* ಮತ್ತೆ ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ
* ಬದ್ಧವೈರಿಗಳಂತಾಡುತ್ತಿದ್ದ ರೇಣುಕಾಚಾರ್ಯ- ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ
* ಆಪ್ತ ಸಮಾಲೋಚನೆ ನಡೆಸಿದ ಉಭಯ ನಾಯಕರು
ಬೆಂಗಳೂರು, (ಜ.20): ಕೊರೋನಾ ಭೀತಿ ಮಧ್ಯೆ ಕರ್ನಾಟಕ ಬಿಜೆಪಿಯಲ್ಲಿ (Karnataka BJP) ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇದಕ್ಕೆ ಪೂಕರವೆಂಬಂತೆ ಬದ್ಧವೈರಿಗಳಂತಾಡುತ್ತಿದ್ದ ಎಂ.ಪಿ ರೇಣುಕಾಚಾರ್ಯ (MP Renukacharya) ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ಮಾಡಿದ್ದು, ಆಪ್ತ ಸಮಾಲೋಚನೆ ನಡೆಸಿದರು.
ರೇಣುಕಾಚಾರ್ಯ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ (Basangowda Patil yatnal) ಇಂದು (ಗುರುವಾರ) ವಿಕಾಸಸೌಧದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿರುವುದು ಹೊಸ ಲೆಕ್ಕಾಚಾರಕ್ಕೆ ಕಾರಣವಾಗಿದೆ.
undefined
'ಯತ್ನಾಳ್ ತಿರುಕನ ಕನಸು ಕಾಣಬೇಡಿ, ಸವಾಲ್ ಹಾಕ್ತೇನೆ, ನೀವು ಸಿಎಂ ಆಗೋದಿಲ್ಲ'
ಹೌದು...ಸಚಿವ ಸಂಪುಟ ಪುನಾರಚನೆ ಬಗ್ಗೆ ಬಿಜೆಪಿಯಲ್ಲಿ ಚರ್ಚೆಗಳು ಜೋರಾಗಿವೆ. ಈ ಹಿನ್ನೆಲೆಯಲ್ಲಿ ಈ ಉಭಯ ನಾಯಕರು ಭೇಟಿಯಾಗಿ ಚರ್ಚೆ ಮಾಡಿದ್ದಾರೆ. ಅಲ್ಲದೇ ಈ ಬಾರಿ ಸಂಪುಟ ಸೇರಲೇಬೇಕೆಂದು ಕಸರತ್ತು ನಡೆಸುತ್ತಿದ್ದಾರೆ.
6-7 ತಿಂಗಳ ಹಿಂದೆ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು. ಅವರು ಕಾಂಗ್ರೆಸ್ ಏಜೆಂಟ್ ಅಂತೆಲ್ಲ ರೇಣುಕಾಚಾರ್ಯ ಮಾಧ್ಯಮಗಳ ಮುಂದೆ ಕೂಗಾಡಿದ್ದರು.
ಭೇಟಿಯ ಬಳಿಕ ರೇಣುಕಾಚಾರ್ಯ ಪ್ರತಿಕ್ರಿಯೆ
ಭೇಟಿಯ ಬಳಿಕ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಯತ್ನಾಳ್ ಅತ್ಯಂತ ಅನುಭವಿ ರಾಜಕಾರಣಿಗಳು, ಕೇಂದ್ರ ಸಚಿವರಾಗಿದ್ದರು, ಹಿರಿಯರು. ನಮ್ಮದು ಆಕಸ್ಮಿಕ ಸೌಜನ್ಯದ ಭೇಟಿ. ಮುಂದೆ ಬಿಜೆಪಿ ಅಧಿಕಾರಕ್ಕೆ ಬರಬೇಕು.ಪಾದಯಾತ್ರೆಯ ಮೂಲಕ ಅಧಿಕಾರಕ್ಕೆ ಬಂದೇವು ಅನ್ನುವ ಹಾಗೆ ಡಿ ಕೆ ಶಿವಕುಮಾರ್ ಇದ್ದಾರೆ. ಹೀಗಾಗಿ ಅವರ ವೇಗ ತಡೆಯಲು ಚರ್ಚೆ ನಡೆಸಿದೆವು ಎಂದರು.
ಕಾಲ ಬಂದರೆ ಹೈಕಮಾಂಡ್ ನಾಯಕರನ್ನ ಭೇಟಿ ಮಾಡುತ್ತೇವೆ. ಮಾರ್ಚ್ ಆದ ಮೇಲೆ ಮಂತ್ರಿಗಿರಿ ಕೊಟ್ಟರೆ ಅಭಿವೃದ್ಧಿ ಆಗುತ್ತದೆ. ಯತ್ನಾಳ್ ಹಿರಿಯರಿದ್ದಾರೆ, ಅವರು ಮಂತ್ರಿಯಾಗಲಿ ಅಂತ ಶುಭಕೋರುತ್ತೇನೆ ಎಂದು ಹೇಳಿದರು.
