* ಸಿದ್ದರಾಮಯ್ಯ ಭೇಟಿಗೆ ಸ್ಪಷ್ಟನೆ ಕೊಟ್ಟ ಬಿಜೆಪಿ ಶಾಸಕ
* ಸಿದ್ದರಾಮಯ್ಯನವರನ್ನ ಭೇಟಿಯಾಗಿದ್ದ ಬಿಜೆಪಿ ಶಾಸಕ ಕುಮಾರಸ್ವಾಮಿ
* ಸರ್ಕಾರದ ವಿರುದ್ಧ ಧರಣಿ ಬಳಿಕ ಸಿದ್ದರಾಮಯ್ಯ ಭೇಟಿ ಮಾಡಿದ ಕುಮಾರಸ್ವಾಮಿ
ಬೆಂಗಳೂರು, (ಆ.13): ಚಿಕ್ಕಮಗಳೂರು ಜಿಲ್ಲೆಯ ಮೂಡಿಗೇರೆ ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯನವರ ಭೇಟಿ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಇಂದು (ಆ.13) ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ಹುಟ್ಟುಹಬ್ಬವಿತ್ತು. ಪ್ರತಿವರ್ಷ ನಾನು ಅವರಿಗೆ ಶುಭಕೋರಲು ಹೋಗುತ್ತೇನೆ. ಸಿದ್ದರಾಮಯ್ಯ ಅಂದರೆ ನನಗೆ ತುಂಬ ಇಷ್ಟ. ಅಹಿಂದ ನಾಯಕ ಅಂತ ಸಿದ್ದರಾಮಯ್ಯ ಒಬ್ಬರೇ ಇದ್ದಾರೆ. ಅವರನ್ನು ಗೌರವಿಸಬೇಕು ಅದಕ್ಕಾಗಿ ನಾನು ಹೋಗಿದ್ದೆ ಎಂದು ಸ್ಪಷ್ಟಪಡಿಸಿದರು.
ನನ್ನ ತೀರ್ಮಾನ ನಾನು ಮಾಡ್ತೇನೆ: ತಮ್ಮ ನಾಯಕರಿಗೆ ಬಿಜೆಪಿ ಶಾಸಕ ಖಡಕ್ ಎಚ್ಚರಿಕೆ
ನಾನು ಕ್ಷೇತ್ರದ ಅನುದಾನಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ಮುಖ್ಯಮಂತ್ರಿಗಳು ಅನುದಾನ ಕೊಡುತ್ತೇನೆಂದು ಹೇಳಿದ್ದಾರೆ. ಅನುದಾನ ಕೊಡಲಿಲ್ಲ ಅಂದರೆ ನನ್ನ ತೀರ್ಮಾನ ನಾನು ಮಾಡುತ್ತೇನೆ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಸರ್ಕಾರಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಪಟ್ಟಿಯಿಂದ ಮೂಡಿಗೆರೆ ಕ್ಷೇತ್ರವನ್ನು ಕೈಬಿಟ್ಟಿದ್ದಕ್ಕಾಗಿ ಅಸಮಾಧಾನಗೊಂಡಿದ್ದ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಗುರುವಾರ ವಿಧಾನಸೌಧದ ದಲ್ಲಿ ಧರಣಿ ನಡೆಸಿದ್ದರು. ಆದರೆ, ಧರಣಿಯ ಬೆನ್ನಲ್ಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿತ್ತು.
ಅಲ್ಲದೇ ಬೇರೆ-ಬೇರೆ ಚರ್ಚೆಗಳಿಗೆ ಗ್ರಾಸವಾಗಿತ್ತು. ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನುವ ಮಾತುಗಳು ಜೊರಾಗಿದ್ದವು. ಇದೀಗ ಅದಕ್ಕೆ ಸ್ವತಃ ಎಂಪಿ ಕುಮಾರಸ್ವಾಮಿ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.