ಬಿಎಸ್‌ವೈ ವಿರುದ್ಧವೇ ಬಿಜೆಪಿ ಶಾಸಕರು ಗರಂ

By Kannadaprabha NewsFirst Published Mar 13, 2020, 9:46 AM IST
Highlights

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧವೇ ಬಿಜೆಪಿ ಶಾಸಕರು  ಅಸಮಾಧಾನ ಹೊರಹಾಕಿರುವ ಘಟನೆ ನಡೆದಿದೆ. 

 ಬೆಂಗಳೂರು [ಮಾ.13]:   ಆಡಳಿತಾರೂಢ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕಾರ್ಯವೈಖರಿ ಮತ್ತು ಕುಟುಂಬದ ಸದಸ್ಯರ ಹಸ್ತಕ್ಷೇಪದ ಬಗ್ಗೆ ಶಾಸಕರು ನೇರವಾಗಿಯೇ ಅಸಮಾಧಾನ ಹೊರಹಾಕಿದ ಪ್ರಸಂಗ ನಡೆದಿದೆ.

ಒಂದು ಹಂತದಲ್ಲಿ ಶಾಸಕರ ವಾಗ್ದಾಳಿಗೆ ಕೆಂಡಾಮಂಡಲವಾದ ಯಡಿಯೂರಪ್ಪ ಅವರು, ಬೇಕಾದರೆ ಯಾವೆಲ್ಲ ಶಾಸಕರಿಗೆ ನಾನು ಏನೇನು ಕೆಲಸ ಮಾಡಿಕೊಟ್ಟಿದ್ದೇನೆ ಎಂಬುದರ ಬಗ್ಗೆ ಮುಂದಿನ ಸಭೆಯಲ್ಲಿ ಪಟ್ಟಿಯನ್ನೇ ಇಡುತ್ತೇನೆ ಎಂದು ಅಬ್ಬರಿಸಿದ ಘಟನೆಯೂ ನಡೆದಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.

ಪಕ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯತ ಸಮುದಾಯದ ಶಾಸಕರೂ ಸೇರಿದಂತೆ ಹಲವು ಶಾಸಕರ ಬಿರುಸಿನ ಆರೋಪಗಳನ್ನು ಹೊತ್ತ ವಾಗ್ಬಾಣಗಳು ಹೆಚ್ಚುತ್ತಿರುವಂತೆ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಪಕ್ಷದ ಕೆಲವು ಹಿರಿಯ ಸಚಿವರು ಮುಂದೆ ಮತ್ತೆ ಸಭೆ ಸೇರೋಣ ಎಂಬ ಸಮಜಾಯಿಷಿ ನೀಡುವ ಮೂಲಕ ತರಾತುರಿಯಲ್ಲಿ ಶಾಸಕಾಂಗ ಸಭೆಯನ್ನು ಮುಗಿಸುವಂತೆ ನೋಡಿಕೊಂಡರು ಎನ್ನಲಾಗಿದೆ.

ವಿಧಾನಮಂಡಲದ ಬಜೆಟ್‌ ಅಧಿವೇಶನದ ಹಿನ್ನೆಲೆಯಲ್ಲಿ ಶಾಸಕರೆಲ್ಲರೂ ನಗರದಲ್ಲೇ ಇದ್ದುದರಿಂದ ಭೋಜನ ಕೂಟದೊಂದಿಗೆ ಶಾಸಕಾಂಗ ಸಭೆ ನಡೆಸುವ ಸಲುವಾಗಿ ಸಂಜೆ ಶಾಸಕಾಂಗ ಸಭೆಯನ್ನು ಕರೆಯಲಾಗಿತ್ತು. ಇದಕ್ಕೆ ಪೂರ್ವ ತಯಾರಿ ಎಂಬಂತೆ ಶಾಸಕರು ಬೆಳಗ್ಗೆಯಿಂದಲೇ ವಿಧಾನಸಭೆಯ ಮೊಗಸಾಲೆಯಲ್ಲಿ ಮತ್ತು ಶಾಸಕರ ಭವನದಲ್ಲಿ ಗುಂಪು ಗುಂಪಾಗಿ ಸೇರಿ ಚರ್ಚೆಯನ್ನೂ ನಡೆಸಿದ್ದರು.

ಅನಾಮಧೇಯ ಪತ್ರದ ಅಂಶಗಳ ಬಗ್ಗೆ ಪ್ರಸ್ತಾಪ:

ಸಭೆಯ ಆರಂಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಯಡಿಯೂರಪ್ಪ ಮತ್ತವರ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಎರಡನೇಯ ಅನಾಮಧೇಯ ಪತ್ರದ ಬಗ್ಗೆ ಪ್ರಸ್ತಾಪಿಸಿದರು. ಈ ಪತ್ರ ಬರೆದವರ ಬಗ್ಗೆ ತನಿಖೆ ನಡೆಸಬೇಕು. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆಹಚ್ಚಬೇಕು ಎಂಬುದಾಗಿ ಒತ್ತಾಯಿಸಿದರು.

