ಕೊರೋನಾ ಸೋಂಕಿನಿಂದ ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಇದೀಗ ಗುಣಮುಖರಾಗಿದ್ದು, ಕ್ವಾರಂಟೈನ್‌ಲ್ಲಿ ಕಲಿತ ಪಾಠವನ್ನು ಜನರ ಮುಂದಿಟ್ಟಿದ್ದಾರೆ.
ಬೆಂಗಳೂರು, (ಅ.16): ದೇಶದಲ್ಲಿ, ರಾಜ್ಯದಲ್ಲಿ ಕೊರೋನಾ ದಿನೇ ದಿನೇ ಹೆಚ್ಚಳ ಆಗ್ತಿದೆ. ನಾನು 9 ಬಾರಿ ಪರೀಕ್ಷೆ ಮಾಡಿಸಿಕೊಂಡಾಗ ನೆಗೆಟಿವ್ ಬಂದಿತ್ತು. ಆದರೆ 10ನೇ ಬಾರಿಯ ಟೆಸ್ಟ್ ನಲ್ಲಿ ಕೊರೋನಾ ಪಾಸಿಟಿವ್ ಬಂತು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಧಿವೇಶನದಲ್ಲಿ ಪಾಲ್ಗೊಂಡಾಗ ನನಗೆ ಪಾಸಿಟೀವ್ ಬಂದಿದೆ ಅನ್ನಿಸುತ್ತಿದೆ. ನನ್ನ ಕ್ಷೇತ್ರದಲ್ಲಿ ಇದ್ದಾಗ ನನಗೆ ಕೊರೋನಾ ಬಂದಿರಲಿಲ್ಲ. ಕೊರೋನಾ ನನಗೆ ಪಾಠ ಕಲಿಸಿತು. ಸರಿಯಾಗಿ ಊಟ, ನಿದ್ರೆ ಮಾಡ್ತಿರಲಿಲ್ಲ. ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆದೆ. ನಾನು ಮನೆಯವರಿಂದ ದೂರ ಇದ್ದೆ. ಸಂಪೂರ್ಣವಾಗಿ ಪ್ರತ್ಯೇಕವಾಗಿ ಇದ್ದೆ. ನನ್ನ ರೂಂ ನಾನೇ ಕ್ಲೀನ್ ಮಾಡಿಕೊಳ್ಳುತ್ತಿದ್ದೆ. ಬಟ್ಟೆ ನಾನೇ ತೊಳೆದುಕೊಳ್ಳುತ್ತಿದ್ದೆ. ತಟ್ಟೆ, ಲೋಟ ಇಟ್ಟುಕೊಂಡು ಜೀವನ ಮಾಡಿದ್ದೇನೆ. ಇನ್ನೂ ಆಯಾಸ ಇದೆ. ಆದರೂ ಜನರು ಜಾಗೃತವಾಗಿ ಇರಲಿ ಅಂತ ನಾನು ಸುದ್ದಿಗೋಷ್ಟಿ ಮಾಡ್ತಿದ್ದೇನೆ ಎಂದು ತಿಳಿಸಿದರು.
10ನೇ ಬಾರಿ ಪರೀಕ್ಷೆಯಲ್ಲಿ ರೇಣುಕಾಚಾರ್ಯಗೆ ಕೊರೋನಾ ಶಾಕ್, ಆಸ್ಪತ್ರೆಗೆ ದಾಖಲು
ಪ್ರಧಾನಿಗಳು, ಸಿಎಂ ಯಡಿಯೂರಪ್ಪರವರು ಜನರಿಗೆ ಮಾರ್ಗಸೂಚಿ ಫಾಲೋ ಮಾಡಿ ಅಂತ ಹೇಳಿದರೂ ಕೇಳ್ತಿಲ್ಲ. ಜನರ ನಿರ್ಲಕ್ಷ್ಯದಿಂದ ಪಾಸಿಟಿವ್ ಕೇಸ್ ಹೆಚ್ಚಳ ಆಗ್ತಿದೆ. ಇದಕ್ಕೆ ಸರ್ಕಾರ ಕಾರಣ ಅಲ್ಲ. ಜನ ದಂಡ ಹಾಕ್ತಾರೆ ಬಿಡಿ ಅಂತ ಸುಮ್ಮನೆ ಆಗ್ತಾರೆ. ನಾವು ಆತ್ಮಾವಲೋಕ ಮಾಡಿಕೊಳ್ಳಬೇಕು ಎಂದರು.
ನನ್ನ ಕ್ಷೇತ್ರದಲ್ಲಿ ಸಂಪೂರ್ಣ ಪ್ರವಾಸ ಮಾಡಿ ಜಾಗೃತಿ, ಔಷಧಿ, ಮಾಸ್ಕ್, ದಿನಸಿ ನೀಡಿದ್ದೇವೆ. ಮಾಸ್ಕ್ ಕೊಟ್ಟ ಎರಡು ನಿಮಿಷ ಹಾಕ್ತಾರೆ ಅಮೇಲೆ ಬಿಸಾಕ್ತಾರೆ. ಪಿಯುಸಿ, ಎಸ್‍ಎಸ್‍ಎಸ್‍ಸಿ ಪರೀಕ್ಷಾ ಸಮಯದಲ್ಲಿ ಮಾಸ್ಕ್ ಕೊಟ್ವಿ. ಆದರೆ ಮಕ್ಕಳು ಸರಿಯಾಗಿ ಮಾಸ್ಕ್ ಹಾಕಿಲ್ಲ. ಬದುಕಿದ್ರೆ ಏನು ಬೇಕಾದ್ರು ಮಾಡಬಹುದು. ಎಲ್ಲರೂ ಮಾಸ್ಕ್ ಹಾಕಿ ಸರ್ಕಾರದ ನಿಯಮ ಫಾಲೋ ಮಾಡಿ ಎಂದು ಜನರಲ್ಲಿ ರೇಣುಕಾಚಾರ್ಯ ಮನವಿ ಮಾಡಿಕೊಂಡಿದ್ದಾರೆ.