ಸಿದ್ದರಾಮಯ್ಯ ವಿರುದ್ಧ ಅಟ್ರಾಸಿಟಿ ಕೇಸ್, ಬಂಧಿಸಿ ನ್ಯಾಯ ಒದಗಿಸುವಂತೆ ಒತ್ತಾಯ

By Suvarna NewsFirst Published Jun 17, 2022, 5:19 PM IST
Highlights

* ಇನ್ನೂ ಹಾರದ ಚಡ್ಡಿ ಸುಟ್ಟ ಕಿಚ್ಚು
* ಸಿದ್ದರಾಮಯ್ಯ ವಿರುದ್ಧ ಅಟ್ರಾಸಿಟಿ ಕೇಸ್
* ಬಂಧಿಸಿ ನ್ಯಾಯ ಒದಗಿಸುವಂತೆ ಬಿಜೆಪಿ ಎಂಎಲ್‌ಸಿ ಒತ್ತಾಯ

ಬೆಂಗಳೂರು, (ಜೂನ್.17): ಚಡ್ಡಿ ಸುಟ್ಟ ಕಿಚ್ಚು ಇನ್ನೂ ಹಾರಿಲ್ಲ. ಇದಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (siddaramaiah)  ವಿರುದ್ಧ  ಅಟ್ರಾಸಿಟಿ ದೂರು ದಾಖಲಾಗಿದ್ದು, ಸೂಕ್ತ ಕ್ರಮಕೈಗೊಳ್ಳುವುಂತೆ ಒತ್ತಾಯಿಸಲಾಗಿದೆ.

ಆಕ್ಷೇಪಾರ್ಹ ಟ್ವೀಟ್ ಆರೋಪದಡಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ದೂರು ದಾಖಲಿಸಿದ್ದಾರೆ.

ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಿವೆನ್ಷನ್ ಆಫ್ ಅಟ್ರಾಸಿಟಿ 1989 ಕಾಯ್ದೆಯಡಿ ದೂರು ದಾಖಲಾಗಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಅಸ್ಪೃಶ್ಯ- ಗುಲಾಮ ಎಂದು ಉಲ್ಲೇಖಿಸುವ ಮೂಲಕ ನನ್ನ ಜಾತಿಗೆ ಅಪಮಾನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ   ಸಿದ್ದರಾಮಯ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಛಲವಾದಿ ನಾರಾಯಣಸ್ವಾಮಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಚಡ್ಡಿ ಹೊತ್ತು ಚಳವಳಿ ನಡೆಸಿದ ಛಲವಾದಿಗೆ ಸಿದ್ದು ಟಾಂಗ್‌, RSSನಲ್ಲಿ ನಿಮ್ಮ ಸ್ಥಾನಮಾನ ಇಷ್ಟಕ್ಕೇ ಸೀಮಿತ!

ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ನಾರಾಯಣಸ್ವಾಮಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡುವ ಭರದಲ್ಲಿ ಸದಾ ಅಸ್ಪೃಶ್ಯ ಅಂತ ನಮ್ಮ ಜಾತಿ ನಿಂದನೆ ಮಾಡಿದ್ದಾರೆ. ನಮ್ಮ ನಡೆ ಕೇವಲ ರಾಜಕೀಯ ಜಿದ್ದಾ ಜಿದ್ದಿ ವಿಚಾರದಲ್ಲಿ ಮಾತ್ರ. ಸರ್ಕಾರ, ಅಭಿವೃದ್ಧಿ ವಿಚಾರದಲ್ಲಿ ಏನು ಬೇಕಾದ್ರೂ ಹೇಳಲಿ. ಜನ ಟ್ವೀಟ್ ಮಾಡಿದಾಗ ಅನೇಕ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಜೂನ್ 7ರಂದು ಸಿದ್ದರಾಮಯ್ಯನವರು, ನಾರಾಯಣಸ್ವಾಮಿ ಅವರೇ ನೀವು ಸದಾ ಅಸ್ಪೃಶ್ಯರು ಅಂತ ಹೇಳಿದ್ದಾರೆ. ನಿಮ್ಮ ಗುಲಾಮ ಮನಸ್ಥಿತಿಗೆ ನನ್ನ ಧಿಕ್ಕಾರವಿರಲಿ ಅಂತ ಹೇಳಿದ್ದಾರೆ. ನನ್ನನ್ನು ನಿಂದಿಸುವ ಭರದಲ್ಲಿ ನನ್ನ ಜಾತಿಯನ್ನು ನಿಂದಿಸಿದ್ದಾರೆ. ಈ ವಿಚಾರದಲ್ಲಿ ಅಟ್ರಾಸಿಟಿ ಪ್ರಿವೆನ್ಷನ್ ಆಕ್ಟ್ ಅಡಿ ದೂರು ನೀಡಿದ್ದೇನೆ ಎಂದು ಮಾಹಿತಿ ನೀಡಿದರು.

ಜಾತಿ ನಿಂದನೆ ಕೇಸ್ ದಾಖಲಿಸಿದ್ದೇನೆ. ಅವರನ್ನು ಅರೆಸ್ಟ್ ಮಾಡಬೇಕಾಗುತ್ತದೆ. ಇದರಲ್ಲಿ ಯಾವುದೇ ತಡ ಮಾಡಿದ್ರೆ ನಾನು ಧರಣಿ ಮಾಡುತ್ತೇನೆ. ಜಾತಿಗೆ ಅಪಮಾನ ಮಾಡುವ ಕೆಲಸ ಮಾಡಿದ್ದಾರೆ ಎಂದು ನಾರಾಯಣಸ್ವಾಮಿ ಸಿದ್ದರಾಮಯ್ಯರ ವಿರುದ್ಧ ದೂರು ದಾಖಲಿಸಿರುವುದಾಗಿ ತಿಳಿಸಿದರು.

ಸಿದ್ದರಾಮಯ್ಯ ವಿರುದ್ಧ ಜಾತಿ ನಿಂದನೆ, ದಲಿತ ವಿರೋಧಿ ಕೇಸ್ ದಾಖಲಿಸಬೇಕು. ದಲಿತ ಮಹಿಳೆ ಮೋಟಮ್ಮ ಅವರು ಅತ್ಮಕಥೆ ಬರೆದಿದ್ದಾರೆ. ನನ್ನ ಬೆಳವಣಿಗೆ ಸಹಿಸದೇ ನನ್ನ ಕಥೆಯನ್ನೇ ಮುಗಿಸಿದ್ದಾರೆ ಅಂತ ಬರೆದಿದ್ದಾರೆ. ರಾಜಕಾರಣ ಬಂದಾಗ ನಮ್ಮ ಪಕ್ಷದ ಸಿದ್ಧಾಂತ ಬೇರೆ, ಕಾಂಗ್ರೆಸ್ ಬೇರೆ. ಕಾಂಗ್ರೆಸ್ ಮನಸ್ಥಿತಿ ದಲಿತ ವಿರೋಧಿ ಮನಸ್ಥಿತಿ ಇದೆ. ಸರ್ಕಾರ ತೀಕ್ಷ್ಣ ಕ್ರಮ ಕೈಗೊಳ್ಳಬೇಕು. ಯಾವುದೇ ತಡಮಾಡದೇ ಸಿದ್ದರಾಮಯ್ಯ ಬಂಧಿಸಿ ನನಗೆ ನ್ಯಾಯ ಕೊಡಿಸಬೇಕು. ಇಲ್ಲದಿದ್ದರೆ ಅಟ್ರಾಸಿಟಿ ಕೇಸಿಗೆ ಅಪಮಾನ ಮಾಡಿದಂತಾಗಲಿದೆ ಎಂದು ಹೇಳಿದರು.

click me!