ಸಂಪುಟ ಪುನರ್ ರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವ ಸಚಿವರ ವಿರುದ್ದವೂ ಆಕ್ರೋಶ ಇಲ್ಲ. ಸಂಘಟನೆ ಹಾಗೂ ಸರ್ಕಾರಕ್ಕೆ ಯಾರು ಒಳ್ಳೆಯ ಮಾಡಿದ್ದಾರೋ ಅವರನ್ನ ಮುಂದುವರೆಸುವುದು ಒಳ್ಳೆಯದು.ಅಧಿಕಾರಕೊಸ್ಕರ ಇದ್ದವರು, ಸ್ವಾರ್ಥಕೊಸ್ಕರ ಇದ್ದವರನ್ನ ಕೈಬಿಡಬೇಕು. ರಾಷ್ಟ್ರೀಯ ನಾಯಕರನ್ನ ಭೇಟಿ ಮಾಡುತ್ತೇವೆ, ಸಿಎಂ ಜೊತೆಗೆ ಈ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದರು.
ಎಲ್ಲಾ ಶಾಸಕರು ಮಾತನಾಡುವುದಕ್ಕೆ ಆಗುತ್ತಿಲ್ಲ.ಬಹಳಷ್ಟು ಶಾಸಕರು ನಮಗೆ ಹೇಳಿದ್ದಾರೆ, ಹೀಗಾಗಿ ನಾವಿಬ್ಬರು ಸಚಿವ ಸಂಪುಟದ ಬಗ್ಗೆ ಮಾತನಾಡಿದ್ದೇವೆ. ಬಿಜೆಪಿಯಲ್ಲಿ ಸಹಿ ತೆಗೆದುಕೊಳ್ಳುವ ಸಂಸ್ಕೃತಿ ಇಲ್ಲ ಎಂದರು.
ಈ ಹಿಂದೆ ಯತ್ನಾಳ್ ವಿರುದ್ಧ ಗುಡುಗಿದ್ದ ರೇಣುಕಾಚಾರ್ಯ
ಪಕ್ಷ ಹಾಗೂ ಮುಖ್ಯಮಂತ್ರಿಗಳಿಗೆ ಮುಜುಗರ ತರುವ ರೀತಿಯಲ್ಲಿ ಹೇಳಿಕೆ ನೀಡುತ್ತಿರುವ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಕ್ಷದ ರಾಜ್ಯಾಧ್ಯಕ್ಷರಿಗೆ ದೂರು ನೀಡುವುದಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದ್ದರು.
ಶಿಸ್ತಿನ ಪಕ್ಷವಾಗಿರುವ ಬಿಜೆಪಿ ಯಾರೂ ಕೂಡಾ ಬಹಿರಂಗವಾಗಿ ಪಕ್ಷ ಅಥವಾ ನಾಯಕರ ವಿರುದ್ಧ ಹೇಳಿಕೆಯನ್ನು ನೀಡುವುದನ್ನು ಸಹಿಸುವುದಿಲ್ಲ. ಅದು ಬಸನಗೌಡ ಪಾಟೀಲ್ ಯತ್ನಾಳ ಇರಬಹುದು ಅಥವಾ ಬೇರೆ ಯಾರೇ ಇರಬಹುದು. ಎಲ್ಲರೂ ಶಿಸ್ತಿನ ಚೌಕಟ್ಟಿನಲ್ಲಿ ಇರಬೇಕಾಗುತ್ತದೆ. ಯತ್ನಾಳ ಅವರು ತಮ್ಮ ಹಿರಿತನಕ್ಕೆ ತಕ್ಕಂತೆ ವರ್ತಿಸಬೇಕು. ಬಾಯಿ ಚಪಲಕ್ಕಾಗಿ ಮಾತನಾಡಬಾರದು. ಇಲ್ಲದಿದ್ದರೆ ದುರಂತ ನಾಯಕರಾಗಬೇಕಾಗುತ್ತದೆ ಎಂದು ತೀಕ್ಷ್ಣವಾಗಿ ಹೇಳಿದ್ದರು.
ಪಕ್ಷದ ಯಾವುದೇ ಶಾಸಕರಲ್ಲಿ ಭಿನ್ನಾಭಿಪ್ರಾಯ ಇದ್ದರೆ ಸೂಕ್ತ ವೇದಿಕೆಯಲ್ಲಿ ಚರ್ಚಿಸಬೇಕು. ಕ್ಷೇತ್ರದ ಸಮಸ್ಯೆ ಇದ್ದರೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರಸ್ತಾಪಿಸಬೇಕು. ಅಲ್ಲಿಯೂ ಸಮಸ್ಯೆ ಬಗೆಹರಿಯದಿದ್ದರೆ ಪಕ್ಷದ ಅಧ್ಯಕ್ಷರ ಜೊತೆ ಮಾತನಾಡಬೇಕು. ಅದನ್ನು ಬಿಟ್ಟು ಹಾದಿ ಬೀದಿಯಲ್ಲಿ ಮಾತನಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದಿದ್ದರು.