ಎಸ್.ಎಂ. ಕೃಷ್ಣ ರೀತಿಯಲ್ಲಿ ಡಿ.ಕೆ.ಶಿವಕುಮಾರ್ ಮಾಸ್ಟರ್ ಪ್ಲಾನ್ : ಮುಂದಿನ ಯೋಜನೆಗಳೇನು..?...

ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಹಲವು ಶಾಸಕರು, ಅನಾಮಧೇಯ ಪತ್ರ ಯಾರೇ ಬರೆದಿರಲಿ ಅಥವಾ ಬರೆಸಿರಲಿ. ಆದರೆ, ಅದರಲ್ಲಿ ಬರೆದಿರುವ ಅಂಶಗಳ ಸರಿಯಾಗಿಯೇ ಇವೆ. ಅವುಗಳ ಬಗ್ಗೆ ಚರ್ಚೆ ನಡೆಯಲಿ ಎಂದು ಒತ್ತಾಯಿಸಿ ಮಾತಿಗಾರಂಭಿಸಿದರು ಎಂದು ಮೂಲಗಳು ತಿಳಿಸಿವೆ.

ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ, ರಾಜಕುಮಾರ್‌ ತೇಲ್ಕೂರ್‌, ಸಿದ್ದು ಸವದಿ, ಗೂಳಿಹಟ್ಟಿಶೇಖರ್‌, ರಾಜುಗೌಡ, ಪೂರ್ಣಿಮಾ ಸೇರಿದಂತೆ ಹಲವರು ಬಹಿರಂಗವಾಗಿಯೇ ಮುಖ್ಯಮಂತ್ರಿಗಳ ಕಾರ್ಯವೈಖರಿ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ ಆಡಳಿತದ ವಿರುದ್ಧ ಅಸಮಾಧಾನ ಹೊರಹಾಕಿದರು.

ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಕ್ಷೇತ್ರಗಳನ್ನು ನಿರ್ಲಕ್ಷಿಸಲಾಗಿತ್ತು. ಈಗಲೂ ಅಂಥ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ನಮ್ಮ ಪಕ್ಷದ ಸರ್ಕಾರ ಆಡಳಿತ ನಡೆಸುತ್ತಿದ್ದರೂ ನಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಅಧಿಕಾರಿಗಳು ಶಾಸಕರ ಮಾತನ್ನು ಕೇಳುತ್ತಿಲ್ಲ. ಬಜೆಟ್‌ನಲ್ಲಿ ಹೆಚ್ಚಿನ ಘೋಷಣೆಗಳನ್ನು ನಿರೀಕ್ಷಿಸಿದ್ದೆವು. ಆದರೆ, ಬಜೆಟ್‌ ಮೊದಲು ನೀಡಿದ್ದ ಭರವಸೆಗಳ ಪೈಕಿ ಬಹುತೇಕವುಗಳನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿಲ್ಲ. ಹೀಗಾದರೆ ಜನರ ಮುಂದೆ ಹೇಗೆ ಮುಖ ಹೊತ್ತೊಯ್ಯುವುದು ಎಂದು ಖಾರವಾಗಿ ಪ್ರಶ್ನಿಸಿದರು.

ಇನ್ನು ಕೆಲವು ಶಾಸಕರು ಯಡಿಯೂರಪ್ಪ ಅವರ ಇತ್ತೀಚಿನ ನಡವಳಿಕೆ ಬಗ್ಗೆಯೂ ಪ್ರಸ್ತಾಪಿಸಿ ಬೇಸರ ಹೊರಹಾಕಿದರು. ‘ಹುಲಿಯ ಬಳಿಯಾದರೂ ನಾವು ಧೈರ್ಯವಾಗಿ ಹೋಗಿ ಬರಬಹುದು. ಆದರೆ, ನಿಮ್ಮ ಬಳಿ ಬರಲು ನಮಗೆ ಧೈರ್ಯ ಸಾಲುತ್ತಿಲ್ಲ. ನೀವು ಏಕಾಏಕಿ ಜನರಿದ್ದಾಗಲೇ ನಮ್ಮ ಮೇಲೆ ಸಿಡುಕುತ್ತೀರಿ. ಸ್ವಲ್ಪ ನಗುತ್ತಲೇ ಮಾತನಾಡಬಹುದು. ಸಿಟ್ಟಿನಿಂದ ಬೈದರೆ ನಮ್ಮ ಜೊತೆ ಬಂದ ಕ್ಷೇತ್ರದ ಜನರ ಮುಂದೆ ನಮ್ಮ ಮರ್ಯಾದೆ ಹೇಗೆ ಉಳಿಯುತ್ತದೆ’ ಎಂದು ಕಡ್ಡಿ ಮುರಿದಂತೆ ಹೇಳಿದರು ಎನ್ನಲಾಗಿದೆ.

ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ನಾವು ತಂದ ಪತ್ರಗಳ ಮೇಲೆ ನೀವು ‘ಕ್ರಮ ಕೈಗೊಳ್ಳಿ’ ಎಂದು ಬರೆದರೂ ನಂತರ ಆ ಪತ್ರಗಳು ಮುಂದೆ ಸಾಗುವುದಿಲ್ಲ. ನಿಮ್ಮ ಕುಟುಂಬದ ಸದಸ್ಯರ ಬಳಿ ಹೋಗಿ ಕೆಲಸ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ನೀವು ಓಕೆ ಎಂದ ಮೇಲೂ ಬೇರೆಯವರು ಅಡ್ಡಿಪಡಿಸುತ್ತಾರೆ ಎಂದರೆ ಏನರ್ಥ ಎಂದು ಶಾಸಕರೊಬ್ಬರು ತೀಕ್ಷ$್ಣವಾಗಿ ಕೇಳಿದರು ಎಂದು ತಿಳಿದು ಬಂದಿದೆ.

ನಾನು ಮಾಡಿಕೊಟ್ಟಕೆಲಸದ ಪಟ್ಟಿಕೊಡುವೆ

ಒಂದು ಹಂತದಲ್ಲಿ ಶಾಸಕ ಸಿದ್ದು ಸವದಿ ಅವರು ಬೇಸರದ ಮಾತುಗಳನ್ನು ಆಡಿದ್ದರಿಂದ ಕೋಪಗೊಂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ನಿಮ್ಮ ಕ್ಷೇತ್ರಕ್ಕೆ ಎಷ್ಟೆಲ್ಲ ಕೆಲಸ ಮಾಡಿಕೊಟ್ಟಿದ್ದೇನೆ. ಆದರೂ ನನ್ನ ವಿರುದ್ಧ ಮಾತನಾಡುತ್ತಿದ್ದೀರಲ್ಲ ಎಂದು ಏರಿದ ಧ್ವನಿಯಲ್ಲಿ ಪ್ರಸ್ತಾಪಿಸಿದರು.

ನಂತರ ಮುಂದುವರೆದು, ಬೇಕಾದರೆ ಮುಂದಿನ ಸಭೆಯಲ್ಲಿ ಯಾವ ಯಾವ ಶಾಸಕರ ಕೆಲಸಗಳನ್ನು ನಾನು ಮಾಡಿಕೊಟ್ಟಿದ್ದೇನೆ ಎಂಬುದರ ಪಟ್ಟಿಯನ್ನೇ ಮುಂದಿಡುವೆ ಎಂದು ಯಡಿಯೂರಪ್ಪ ಅವರು ಸವಾಲಿನ ರೂಪದಲ್ಲಿ ಹೇಳಿದರು ಎನ್ನಲಾಗಿದೆ.

ಜಿಲ್ಲಾವಾರು ಶಾಸಕರ ಸಭೆ ಕರೆಯುವೆ: ಬಿಎಸ್‌ವೈ

ವಿವಿಧ ಕ್ಷೇತ್ರಗಳ ಸಮಸ್ಯೆಗಳನ್ನು ಆಲಿಸುವ ಸಂಬಂಧ ಶೀಘ್ರದಲ್ಲಿಯೇ ಶಾಸಕರ ಜಿಲ್ಲಾವಾರು ಸಭೆ ಕರೆಯುವಂತೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

ಶಾಸಕಾಂಗ ಸಭೆಯ ಕೊನೆಯ ಭಾಗದಲ್ಲಿ ಮಾತನಾಡಿದ ಅವರು, ಜಿಲ್ಲಾವಾರು ಶಾಸಕರ ಸಭೆಯಲ್ಲಿ ನಿಮ್ಮ ನಿಮ್ಮ ಕ್ಷೇತ್ರಗಳ ಸಮಸ್ಯೆಗಳ ಕುರಿತು ಎಲ್ಲವನ್ನೂ ಪ್ರಸ್ತಾಪಿಸಿ. ನಾನು ಅದನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವ ನೀಡಿದರು ಎಂದು ಮೂಲಗಳು ತಿಳಿಸಿವೆ.

click me!