* ಯಡಿಯೂರಪ್ಪ, ಬೊಮ್ಮಾಯಿಗೆ ಟಾಂಗ್ ಕೊಟ್ಟ ಬಿಜೆಪಿ ಶಾಸಕ
* ಯಡಿಯೂರಪ್ಪಗೆ ವಯಸ್ಸಾಗಿದೆ ಆರಾಮಾಗಿರ್ಬೇಕು, ಸುಖಾಸುಮ್ಮನೇ ಯಾಕೆ ಹೈರಾಣಾಗುತ್ತಾರೆ ಎಂದ ಯತ್ನಾಳ್
* ಬೊಮ್ಮಾಯಿ ಎರಡು ಕಡೆ ಸ್ಪರ್ಧೆ ಬಗ್ಗೆಯೂ ಟಾಂಗ್
ವಿಜಯಪುರ, (ಮಾ.13): ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ ಎಂದರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಶಾಸಕ ಬಸನಗೌಡ ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ.
ವಿಜಯಪುರದ ಜಿಲ್ಲೆಯ ತಿಕೋಟಾ ತಾಲೂಕಿನ ತೊರವಿ ತಾಂಡಾ ಇಂದು(ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಯಡಿಯೂರಪ್ಪಗೆ ವಯಸ್ಸಾಗಿದೆ ಇನ್ಮೇಲೆ ಆರಾಮಾಗಿರಬೇಕು. ಸುಖಾಸುಮ್ಮನೇ ಯಾಕೆ ಹೈರಾಣಾಗುತ್ತಾರೆ. ಬಿಎಸ್‌ವೈ ನೇತೃತ್ವದಲ್ಲಿ ಬಿಜೆಪಿಗೆ 100-104 ಸೀಟ್ ಬರುತ್ತಿತ್ತು. ಪಕ್ಷದಲ್ಲಿ ಸೆಕೆಂಡ್ ಲೈನ್ ಲೀಡರ್ ಶಿಪ್ ಬಂದಿದೆ. ನಾವೆಲ್ಲಾ ಸೇರಿ 130 ಸೀಟ್ ದಾಟಿಸುತ್ತೇವೆ ಎಂದರು.
ದೇಶದಲ್ಲಷ್ಟೇ ಅಲ್ಲ, ರಾಜ್ಯದಲ್ಲೂ ಕಾಂಗ್ರೆಸ್ ಮುಕ್ತ ಮಾಡುತ್ತೇವೆ: ಬಿಎಸ್ ಯಡಿಯೂರಪ್ಪ
ಪಂಚರಾಜ್ಯ ಚುನಾವಣೆ ಫಲಿತಾಂಶ ಬಳಿಕ ರಾಜ್ಯ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿದೆ. ದೆಹಲಿಯ ಮಟ್ಟದಲ್ಲಿ ಏನು ನಡೆದಿದೆ ಎಂಬ ಬಗ್ಗೆ ಸುಳಿವಿಲ್ಲ. ನಾಯಕತ್ವ ಬದಲಾವಣೆ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ತಾರೆ. ವರಿಷ್ಠರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ಯತ್ನಾಳ್ ಹೇಳಿದರು.
ಸಿಎಂ ಬಸವರಾಜ ಬೊಮ್ಮಾಯಿ 2 ಕ್ಷೇತ್ರಗಳಲ್ಲಿ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಯತ್ನಾಳ್ ಪ್ರತಿಕ್ರಿಯಿಸಿದ್ದು, ಬಿಜೆಪಿಯಲ್ಲಿ ಒಬ್ಬರಿಗೆ ಎರಡು ಕ್ಷೇತ್ರಗಳಿಗೆ ಟಿಕೆಟ್ ಕೊಡಲ್ಲ. ಮೋದಿಗೆ ಒಮ್ಮೆ 2 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಅವಕಾಶ ನೀಡಿದ್ದರು. ಇದನ್ನು ಬಿಟ್ಟರೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಅವಕಾಶ ನೀಡಿಲ್ಲ. ಸಿಎಂ ಬೊಮ್ಮಾಯಿ ಸಹ ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ. ಒಂದೇ ಕುಟುಂಬದವರು ಸಂಸದ, ಶಾಸಕ, ಜಿ.ಪಂ ಅಧ್ಯಕ್ಷರಾದ್ರೆ ಇವರ ಮನೆ ಮುಂದೆ ಕಾರ್ಯಕರ್ತರು ಗಂಟೆ ಹೊಡೆಯಬೇಕಾ? ಎಂದು ಪ್ರಶ್ನಿಸಿದರು.
ಗಾಂಧಿ ಕುಟುಂಬದ ರಾಜೀನಾಮೆ ಕೇವಲ ನಾಟಕ
ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲು ಹಿನ್ನೆಲೆ, ಸೋನಿಯಾಗಾಂಧಿ, ಪ್ರಿಯಾಂಕ ರಾಜೀನಾಮೆ ಸಲ್ಲಿಸಲಿರುವ ವಿಚಾರದ ಬಗ್ಗೆ ಮಾತನಾಡಿದ ಯತ್ನಾಳ್, ಕಾಂಗ್ರೆಸ್ ನಾಯಕರೆಲ್ಲ ಅವರ ಕಾಲು ಹಿಡಿದು ರಾಜೀನಾಮೆ ಕೊಡಬೇಡಿ ಅನ್ನುತ್ತಾರೆ. ಅವರು ಚಿಂತನೆ ಮಾಡ್ತೀವಿ ಎಂದು ಮುಂದುವರೆಯುತ್ತಾರೆ ಎಂದು ಲೇವಡಿ ಮಾಡಿದರು.
ಇದು ರಾಜೀನಾಮೆ ಪ್ರಹಸನ ಅಷ್ಟೇ. ಹೀನಾಯವಾಗಿ ಸೋತಿದ್ದಾರೆ. ಮರ್ಯಾದೆ ಉಳಿಸಿಕೊಳ್ಳಲು ನಾಟಕ ಮಾಡ್ತಿದ್ದಾರೆ. ಗಾಂಧಿ ಕುಟುಂಬದ ರಾಜೀನಾಮೆ ಕೇವಲ ನಾಟಕ. ಸೋನಿಯಾ, ಪ್ರಿಯಾಂಕಾ, ರಾಹುಲ್ ಗಾಂಧಿ ಬಿಜೆಪಿಯ ಸ್ಟಾರ್ ಪ್ರಚಾರಕರು. ಅವರು ಭಾಷಣ ಮಾಡಿದ್ರೆ ನಮಗೆ ಒದೊಂದು ಪರ್ಸಂಟ್ ಓಟು ಸಿಗುತ್ತೆ. ಬೇರೆಯವರಿಗೆ ಅಧ್ಯಕ್ಷರಾಗಲು ಆಸ್ಪದವೇ ಕೊಡುವುದಿಲ್ಲ ವ್ಯಂಗ್ಯವಾಡಿದರು.