
ಬೆಂಗಳೂರು (ಮಾ.11): ವಿರೋಧ ಪಕ್ಷ ಬಿಜೆಪಿ ನಾಯಕರಿಗೆ ಮಾನ ಮರ್ಯಾದೆ ಇದ್ದರೆ ಕೇಂದ್ರ ಸರ್ಕಾರದಿಂದ ಬರ ಪರಿಹಾರ ಕೊಡಿಸಲಿ. ಕಪಟ ನಾಟಕ ಬಿಟ್ಟು ರಾಜ್ಯದ ಜನತೆ ಪರ ಕೆಲಸ ಮಾಡಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ. ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ಪರಿಹಾರ ಬಿಡುಗಡೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರಿಗೆ ಮಾನ ಮರ್ಯಾದೆ ಎಂಬುದು ಇಲ್ಲ. ಮೊದಲು ಕೇಂದ್ರದಿಂದ ಬರ ಪರಿಹಾರ ಕೊಡಿಸಲು ಕೇಂದ್ರವನ್ನು ಒತ್ತಾಯ ಮಾಡಲಿ. ನರೇಗಾ ಯೋಜನೆಯಲ್ಲಿ ಮಾನವ ಕೂಲಿ ದಿನಗಳನ್ನು 100 ರಿಂದ 150ಕ್ಕೆ ಏರಿಸಲಿ. ಅದನ್ನು ಬಿಟ್ಟು ರಾಜಕೀಯ ಹೇಳಿಕೆ ನೀಡುವುದು ಬೇಡ. ಕಪಟ ನಾಟಕ ಬಿಟ್ಟು ಈ ಕೆಲಸಗಳನ್ನು ಮಾಡಲಿ ಎಂದು ಆಗ್ರಹಿಸಿದರು.
ನಮಗೇ ನೀರಿಲ್ಲ, ತಮಿಳುನಾಡಿಗೆ ಎಲ್ಲಿಂದ ನೀರು ಕೊಡೋಣ: ಡಿ.ಕೆ.ಶಿವಕುಮಾರ್
ಬಿಜೆಪಿಯಿಂದ ಅನೇಕರು ಕಾಂಗ್ರೆಸ್ ಬರುತ್ತಾರೆ: ಕೇವಲ ಇಬ್ಬರು ಮೂವರಲ್ಲ, ಬಿಜೆಪಿಯಿಂದ ಅನೇಕ ಜನ ಕಾಂಗ್ರೆಸ್‌ಗೆ ಸೇರಲಿದ್ದಾರೆ. ಈಗಾಗಲೇ ಹಲವರು ನಮ್ಮ ಸಂಪರ್ಕದಲ್ಲಿದ್ದು, ಸೂಕ್ತ ಸಮಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್ ಅವರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕೇಳಿದಾಗ, ಕೇವಲ ಇಬ್ಬರು ಮೂವರಲ್ಲ, ಬಿಜೆಪಿಯಿಂದ ಅನೇಕ ಜನ ಕಾಂಗ್ರೆಸ್‌ಗೆ ಆಗಮಿಸಲಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು. ಬಿಜೆಪಿಯಲ್ಲಿದ್ದು ಯಾವುದೇ ಪ್ರಯೋಜನವಿಲ್ಲ ಎಂಬ ಅರಿವು ಅನೇಕರಿಗೆ ಆಗಿದೆ. ಹೀಗಾಗಿ ಕಾಂಗ್ರೆಸ್‌ನತ್ತ ಮುಖ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಿದರು.
ಬಿಜೆಪಿ ನಾಯಕರ ತಾಳಕ್ಕೆ ಜೆಡಿಎಸ್ ಕುಣಿತ: ಸಿಎಂ ಸಿದ್ದರಾಮಯ್ಯ ಆರೋಪ
ಶೀಘ್ರವೇ ಫ್ಲಡ್ ಗೇಟ್ ಓಪನ್ ಆಗುತ್ತೆ ಎಂಬ ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆ ಬಗ್ಗೆ ಕೇಳಿದಾಗ, ಈ ತಿಂಗಳು ಕಳೆದ ಮೇಲೆ ಶೆಟ್ಟರ್ ಅವರಿಂದ ಪಶ್ಚಾತ್ತಾಪದ ಹೇಳಿಕೆ ಹೊರಬರುತ್ತೆ ನೋಡ್ತಾ ಇರಿ. ಬಿಜೆಪಿಯಲ್ಲಿ ಅವರನ್ನು ಕಡೆಗಣಿಸಲಾಗಿತ್ತು. ಆದರೆ ನಾವು ಅವರನ್ನು ಕರೆತಂದು ಟಿಕೆಟ್ ನೀಡಿದೆವು. ಚುನಾವಣೆಯಲ್ಲಿ ಸೋತರೂ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದೆವು. ಆದರೂ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇನ್ನು ಕೆಲ ದಿನಗಳಲ್ಲಿ ಅವರು ಪಶ್ಚಾತ್ತಾಪ ಪಡಲಿದ್ದಾರೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.