ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ: ಅಭಿಪ್ರಾಯ ಕೇಳಿದ ಅರುಣ್‌ಸಿಂಗ್‌

By Kannadaprabha News  |  First Published Jun 9, 2023, 11:04 AM IST

ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಯಾರಾಗಬೇಕು ಎಂಬುದರ ಬಗ್ಗೆ ಪಕ್ಷದ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ.


ಬೆಂಗಳೂರು (ಜೂ.09): ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಯಾರಾಗಬೇಕು ಎಂಬುದರ ಬಗ್ಗೆ ಪಕ್ಷದ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಗುರುವಾರ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶದ ಪರಾಮರ್ಶೆ ಕುರಿತ ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅರುಣ್‌ ಸಿಂಗ್‌ ಅವರು ಕೆಲವು ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ. ಹಾಗಂತ ಎಲ್ಲ 66 ಶಾಸಕರನ್ನೂ ಕರೆದು ಅಭಿಪ್ರಾಯ ಸಂಗ್ರಹಿಸಿಲ್ಲ. ಬೆಳಗ್ಗೆ ಸಭೆ ಆರಂಭವಾದಾಗ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರು ಈ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದರು. 

ನಿಮ್ಮ ನಾಯಕ ಯಾರಾಗಬೇಕು ಎಂಬ ಬಗ್ಗೆ ಯಾವುದೇ ನಿರ್ದಿಷ್ಟಅಭಿಪ್ರಾಯಗಳಿದ್ದಲ್ಲಿ ಸಭೆಯ ಬಳಿಕ ಅರುಣ್‌ ಸಿಂಗ್‌ ಅವರಿಗೆ ತಿಳಿಸಬಹುದು ಎಂದರು. ಸಭೆಯ ಬಳಿಕ ಕೆಲವು ಶಾಸಕರು ಅರುಣ್‌ ಸಿಂಗ್‌ ಅವರನ್ನು ಭೇಟಿ ಮಾಡಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ ಯತ್ನಾಳ, ಆರ್‌.ಅಶೋಕ್‌, ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರ ಹೆಸರುಗಳು ಪ್ರಸ್ತಾಪವಾಗಿವೆ ಎಂದು ಮೂಲಗಳು ತಿಳಿಸಿವೆ. ಶಾಸಕರ ಅಭಿಪ್ರಾಯಗಳನ್ನು ಪಡೆದಿರುವ ಅರುಣ್‌ ಸಿಂಗ್‌ ಅವರು ದೆಹಲಿಗೆ ತೆರಳಿದ ಬಳಿಕ ಪಕ್ಷದ ವರಿಷ್ಠರ ಬಳಿ ಸಮಾಲೋಚನೆ ನಡೆಸಲಿದ್ದಾರೆ. ನಂತರ ತಿಂಗಳಾಂತ್ಯದಲ್ಲಿ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

Tap to resize

Latest Videos

ಆ.1ರಿಂದ ಪ್ರತಿ ತಿಂಗಳು ಜಿಲ್ಲಾ ಮಟ್ಟದಲ್ಲಿ ಸಚಿವ ಜಮೀರ್‌ ಜನತಾ ದರ್ಶನ

ಬಿಜೆಪಿ ನಾಯಕರ ವಿರುದ್ಧ ಸೋತ ಶಾಸಕರು ಗರಂ: ಆಡಳಿತ ವಿರೋಧಿ ಅಲೆ, ಕಾಂಗ್ರೆಸ್‌ ಪಕ್ಷದ ಗ್ಯಾರಂಟಿಗಳನ್ನು ನಿರ್ಲಕ್ಷಿಸಿದ್ದು ಮತ್ತು ಟಿಕೆಟ್‌ ಹಂಚಿಕೆಯಲ್ಲಿನ ಗೊಂದಲವೇ ನಮ್ಮ ಸೋಲಿಗೆ ಕಾರಣವಾಯಿತು ಎಂದು ಬಿಜೆಪಿ ಪರಾಜಿತ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಡಳಿತ ವಿರೋಧಿ ಅಲೆಯನ್ನು ಗ್ರಹಿಸುವಲ್ಲಿ ನಮ್ಮ ಪಕ್ಷ ವಿಫಲವಾಯಿತು. ಸರ್ಕಾರ ಇದ್ದಾಗ ಅನೇಕ ಬಾರಿ ಶಾಸಕರು ಸಲಹೆಗಳನ್ನು ನೀಡಿದರೂ ಅವುಗಳನ್ನು ಆಡಳಿತ ನಡೆಸುತ್ತಿದ್ದವರು ಸ್ವೀಕರಿಸಲಿಲ್ಲ. ಸರಿಯಾಗಿ ಸ್ಪಂದಿಸಲಿಲ್ಲ. ಶಾಸಕರನ್ನು ಕರೆದು ಜನರ ಮನದಲ್ಲಿ ಯಾವ ಭಾವನೆಯಿದೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಲಿಲ್ಲ ಎಂದು ಕೆಲವು ಹಿರಿಯ ಮಾಜಿ ಶಾಸಕರು ಏರಿದ ಧ್ವನಿಯಲ್ಲಿಯೇ ಮಾತನಾಡಿದರು ಎನ್ನಲಾಗಿದೆ.

