* ಬಿಜೆಪಿ ತೊರೆಯುವ ಸುದ್ದಿ ಸ್ಪಷ್ಟನೆ ಕೊಟ್ಟ ಎಂ.ಪಿ. ಕುಮಾರಸ್ವಾಮಿ
* ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿದ್ದ ಕುಮಾರಸ್ವಾಮಿ
* ಇದೀಗ ಎಲ್ಲಾ ಗೊಂದಲಗಳಿಗೆ ತೆರೆ
ಚಿಕ್ಕಮಗಳೂರು, (ಸೆ.14): ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಬಿಜೆಪಿ ತೊರೆಯುತ್ತಾರೆ ಎನ್ನುವ ಸುದ್ದಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ಅವರು ಬಿಜೆಪಿ ತೊರೆಯುತ್ತಾರೆ ಎಂದು ಚರ್ಚೆ ಶುರುವಾಗಿತ್ತು.
ಸಿದ್ದರಾಮಯ್ಯ ಭೇಟಿಗೆ ಸ್ಪಷ್ಟನೆ ಕೊಟ್ಟ ಬಿಜೆಪಿ ಶಾಸಕ
ಇದೀಗ ಅದಕ್ಕೆ ಸ್ಪಷ್ಟನೆ ನೀಡಿರುವ ಎಂ.ಪಿ. ಕುಮಾರಸ್ವಾಮಿ, ಬಿಜೆಪಿ ನನಗೆ ತಾಯಿ ಇದ್ದಂತೆ. ಮಗು ಹೇಗೆ ತಾಯಿಯನ್ನು ಬಿಟ್ಟು ಇರಲಾರದೋ ಹಾಗೇ ನಾನೂ ಬಿಜೆಪಿ ಬಿಟ್ಟು ಇರಲಾರೆ. ನಾನು ಪಕ್ಷ ಬಿಟ್ಟು ಕಾಂಗ್ರೆಸ್ ಸೇರುತ್ತೇನೆ ಎಂಬುದೆಲ್ಲ ಬರೀ ವದಂತಿ ಎಂದು ಹೇಳುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದರು.
ಸೂಕ್ತ ಸ್ಥಾನಮಾನ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದೇನೆಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಬಿಜೆಪಿ ಎನ್ನುವುದು ನನ್ನ ಮಾತೃ ಸಮಾನ. ನಾನು ಬಿಜೆಪಿ ಬಿಟ್ಟು ಇರಲಾರೆ ಎಂದರು.
ಪಕ್ಷ ಹಾಗೂ ಸಂಘಟನೆಯ ನಡುವೆ ಇರುವುದು ಭಾವನಾತ್ಮಕ ಸಂಬಂಧವೇ ಹೊರತು ತೋರಿಕೆಯ ಪ್ರೀತಿಯಲ್ಲ. ಯಾರೋ ಊಹೆ ಮಾಡಿದ ಮಾತ್ರಕ್ಕೆ ಸುಳ್ಳು ಸತ್ಯವಾಗಲು ಸಾಧ್ಯವಿಲ್ಲ. ಸಹಜವಾಗಿ ಎಲ್ಲರಂತೆ ನನಗೂ ಸಚಿವನಾಗುವ ಆಸೆಯಿತ್ತು. ಆದರೆ ಅದು ಕೈಗೂಡಲಿಲ್ಲ. ಇಷ್ಟಕ್ಕೆ ಪಕ್ಷ ಬಿಡಲಾಗುತ್ತದೆಯೇ? ಪಕ್ಷದಲ್ಲಿ ನನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬುದು ಕೂಡ ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದರು.