಾತನಾಡಿದರೆ ಅದಕ್ಕೆ ಉಡಾಫೆಯಾಗಿ ಉತ್ತರಿಸುತ್ತಾರೆ. ಎಲ್ಲ ಗೊತ್ತಿರುವ ತತ್ವಜ್ಞಾನಿಯಂತೆ ಮಾತನಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ಯಾರಂಟಿ ಗುಂಗಿನಲ್ಲಿದ್ದಾರೆ: ಈ ಬಾರಿ ಮಳೆ ಕೈಕೊಟ್ಟಿದ್ದು, ಬರದ ಪರಿಸ್ಥಿತಿ ಮನೆ ಮಾಡಿದೆ. ಬರದಿಂದ ಎಷ್ಟು ಮಂದಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವರೋ ಎಂಬ ಆತಂಕ ಎದುರಾಗಿದೆ. ಆದರೆ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಇಬ್ಬರಿಗೂ ಜನರ ಸಂಕಷ್ಟದ ಅರಿವಿಲ್ಲ. ಇವರು ಬರೀ ಕಾಂಗ್ರೆಸ್‌ನ ಗ್ಯಾರಂಟಿಗಳ ಬಗ್ಗೆ ಹೇಳಿಕೊಂಡು ತಿರುಗುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಗುಂಗಿನಲ್ಲಿ ಇರುವ ಇಬ್ಬರಿಗೂ ಪರಿಸ್ಥಿತಿಯ ಸೂಕ್ಷ್ಮತೆಯೇ ಅರ್ಥವಾಗುತ್ತಿಲ್ಲ ಎಂದು ಕಿಡಿಕಾರಿದರು.
ಸಿದ್ದರಾಮಯ್ಯರಲ್ಲಿ ಸೂಕ್ಷ್ಮತೆ ಉಳಿದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಯಸ್ಸಾಗಿದೆ. ಅವರಲ್ಲಿ ಮೊದಲಿನ ಸೂಕ್ಷ್ಮತೆ ಉಳಿದಿಲ್ಲ. ನೀವು ಡಿ.ಕೆ.ಶಿವಕುಮಾರ್‌ಗೆ ಹೆದರಿಕೊಳ್ಳುತ್ತಿದ್ದೀರಾ, ಅವರು ನಿಮ್ಮನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ನಿಮ್ಮನ್ನು ಮಾತ್ರವಲ್ಲ ನಮ್ಮನ್ನು, ರಾಜ್ಯದ ಜನರನ್ನು ಎಲ್ಲರನ್ನೂ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಆದ್ದರಿಂದ ನೀವಿಬ್ಬರೂ ನಿಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಎಂದು ಎಂಎಲ್‌ಸಿ ಸಿ.ಪಿ.ಯೋಗೇಶ್ವರ್ ಆಗ್ರಹಿಸಿದರು. ನೀವಿಬ್ಬರು ಕಣ್ಣಿದ್ದು ಕುರುಡರಾಗಿ ವರ್ತಿಸುತ್ತಿದ್ದೀರಿ. ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿದ್ದೀರಿ. ನೀವು ನೀರು ಬಿಡದೇ ಸಂಸದರನ್ನು, ಶಾಸಕರನ್ನು ಎಲ್ಲರನ್ನು ಕರೆದಿದ್ದರೆ ಬರಬಹುದಿತ್ತು. ಆದರೆ, ನೀರು ಬಿಟ್ಟ ನಂತರ ಕರೆಯುವುದು ಎಷ್ಟು ಸರಿ. ಈ ಭಾಗದ ಜನರ ನೋವು ನಿಮಗೆ ತಟ್ಟಲಿದ್ದು, ನಿಮಗೆ ತಕ್ಕ ಶಿಕ್ಷೆ ಆಗಲಿದೆ ಎಂದು ಕಿಡಿಕಾರಿದರು.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಿದ್ದರಾಮಯ್ಯಗೆ ಪ್ರಯಾಸ: ಜನಾರ್ದನ ರೆಡ್ಡಿ
ಡಿಕೆಶಿಗೆ ನೀರಾವರಿ ಜ್ಞಾನವಿಲ್ಲ!: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನೀರಾವರಿ ಇಲಾಖೆ ಬಗ್ಗೆ ಯಾವುದೇ ಅರಿವಾಗಲಿ ಜ್ಞಾನವಾಗಲಿ ಇಲ್ಲದಿರುವುದು ನಮ್ಮ ದೌರ್ಭಾಗ್ಯ. ಅದೊಂದು ಸಂಪದ್ಬರಿತ ಇಲಾಖೆ ಎಂಬ ಕಾರಣಕ್ಕೆ ಅವರು ಅದನ್ನು ಪಡೆದುಕೊಂಡಿದ್ದಾರೆ ಹೊರತು ಮತ್ಯಾವ ಕಾರಣಕ್ಕೂ ಅಲ್ಲ. ಈ ಇಲಾಖೆಯ ಮುಖಾಂತರ ಜನರ ಕಣ್ಣೀರು ಒರೆಸಬಹುದು ಎಂಬುದನ್ನು ಅವರು ಮರೆತಿದ್ದಾರೆ ಎಂದು ಯೋಗೇಶ್ವರ್ ಆರೋಪಿಸಿದರು.