ಕಳೆದ ಬಾರಿ ಶಾಸಕರಾಗಿದ್ದ 54 ಮಂದಿ ಚುನಾವಣೆಯಲ್ಲಿ ಸೋಲುಂಡಿದ್ದಾರೆ ಎಂದರೆ ಸರ್ಕಾರದ ಆಡಳಿತ ಜನರಿಗೆ ಎಷ್ಟರ ಮಟ್ಟಿಗೆ ಬೇಸರವಾಗಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್‌ ಪಕ್ಷ ಸತತವಾಗಿ ಭ್ರಷ್ಟಾಚಾರದ ಆರೋಪ ಮಾಡಿದರೂ ಅದಕ್ಕೆ ಸರಿಯಾದ ತಿರುಗೇಟು ನೀಡಲು ಸಚಿವರಾಗಿದ್ದವರು ಹಾಗೂ ಮುಖಂಡರು ವಿಫಲರಾದರು. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿನ ಭ್ರಷ್ಟಾಚಾರಗಳನ್ನು ಮತ್ತು ವೈಫಲ್ಯಗಳನ್ನು ಪ್ರಮುಖವಾಗಿ ಎತ್ತಿ ತೋರಿಸುವ ಬದಲು ಮೇಲು ಮಟ್ಟದ ಟೀಕೆಗಳನ್ನು ಮಾಡಿದ್ದು ಪರಿಣಾಮ ಬೀರಲಿಲ್ಲ. 

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರಗಳ ಬಗ್ಗೆ ದಾಖಲೆಗಳ ಸಮೇತ ಹತ್ತಾರು ದೂರುಗಳನ್ನು ನಮ್ಮ ಪಕ್ಷದ ಮುಖಂಡರೇ ದಾಖಲಿಸಿದ್ದರೂ ಅವುಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿಲ್ಲ. ಪರಿಣಾಮ ಬಿಜೆಪಿ ಸರ್ಕಾರವೇ ಭ್ರಷ್ಟಾಚಾರ ನಡೆಸಿರಬಹುದು ಎಂಬ ಅನುಮಾನ ದಿನೇ ದಿನೇ ಜನರಲ್ಲಿ ದಟ್ಟವಾಗುತ್ತಾ ಹೋಯಿತು. ನಮ್ಮ ಸರ್ಕಾರ ಹಲವು ಒಳ್ಳೆಯ ಕಾರ್ಯಕ್ರಮಗಳನ್ನು ನೀಡಿದರೂ ಅವುಗಳನ್ನು ಈ ಭ್ರಷ್ಟಾಚಾರದ ಆರೋಪ ನುಂಗಿ ಹಾಕಿತು ಎಂದು ಮಾಜಿ ಶಾಸಕರೊಬ್ಬರು ಅಲವತ್ತುಕೊಂಡರು ಎಂದು ತಿಳಿದು ಬಂದಿದೆ.

ಆ.17/18ಕ್ಕೆ ಬೆಳಗಾವಿಯಲ್ಲಿ ‘ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ: ಸಿಎಂ ಸಿದ್ದರಾಮಯ್ಯ

ಮೇಲಾಗಿ, ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷ ನೀಡಿದ ಐದು ಗ್ಯಾರಂಟಿಗಳನ್ನು ಜನರು ನಂಬಿದರು. ಚುನಾವಣೆಗೆ ಹಲವು ದಿನಗಳ ಮೊದಲೇ ಒಂದೊಂದಾಗಿ ಗ್ಯಾರಂಟಿಗಳನ್ನು ಪ್ರಕಟಿಸುವ ಮೂಲಕ ಕಾಂಗ್ರೆಸ್‌ ಪಕ್ಷ ಜನರ ಒಲವು ಗಳಿಸಿತು. ಆದರೆ, ನಮ್ಮ ಬಿಜೆಪಿ ಮತದಾನಕ್ಕೆ ದಿನಗಣನೆ ಆರಂಭವಾದಾಗ ಪ್ರಣಾಳಿಕೆ ಬಿಡುಗಡೆ ಮಾಡಿತು. ಅದು ಜನರಿಗೆ ಸರಿಯಾಗಿ ತಲುಪಲೂ ಇಲ್ಲ. ಅಷ್ಟುಹೊತ್ತಿಗಾಗಲೇ ಕಾಂಗ್ರೆಸ್‌ ಗ್ಯಾರಂಟಿಗಳು ಜನರ ಮನಸ್ಸಿನಲ್ಲಿ ಅಚ್ಚೊತ್ತಿದ್ದವು ಎಂದು ಮತ್ತೊಬ್ಬ ಪರಾಜಿತ ಅಭ್ಯರ್ಥಿ ಹೇಳಿದರು ಎಂದು ಮೂಲಗಳು ತಿಳಿಸಿವೆ.

click me!